ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡೇತರ ಸೇವೆಗೆ ಸಜ್ಜಾಗುತ್ತಿದೆ ವಿಕ್ಟೋರಿಯಾ

ಕೋವಿಡ್ ರೋಗಿಗಳ ಸಂಖ್ಯೆ ಇಳಿಕೆಯಿಂದಾಗಿ ಸೇವೆ ವಿಸ್ತರಣೆ
Last Updated 17 ಡಿಸೆಂಬರ್ 2020, 21:17 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳು ಇಳಿಕೆಯಾಗುತ್ತಿರುವ ಕಾರಣ ವಿಕ್ಟೋರಿಯಾ ಆಸ್ಪತ್ರೆಯು ಕೋವಿಡೇತರ ಸೇವೆ ಪ್ರಾರಂಭಿಸಲು ಸಜ್ಜಾಗುತ್ತಿದೆ. ಡಿಸೆಂಬರ್ ಕೊನೆಯ ವಾರ ಅಥವಾ ಹೊಸ ವರ್ಷಕ್ಕೆ ಎಲ್ಲ ರೀತಿಯ ಚಿಕಿತ್ಸೆ ಪುನರಾರಂಭ ಮಾಡಲಾಗುತ್ತದೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಸರ್ಕಾರವು ವಿಕ್ಟೋರಿಯಾದಲ್ಲಿದ್ದ ರೋಗಿಗಳನ್ನು ಜಯನಗರ ಸಾರ್ವಜನಿಕ ಆಸ್ಪತ್ರೆ, ಕೆ.ಸಿ. ಜನರಲ್, ಸಿ.ವಿ. ರಾಮನ್ ಸೇರಿದಂತೆ ನಗರದ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಿತ್ತು. ಒಂದೇ ಕಡೆ ಕೊರೊನಾ ಸೋಂಕಿತರನ್ನು ದಾಖಲಿಸಿಕೊಂಡಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯ ಎಂಬ ಕಾರಣಕ್ಕೆ ವಿಕ್ಟೋರಿಯಾದಲ್ಲಿ 550 ಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗೆ ಮೀಸಲಿಟ್ಟು, 9 ತಿಂಗಳಿನಿಂದ ಚಿಕಿತ್ಸೆ ಒದಗಿಸಲಾಗುತ್ತಿದೆ. ಈಗ ಕೋವಿಡ್ ಪೀಡಿತರ ಸಂಖ್ಯೆ ಇಳಿಕೆಯಾಗಿರುವುದರಿಂದ ಕೆಲ ದಿನಗಳಿಂದ ಅಲ್ಲಿ ಬಹುತೇಕ ಹಾಸಿಗೆಗಳು ಖಾಲಿಯಿವೆ.

ವಿಕ್ಟೋರಿಯಾದ ಆವರಣದಲ್ಲಿರುವ ಆಸ್ಪತ್ರೆಗಳಲ್ಲಿ ವಾಣಿವಿಲಾಸ ಮತ್ತು ನೆಫ್ರೋ ಯುರಾಲಜಿ ಸಂಸ್ಥೆಯಲ್ಲಿ ಮಾತ್ರ ಕೋವಿಡೇತರ ಸೇವೆ ಮುಂದುವರಿಸಲಾಗಿತ್ತು. ಎಮರ್ಜೆನ್ಸಿ ಟ್ರಾಮಾ ಸೆಂಟರ್, ಮಿಂಟೊ ಕಣ್ಣಿನ ಆಸ್ಪತ್ರೆ ಹಾಗೂ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಆಸ್ಪತ್ರೆಯಲ್ಲಿ ಕೂಡ ಕೋವಿಡ್ ಪೀಡಿತರಿಗೆ ಚಿಕಿತ್ಸೆಗೆ ಹಾಗೂ ಆರೋಗ್ಯ ಸಿಬ್ಬಂದಿಯನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲು ಕೆಲ ಹಾಸಿಗೆಗಳನ್ನು ಮೀಸಲಿಟ್ಟು, ಕೋವಿಡೇತರ ಸೇವೆಗಳನ್ನು ಸ್ಥಗಿತ ಮಾಡಲಾಗಿತ್ತು. ಕೋವಿಡ್ ಪ್ರಕರಣಗಳು ಇಳಿಕೆಯಾಗಿದ್ದರಿಂದ ಮಿಂಟೊ ಕಣ್ಣಿನ ಆಸ್ಪತ್ರೆ ಹಾಗೂ ಪಿಎಂಎಸ್‌ಎಸ್‌ವೈ ಆಸ್ಪತ್ರೆಯಲ್ಲಿ ಎಲ್ಲ ವೈದ್ಯಕೀಯ ಸೇವೆಗಳನ್ನು ಪ್ರಾರಂಭಿಸಲಾಗಿದೆ.

250 ಹಾಸಿಗೆಗಳು ಮೀಸಲು: ವಿಕ್ಟೋರಿಯಾ ಹಾಗೂ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಸದ್ಯ 93 ಕೋವಿಡ್‌ ಸೋಂಕಿತರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ, ಟ್ರಾಮಾ ಕೇರ್‌ನ ರೋಗಿಗಳನ್ನು ಶತಮಾನೋತ್ಸವ ಬ್ಲಾಕ್‌ ಸೇರಿದಂತೆ ವಿವಿಧ ಕಟ್ಟಡಗಳಿಗೆ ಸ್ಥಳಾಂತರಿಸಿ, ದುರಸ್ತಿ ಕಾರ್ಯ ನಡೆಸಲಾಗುತ್ತಿದೆ.

‘ಟ್ರಾಮಾ ಕೇರ್ ಸೆಂಟರ್‌ನಲ್ಲಿ ದುರಸ್ತಿ ಕಾರ್ಯ ಪೂರ್ಣಗೊಂಡ ಬಳಿಕ ಅಲ್ಲಿ ಕೋವಿಡ್ ಪೀಡಿತರಿಗೆ 250 ಹಾಸಿಗೆಗಳನ್ನು
ಮೀಸಲಿರಿಸಲಾಗುತ್ತದೆ. ವಿಕ್ಟೋರಿಯಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ಸೋಂಕಿತರನ್ನೂ ಅಲ್ಲಿಗೆ ಸ್ಥಳಾಂತರ ಮಾಡಲಾಗುತ್ತದೆ. ಹೊಸ ವರ್ಷದೊಳಗೆ ವಿಕ್ಟೋರಿಯಾದಲ್ಲಿ ಕೋವಿಡೇತರ ಚಿಕಿತ್ಸೆಗಳನ್ನು ಪ್ರಾರಂಭಿಸಲು ನಿರ್ಧರಿಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.

ಎರಡು ಸೇವೆ ನೀಡಬೇಕಾದ ಒತ್ತಡ
ಕೋವಿಡ್ ಚಿಕಿತ್ಸೆಯಲ್ಲಿ ನಿರತರಾದ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿಯು ಕೋವಿಡ್ ಚಿಕಿತ್ಸಾ ಮಾರ್ಗಸೂಚಿಯ ಪ್ರಕಾರ 7 ದಿನಗಳು ಮನೆ ಅಥವಾ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಬೇಕಾಗುತ್ತದೆ. ವೈಯಕ್ತಿಕ ಸುರಕ್ಷಾ ಸಾಧನಗಳನ್ನು (ಪಿಪಿಇ ಕಿಟ್) ಧರಿಸಿ ಸತತ 6ರಿಂದ 8 ಗಂಟೆ ಸೇವೆ ಸಲ್ಲಿಸುವ ಅವರು, ಕಡ್ಡಾಯವಾಗಿ ಪ್ರತ್ಯೇಕ ವಾಸಕ್ಕೆ ಒಳಪಡಬೇಕು. ಆದರೆ, ವಿಕ್ಟೋರಿಯಾದಲ್ಲಿ ಕೋವಿಡೇತರ ಚಿಕಿತ್ಸೆ ಪ್ರಾರಂಭಿಸಿದ ಬಳಿಕ ಕೋವಿಡ್ ಹಾಗೂ ಕೋವಿಡೇತರ ಸೇವೆಗಳಲ್ಲಿ ತೊಡಗಬೇಕು ಎಂದು ಆರೋಗ್ಯ ಸಿಬ್ಬಂದಿಗೆ ವೈದ್ಯಾಧಿಕಾರಿಗಳು ಸೂಚಿಸಿದ್ದಾರೆ.

‘ಇಷ್ಟು ದಿನ ಕೋವಿಡ್ ಸೇವೆಯಲ್ಲಿ ನಿರತರಾಗಿದ್ದೆವು. ಕೆಲ ದಿನಗಳಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ ಇಳಿಕೆಯಾಗಿದ್ದರಿಂದ ಕಾರ್ಯದೊತ್ತಡ ಸ್ವಲ್ಪ ಕಡಿಮೆಯಾಗಿತ್ತು. ಆದರೆ, ವಿಕ್ಟೋರಿಯಾದಲ್ಲಿ ಕೋವಿಡೇತರ ಚಿಕಿತ್ಸೆ ಪ್ರಾರಂಭಿಸದ ಬಳಿಕ ಎರಡೂ ಸೇವೆಗಳಲ್ಲಿ ಒಂದೊಂದು ವಾರ ತೊಡಗಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳು ಸೂಚಿಸಿದ್ದಾರೆ. ಇನ್ನು ಮುಂದೆ ಕ್ವಾರಂಟೈನ್‌ ಇರುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದಾಗಿ ಇನ್ನಷ್ಟು ಒತ್ತಡದಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ಶುಶ್ರೂಷಕರೊಬ್ಬರು ತಿಳಿಸಿದರು.

*
ವಿಕ್ಟೋರಿಯಾದಲ್ಲಿ ಆದಷ್ಟು ಬೇಗ ಕೋವಿಡೇತರ ಸೇವೆಗಳನ್ನು ಪ್ರಾರಂಭಿಸಲಾಗುವುದು. ಸದ್ಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
-ಪಿ.ಜಿ. ಗಿರೀಶ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT