ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಒಳಮೀಸಲಾತಿ ಶಿಫಾರಸು ವಾಪಸ್‌ಗೆ ಪಟ್ಟು

ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವಿರೋಧ
Published 6 ಆಗಸ್ಟ್ 2023, 15:51 IST
Last Updated 6 ಆಗಸ್ಟ್ 2023, 15:51 IST
ಅಕ್ಷರ ಗಾತ್ರ

ಬೆಂಗಳೂರು: ‘ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿ ಕುರಿತ ಚರ್ಚೆಯನ್ನು ಸಚಿವರು ಹಾಗೂ ವರದಿ ಪರ ಹೋರಾಟಗಾರರು ತಕ್ಷಣವೇ ನಿಲ್ಲಿಸಬೇಕು. ಅಲ್ಲದೇ, ಒಳಮೀಸಲಾತಿಗೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರ ಮಾಡಿದ್ದ ಶಿಫಾರಸುಗಳನ್ನೂ ವಾಪಸ್‌ ಪಡೆಯಬೇಕು’ ಎನ್ನುವ ನಿರ್ಣಯವನ್ನು ನಗರದಲ್ಲಿ ಭಾನುವಾರ ನಡೆದ ಮೀಸಲಾತಿ ಸಂರಕ್ಷಣಾ ರಾಜ್ಯ ಸಮಾವೇಶದಲ್ಲಿ ಕೈಗೊಳ್ಳಲಾಯಿತು.

ಬೋವಿ, ಕೊರಚ, ಕೊರಮ, ಲಂಬಾಣಿ ಸಮುದಾಯಕ್ಕೆ ತೊಂದರೆ ಎದುರಾದರೆ ಒಗ್ಗಟ್ಟಿನ ಹೋರಾಟ ರೂಪಿಸಬೇಕು ಎಂದು ಮುಖಂಡರು ಕರೆ ನೀಡಿದರು.

ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ರಾಜ್ಯ ಸಮಿತಿ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಒಕ್ಕೂಟದ ಗೌರವ ಅಧ್ಯಕ್ಷ ಅರವಿಂದ ಲಿಂಬಾವಳಿ ಮಾತನಾಡಿ, ‘ಪರಿಶಿಷ್ಟ ಜಾತಿ ಪಟ್ಟಿಯಿಂದ ನಮ್ಮ ಸಮುದಾಯವನ್ನು ತೆಗೆದು ಹಾಕುವ ಹುನ್ನಾರಗಳು ನಡೆಯುತ್ತಿವೆ. ಹಿಂದೆ ಷಡ್ಯಂತ್ರ ನಡೆಸಿದ್ದವರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಮುದಾಯದ ಜನರೇ ತಕ್ಕಪಾಠ ಕಲಿಸಿದ್ದಾರೆ. ಈ ಸರ್ಕಾರವೂ ಅದೇ ನಿಟ್ಟಿನಲ್ಲಿ ಸಾಗುತ್ತಿದೆ. ಅದರ ಪ್ರತಿಫಲ ಅನುಭವಿಸಬೇಕಾದೀತು’ ಎಂದು ಎಚ್ಚರಿಸಿದರು.

‘ಬೋವಿ ಸಮಾಜದ ಜನರು ಕಲ್ಲು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸದಾ ಎಚ್ಚರವಾಗಿರುವ ಸಮಾಜ ಎಂಬುದನ್ನು ಸರ್ಕಾರವು ಮರೆಯಬಾರದು’ ಎಂದು ಹೇಳಿದರು.

‘ಆಯೋಗದ ವರದಿ ಜಾರಿಗೆ ಈಗಿನ ಸರ್ಕಾರವೂ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಸಮಾಜಕ್ಕೆ ಪೆಟ್ಟು ಬಿದ್ದರೆ ಮತ್ತೆ ಹೋರಾಟ ನಡೆಸಲಾಗುವುದು. ಮೀಸಲಾತಿ ಪಟ್ಟಿಯಿಂದ ತೆಗೆದು ಹಾಕಲು ಬಿಡುವುದಿಲ್ಲ. ಕೇಂದ್ರದ ಎಸ್‌.ಸಿ, ಎಸ್‌.ಟಿ ಆಯೋಗಕ್ಕೂ ಸಮಾಜಕ್ಕೆ ಆಗಿರುವ ತೊಂದರೆಯನ್ನು ತಿಳಿಸಲಾಗಿದೆ’ ಎಂದು ಹೇಳಿದರು.

‘ಆಂಧ್ರಪ್ರದೇಶದಲ್ಲಿ ಒಳಮೀಸಲಾತಿ ಪ್ರಶ್ನಿಸಿದಾಗ ಸುಪ್ರೀಂ ಕೋರ್ಟ್ ಇದಕ್ಕೆ ಅವಕಾಶ ಕಲ್ಪಿಸಿಲ್ಲ. ಈ ಪ್ರಕರಣದ ಬಗ್ಗೆಯೂ ಉನ್ನತ ಸಮಿತಿ ರಚಿಸಿ ವಿಚಾರಣೆ ನಡೆಸಬೇಕಿದೆ. ಅಗತ್ಯ ಬಿದ್ದರೆ ಕೇಂದ್ರಕ್ಕೆ ನಿಯೋಗ ತೆರಳಲು ಸಿದ್ಧ’ ಎಂದು ಘೋಷಿಸಿದರು.

ವಿಧಾನ ಪರಿಷತ್‌ ಸದಸ್ಯ ಪ್ರಕಾಶ್ ರಾಥೋಡ್ ಮಾತನಾಡಿ, ‘ಪರಿಶಿಷ್ಟರ ಪಟ್ಟಿಯಲ್ಲಿ 101 ಉಪ ಜಾತಿಗಳಿವೆ. ಶೋಷಿತ ಸಮುದಾಯವನ್ನು ಮೀಸಲಾತಿಯಿಂದ ಹೊರಗೆ ತೆಗೆಯುವ ಹುನ್ನಾರ ನಡೆಯುತ್ತಿದೆ. ನಮ್ಮವರೇ ಷಡ್ಯಂತ್ರ ನಡೆಸುತ್ತಿದ್ದಾರೆ’ ಎಂದು ದೂರಿದರು.

‘ಆಯೋಗದ ವರದಿ ಅವೈಜ್ಞಾನಿಕವಾಗಿದೆ. ಕಾಂಗ್ರೆಸ್ ಸರ್ಕಾರವು ವರದಿ ಜಾರಿಗೆ ಮುಂದಾದರೂ ಹೋರಾಟ ನಡೆಸುತ್ತೇವೆ. ಲಂಬಾಣಿ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಅದು ಸಮುದಾಯಕ್ಕೆ ಬೇಸರ ತಂದಿದೆ’ ಎಂದರು.

ಒಕ್ಕೂಟದ ರಾಜ್ಯ ಅಧ್ಯಕ್ಷ ಡಾ.ರವಿ ಮಾಕಳಿ ಮಾತನಾಡಿ, ‘ಯಾವುದೇ ಸಮಸ್ಯೆ ಎದುರಾದರೂ ಒಗ್ಗಟ್ಟಿನಿಂದ ಹೋರಾಟ ನಡೆಸೋಣ. ಒಗ್ಗಟ್ಟಿದ್ದರೆ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ’ ಎಂದರು.

ಮಹಿಳೆಯರನ್ನು ಅಲೆಮಾರಿ ಮಾಡಿದ ಸರ್ಕಾರ

‘ರಾಜ್ಯ ಸರ್ಕಾರವು ‘ಶಕ್ತಿ’ ಯೋಜನೆ ಅಡಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಮಹಿಳೆಯರನ್ನು ಅಲೆಮಾರಿಗಳನ್ನಾಗಿ ಮಾಡಿದೆ. ಹೀಗಾಗಿ ಅವರು ಎಲ್ಲೆಡೆ ಸುತ್ತಾಟ ನಡೆಸುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಹೇಳಿದರು. ‘ಗ್ಯಾರಂಟಿ ಯೋಜನೆಗೆ ನಮ್ಮ ವಿರೋಧವಿಲ್ಲ. ಐದು ವರ್ಷವೂ ಈ ಯೋಜನೆ ಅನುಷ್ಠಾನಕ್ಕೆ ತಂದು ಮತ್ತೆ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರಲಿ. ಆದರೆ ಎಸ್‌ಸಿಎಸ್‌ಪಿ–ಟಿಎಸ್‌ಪಿ ಯೋಜನೆಗೆ ಮೀಸಲಿಟ್ಟಿದ್ದ ₹ 11 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡುತ್ತಿರುವುದು ಸಲ್ಲದು. ಆ ಅನುದಾನವನ್ನು ಬೋವಿ ಕೊರಮ ಕೊರಚ ಅಲೆಮಾರಿ ಸಮುದಾಯದ ಅಭಿವೃದ್ಧಿಗೆ ಬಳಸಬೇಕು’ ಎಂದು ಕೋರಿದರು.

ಮುನಿಯಪ್ಪ ಹೇಳಿಕೆಗೆ ಕಾಂಗ್ರೆಸ್‌ ಎಂಎಲ್‌ಸಿ ಕಿಡಿ

‘ಕಾನೂನು ಸಲಹೆ ಪಡೆದು ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ಅವರು ನೀಡಿರುವ ಹೇಳಿಕೆ ಸರಿಯಲ್ಲ. ಅವರ ಹೇಳಿಕೆಯನ್ನು ವಿರೋಧಿಸುತ್ತೇನೆ’ ಎಂದು ವಿಧಾನ ಪರಿಷತ್‌ ಸದಸ್ಯ ಪ್ರಕಾಶ್‌ ರಾಥೋಡ್‌ ಹೇಳಿದರು.

‘ಅಧಿಕಾರದಲ್ಲಿ ಯಾವುದೇ ಸರ್ಕಾರ ಇರಲಿ. ಸಮುದಾಯವನ್ನು ಕಡೆಗಣಿಸಿದರೆ ಸುಮ್ಮನಿರುವುದಿಲ್ಲ. ಸಮುದಾಯದ ಬೇಡಿಕೆ ಈಡೇರಿಸುವಂತೆ ಶೀಘ್ರದಲ್ಲೇ ಮುಖ್ಯಮಂತ್ರಿ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT