ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇವಪುರ: ಅಂಕೆಗೆ ಸಿಗುತ್ತಿಲ್ಲ ಸಂಚಾರ ದಟ್ಟಣೆ

ಐ.ಟಿ ಕಂಪನಿಗಳು ಬೆಳೆದಷ್ಟು ವೇಗದಲ್ಲಿ ಅಭಿವೃದ್ಧಿ ಕಾಣದ ಮೂಲಸೌಕರ್ಯ
Last Updated 4 ನವೆಂಬರ್ 2021, 22:00 IST
ಅಕ್ಷರ ಗಾತ್ರ

ಬೆಂಗಳೂರು: ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರದ ಕಂಪನಿಗಳು ಬೆಳೆದಂತೆ ಬೆಂಗಳೂರಿನ ಹೊರ ವಲಯ, ಅದರಲ್ಲೂ ಮಹಾದೇವಪುರ ಸುತ್ತಮುತ್ತಲ ಪ್ರದೇಶ ಅಂಕೆಗೆ ಸಿಗದೆ ಬೆಳೆಯುತ್ತಿದೆ. ಆದರೆ, ಅಲ್ಲಿನ ಮೂಲಸೌಕರ್ಯ ಮಾತ್ರ ಹಿಂದೆ ಇದ್ದಷ್ಟೇ ಇದೆ. ಈ ಅಸಮತೋಲನದಿಂದಾಗಿ ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ದಿನದಿಂದ ದಿನಕ್ಕೆ ರಕ್ಕಸ ರೂಪದಲ್ಲಿ ಬೆಳೆಯುತ್ತಿದೆ.‌

ಐ.ಟಿ ಕಂಪನಿಗಳು ನೆಲೆಯೂರಿದ ಆರಂಭದಲ್ಲಿ ಬೆಳ್ಳಂದೂರು, ಮಾರತಹಳ್ಳಿ, ವರ್ತೂರು ಭಾಗದ ಜನ ಈ ಪ್ರದೇಶವೂ ಅಭಿವೃದ್ಧಿಯಾದೀತು ಎಂಬ ಕನಸು ಕಂಡಿದ್ದರು. ಐ.ಟಿ ಕಂಪನಿಗಳು ನೆಲೆಯೂರಿದಷ್ಟು ವೇಗದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಣಲಿಲ್ಲ. ರಸ್ತೆಗಳು ಹಿಗ್ಗಲಿಲ್ಲ, ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲಿಲ್ಲ. ಪರಿಣಾಮವಾಗಿ ಐ.ಟಿ ಕಂಪನಿ ಉದ್ಯೋಗಿಗಳ ಜೊತೆಗೆ ಸುತ್ತಮುತ್ತಲ ಜನರೂ ಈಗ ತೊಂದರೆ ಅನುಭವಿಸುತ್ತಿದ್ದಾರೆ.

ಬೆಳ್ಳಂದೂರು, ವರ್ತೂರು, ಮಾರತಹಳ್ಳಿ ವಾರ್ಡ್‌ಗಳು ಬೆಂಗಳೂರಿನಲ್ಲೇ ಅಂತ್ಯಂತ ವೇಗವಾಗಿ ಬೆಳೆಯುತ್ತಿರುವ ವಾರ್ಡ್‌ಗಳು ಎಂದು ಬಿಬಿಎಂಪಿ ಅಧಿಕಾರಿಗಳೇ ಗುರುತಿಸಿದ್ದಾರೆ. ಬೇರೆ ವಾರ್ಡ್‌ಗಳಿಗೆ ಹೋಲಿಸಿದರೆ ಶೇ 130ರಷ್ಟು ವೇಗದಲ್ಲಿ ಬೆಳೆಯುತ್ತಿರುವ ವಾರ್ಡ್‌ಗಳಿವು.

ಮಾಹಿತಿ ತಂತ್ರಜ್ಞಾನದ 11 ವಿಶೇಷ ಆರ್ಥಿಕ ವಲಯಗಳನ್ನು ಈ ವಾರ್ಡ್‌ಗಳು ಹೊಂದಿವೆ. ಅದರಲ್ಲಿ 7 ವಿಶೇಷ ಆರ್ಥಿಕ ವಲಯಗಳು (ಎಸ್‌ಇಜೆಡ್‌) ಬೆಳ್ಳಂದೂರು ವಾರ್ಡ್‌ ಒಂದರಲ್ಲೇ ಇವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದಲ್ಲೇ ಗುರುತಿಸಿಕೊಂಡಿರುವ ಪ್ರದೇಶವಿದು. ಐ.ಟಿ ಉತ್ಪನ್ನಗಳ ರಫ್ತಿನಿಂದ ದೇಶಕ್ಕೆ ಬರುವ ವರಮಾನದಲ್ಲಿ ಶೇ 30ರಷ್ಟು ಪಾಲು ಈ ಪ್ರದೇಶದ ಕಂಪನಿಗಳದ್ದು.

ಇಲ್ಲಿನ ಐ.ಟಿ ಕಂಪನಿಗಳಲ್ಲಿ ದೇಶ, ವಿದೇಶಗಳಿಂದ ಉದ್ಯೋಗಿಗಳು ಬಂದು ಈ ಪರಿಸರದಲ್ಲಿ ನೆಲೆಸಿದ್ದಾರೆ. ಆದ್ದರಿಂದ ಈ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ವಸತಿ ಬಡಾವಣೆಗಳು, ಅಪಾರ್ಟ್‌ಮೆಂಟ್ ಸಮುಚ್ಚಯಗಳು ತಲೆ ಎತ್ತಿವೆ. ಆದರೆ ಅದಕ್ಕೆ ತಕ್ಕಂತೆ ಮೂಲ ಸೌಕರ್ಯ ಇಲ್ಲ. ಇಲ್ಲಿನ ಜನರನ್ನು ಪ್ರಮುಖವಾಗಿ ಕಾಡುತ್ತಿರುವುದು ಸಂಚಾರ ದಟ್ಟಣೆಯ ಸಮಸ್ಯೆ. ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಕೆ.ಆರ್.ಪುರದವರೆಗೆ ಹೊರ ವರ್ತುಲ ರಸ್ತೆ, ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್‌ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿವಾರಿಸಿಕೊಂಡು ಮುಂದಕ್ಕೆ ಸಾಗುವ ವಾಹನ ಸವಾರರಿಗೆ ನರಕದ ನೆನಪಾಗುತ್ತದೆ.

ಅದರಲ್ಲೂ ಯಾವುದೇ ಐ.ಟಿ ಕಂಪನಿಯ ಕಚೇರಿ ತಲುಪಬೇಕಾದರೂ ಹೊರ ವರ್ತುಲ ರಸ್ತೆಯನ್ನೇ ಬಳಸಬೇಕು. ಈ ರಸ್ತೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆ 10 ಲಕ್ಷಕ್ಕೂ ಹೆಚ್ಚು ಜನ ಹಾದು ಹೋಗುತ್ತಾರೆ. ಕೋವಿಡ್ ಸಂದರ್ಭದಲ್ಲಿ ಐ.ಟಿ ಕಂಪನಿಗಳ ಉದ್ಯೋಗಿಗಳು ಬಹುತೇಕ ಮನೆಯಿಂದಲೇ ಕೆಲಸ ಮಾಡುತ್ತಿದ್ದರಿಂದ ಸಂಚಾರ ದಟ್ಟಣೆ ಕೊಂಚ ಕಡಿಮೆಯಾಗಿತ್ತು.

ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಬಳಿಕ ಐ.ಟಿ ಕಂಪನಿಗಳು ಕ್ರಮೇಣ ಕಚೇರಿಯಿಂದಲೇ ಕೆಲಸ ಆರಂಭಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಮತ್ತೆ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚಾಗುತ್ತಲೇ ಇದೆ. ವಾಹನ ಸವಾರರು ನಿತ್ಯ ಗಂಟೆಗಟ್ಟಲೆ ಈ ರಸ್ತೆಯಲ್ಲಿ ಸಿಲುಕಿ ನರಳುತ್ತಿದ್ದಾರೆ.

‘ಈ ಭಾಗದಿಂದ ಬರುತ್ತಿರುವ ವರಮಾನಕ್ಕೆ ತಕ್ಕಂತೆ ಮೂಲ ಸೌಕರ್ಯವನ್ನು ಸರ್ಕಾರ ಒದಗಿಸದೆ ಇರುವುದು ಇಷ್ಟೆಲ್ಲಾ ಅವಾಂತರಗಳಿಗೆ ಕಾರಣ. ನವಿ ಮುಂಬೈ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಮುನ್ನೋಟ ಹೊಂದಿರುವುದಾಗಿ ಅಧಿಕಾರಿಗಳು ಬಾಯಿ ಮಾತಿನಲ್ಲಷ್ಟೇ ಹೇಳುತ್ತಿದ್ದಾರೆ. ಆದರೆ, ವಾಸ್ತವದ ಸ್ಥಿತಿ ಬೇರೆಯೇ ಇದೆ’ ಎಂದು ಕಸವನಹಳ್ಳಿ ನಿವಾಸಿ ವಿಷ್ಣುಪ್ರಸಾದ್ ಹೇಳುತ್ತಾರೆ.

ಮೆಟ್ರೊ ಕಾಮಗಾರಿಯಿಂದ ಮತ್ತಷ್ಟು ಸಮಸ್ಯೆ

ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೊ ರೈಲು ಮಾರ್ಗದ ಕಾಮಗಾರಿ ಆರಂಭವಾಗಿದೆ. ರಸ್ತೆ ವಿಭಜಕದಿಂದ ಎರಡೂ ಕಡೆಗೆ ತಲಾ ಒಂದೊಂದ ಪಥದಲ್ಲಿ ಕಾಮಗಾರಿಗಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಉಳಿದ ಎರಡು ಪಥದಲ್ಲಿ ಒಂದರಲ್ಲಿ ಬಸ್ ಆದ್ಯತಾ ಪಥವಿದೆ. ಮಧ್ಯದಲ್ಲಿ ಉಳಿದಿರುವ ಒಂದೇ ಒಂದು ಪಥದಲ್ಲಿ ಉಳಿದ ವಾಹನಗಳು ಸಾಲುಗಟ್ಟಿ ಸಾಗಬೇಕಾಗಿದೆ.

ಬಸ್ ಆದ್ಯತಾ ಪಥ ನಿರ್ಮಿಸಿರುವ ಬಿಬಿಎಂಪಿ ಅಧಿಕಾರಿಗಳು ಅಗತ್ಯಕ್ಕೆ ತಕ್ಕಷ್ಟು ಬಸ್‌ಗಳ ವ್ಯವಸ್ಥೆ ಮಾಡಿಲ್ಲ. ಅಲ್ಲದೇ ಈ ಆದ್ಯತಾ ಪಥಕ್ಕೆ ಬರಲು ಸಾರ್ವಜನಿಕ ಸಂಚಾರ ವ್ಯವಸ್ಥೆ ಇಲ್ಲ. ಸದ್ಯಕ್ಕೆ ಐ.ಟಿ ಕಂಪನಿಗಳ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಕೋವಿಡ್ ಕಾರಣಕ್ಕೆ ಸಮೂಹ ಸಾರಿಗೆ ಬಳಸಲು ಜನ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಲೇ ಇದೆ.

‘ಮೆಟ್ರೊ ರೈಲು ಮಾರ್ಗದ ಕಾಮಗಾರಿ ಮುಗಿಯುವ ತನಕ ಐ.ಟಿ ಕಂಪನಿಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಿಸಬೇಕು ಎಂದು ಅಧಿಕಾರಿಗಳೇ ಮನವಿ ಮಾಡುತ್ತಿದ್ದಾರೆ. ಮೂಲ ಸೌಕರ್ಯ ಒದಗಿಸಲಾಗದೆ ಈ ರೀತಿ ಅಸಹಾಯಕತೆ ವ್ಯಕ್ತಪಡಿಸುವುದು ಎಷ್ಟು ಸರಿ’ ಎನ್ನುತ್ತಾರೆ ಸ್ಥಳೀಯರು.

ಎಲೆಕ್ಟ್ರಾನಿಕ್ ಸಿಟಿಯಿಂದ ಸರ್ಜಾಪುರ ರಸ್ತೆಯಲ್ಲಿನ ಕೊಡತಿ ಬಳಿಗೆ 50 ಸಾವಿರ ಉದ್ಯೋಗಿಗಳನ್ನು ಸ್ಥಳಾಂತರಿಸಲು ವಿಪ್ರೊ ಕಂಪನಿ ಸಜ್ಜಾಗಿದೆ. ಅಷ್ಟೂ ಉದ್ಯೋಗಗಳು ಈ ಭಾಗಕ್ಕೆ ಬಂದರೆ ಸಂಚಾರ ದಟ್ಟಣೆ ಸಮಸ್ಯೆ ಹೇಳ ತೀರದಾಗಲಿದೆ ಎಂದು ವಿಷ್ಣಪ್ರಸಾದ್ ಆತಂಕ ವ್ಯಕ್ತಪಡಿಸಿದರು.

ಅಂಕಿ– ಅಂಶ

11

ನಗರದ ಹೊರ ವಲಯದಲ್ಲಿರುವ ಐ.ಟಿ ಎಸ್‌ಇಜೆಡ್‌ಗಳು

7

ಬೆಳ್ಳಂದೂರು ವಾರ್ಡ್‌ವೊಂದರಲ್ಲೇ ಇರುವ ಐ.ಟಿ ಎಸ್‌ಇಜೆಡ್‌ಗಳು

10 ಲಕ್ಷ

ಹೊರ ವರ್ತುಲ ರಸ್ತೆಯಲ್ಲಿ ನಿತ್ಯ ಜನ ಸಂಚಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT