ಬುಧವಾರ, ಆಗಸ್ಟ್ 4, 2021
28 °C

ಭಾರಿ ದಂಡದ ಭಯ: ವಾಹನ ವಿಮೆಗೆ ಮುಗಿಬಿದ್ದ ಜನ

ಜಿ.ಎನ್.ಶಿವಕುಮಾರ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಸೇರಿದಂತೆ ವಿಮೆ ಇಲ್ಲದ ವಾಹನಗಳ ಸವಾರರಿಂದ ಭಾರಿ ಪ್ರಮಾಣದ ದಂಡ ವಸೂಲಿಗೆ ಸಂಚಾರ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಂತೆ ವಿಮೆ ಕಂಪೆನಿಗಳಿಗೆ ಈಗ ಬಿಡುವಿಲ್ಲದ ಕೆಲಸ.

ವಾಹನ ಚಾಲನೆ ವೇಳೆ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸದೇ ಇದ್ದರೆ ಎಷ್ಟೆಲ್ಲಾ ದಂಡ ಪಾವತಿಸಬೇಕು ಎಂದು ಕೇಂದ್ರ ಸರ್ಕಾರವು ಮೋಟಾರು ವಾಹನ (ಎಂ.ವಿ) ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಜಾರಿಗೊಳಿಸಿ, ಹೊಸ ನಿಯಮದಲ್ಲಿ ಉಲ್ಲೇಖಿಸಿದೆ.

ವಾಹನ ವಿಮೆ ಇಲ್ಲದೆ ರಸ್ತೆಗೆ ಇಳಿಸಿದರೆ ₹2,000, ವಾಹನ ಫಿಟ್‌ನೆಸ್ (ಎಫ್‌ಸಿ) ಇಲ್ಲದಿದ್ದರೆ ₹2,000 ದಂಡ ಪಾವತಿಸಬೇಕಿದೆ. ಈ ಆದೇಶದ ಬೆನ್ನಲ್ಲೇ ಎಚ್ಚೆತ್ತುಕೊಳ್ಳುತ್ತಿರುವ ಜನರು, ತಮ್ಮ ವಾಹನದ ವಿಮೆ, ಫಿಟ್ನೆಸ್ ಪರೀಕ್ಷೆಯ ಪ್ರಮಾಣಪತ್ರದ ಕಾಲಮಿತಿ ಮುಗಿದಿದೆಯಾ? ಮುಗಿಯದೇ ಇದ್ದರೆ ಇನ್ನು ಎಷ್ಟು ದಿನ ಬಾಕಿ ಇದೆ? ಎಂದು ದಾಖಲೆಗಳಿಗೆ ತಡಕಾಡುತ್ತಿದ್ದಾರೆ. 

ವಿಮೆ ಹಾಗೂ ಹೊಗೆ ಪ್ರಮಾಣ ಪರೀಕ್ಷೆ ಮಾಡಿಸಲು ಹತ್ತಿರದಲ್ಲಿ ಕೇಂದ್ರಗಳು ಎಲ್ಲಿವೆ ಎಂದು ಅವರಿವರ ಬಳಿ ಕೇಳುತ್ತಿದ್ದಾರೆ. ವಿಮಾ ಕೇಂದ್ರಗಳು ದೂರ ಇದ್ದರೆ ಅಲ್ಲಿಗೆ ವಾಹನ ತೆಗೆದುಕೊಂಡು ಹೋಗುವ ಮಾರ್ಗ ಮಧ್ಯೆ ಸಂಚಾರ ಪೊಲೀಸರು ದಾಖಲೆ ಕೇಳಿದರೆ ದಂಡ ತೆರಬೇಕಾಗುತ್ತದೆ ಎಂದು ಒಳ ರಸ್ತೆಗಳ ಮೂಲಕ ವಿಮಾ ಕೇಂದ್ರಗಳನ್ನು ತಲುಪುತಿದ್ದಾರೆ.

ಕಂಪೆನಿಗಳ ಸಿಬ್ಬಂದಿಗೆ ಬಿಡುವಿಲ್ಲದ ಕೆಲಸ

ನಿಯಮ ಉಲ್ಲಂಘಿಸಿದರೆ ಹೆಚ್ಚಿನ ದಂಡ ಪಾವತಿಸಬೇಕಾಗುತ್ತದೆ ಎಂದು ವಾಹನಗಳ ಮಾಲೀಕರು ವಿಮೆ ಕಂಪೆನಿಗಳ ಏಜನ್ಸಿಗಳು ಇರುವಲ್ಲಿಗೆ ದೌಡಾಯಿಸುತ್ತಿದ್ದಾರೆ.

ಹೊಗೆ ಪರೀಕ್ಷೆ ಹಾಗೂ ಮಿಮೆ ಮಾಡಿಸಲು ಬರುವ ಬೈಕ್, ಕಾರು, ಇತರೆ ವಾಹನಗಳು ಹತ್ತಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಲ್ಲುತ್ತಿವೆ. ವಿಮೆ ಕಂಪೆನಿಗಳ ಸಿಬ್ಬಂದಿ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಮೊದಲು ಬಂದ ವಾಹನಗಳಿಗೆ ಪ್ರಮಾಣಪತ್ರ ನೀಡಿ ಮುಗಿಸುತ್ತಿದ್ದಂತೆ ಮತ್ತಷ್ಟು ವಾಹನಗಳು ಬಂದು ನಿಲ್ಲುತ್ತಿವೆ.

‘ಸಂಚಾರ ಪೊಲೀಸರು ಸಾವಿರಾರು ರೂಪಾಯಿ ದಂಡ ಕಟ್ಟಿಸಿಕೊಳ್ಳಲು ಆರಂಭಿಸಿದ ಮೂರು ನಾಲ್ಕು ದಿನದಿಂದ ಹೊಗೆ ಪ್ರಮಾಣ ಪರೀಕ್ಷೆ ಹಾಗೂ ವಿಮೆ ಮಾಡಿಸಲು ಬರುವವರ ಸಂಖ್ಯೆ ಹೆಚ್ಚುತ್ತಿದೆ. ನಾವು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು' ಎಂದು ಹೇಳಿಕೊಂಡರು ಇನ್ಸೂರೆನ್ಸ್ ಏಜನ್ಸಿಯ ಸಿಬ್ಬಂದಿ ನವೀನ್.

ದಾಖಲೆ ಸರಿಯಾಗಿ ಇಟ್ಟುಕೊಳ್ಳುವುದೇ ಲೇಸು

‘ವಿಮೆ ಹಾಗೂ ಹೊಗೆ ಪ್ರಮಾಣಪತ್ರಗಳು ಅಪ್ ಡೇಟ್ ಇಲ್ಲದೆ ಪೊಲೀಸರ ಕೈಗೆ ತಗಲಾಕ್ಕೊಂಡು ಸಾವಿರಾರು ದಂಡ ಪೀಕುವ ಬದಲು ಸಮಯಕ್ಕೆ ಸರಿಯಾಗಿ ರಿನಿವಲ್ ಮಾಡಿಸಿ ವರ್ಷ ಪೂರ್ತಿ ನೆಮ್ಮದಿಯಾಗಿ ವಾಹನ ಓಡಿಸಬಹುದಲ್ಲ. ಸುಮ್ಮನೆ ಕಿರಿಕಿರಿ ಯಾಕೆ ಅನುಭವಿಸಬೇಕು' ಎನ್ನುತ್ತಾರೆ ಬೆಂಗಳೂರಿನ ಬಸವೇಶ್ವರ ನಗರ ನಿವಾಸಿ ಪ್ರಕಾಶ್ ಯಾದವ್.

ಸರ್ಕಾರ ಉತ್ತಮ ರಸ್ತೆ ಕೊಟ್ಟಿದೆಯಾ?

‘ಸರ್ಕಾರ ಹೆಚ್ಚಿನ ದಂಡ ಪಾವತಿಗೆ ಹೊಸ ನಿಯಮ ಜಾರಿ ಮಾಡಿದೆ. ಇದರಿಂದ ನಿಯಮ ಪಾಲನೆ ಪ್ರಮಾಣ ಹೆಚ್ಚಬಹುದು. ತಪ್ಪು ಮಾಡಿದವರು ದಂಡವನ್ನೇನೋ ಪಾವತಿಸುತ್ತಾರೆ. ಆದರೆ, ಮತ್ತೆ ತಪ್ಪೆಸಗದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಸಂಚಾರ ಪೊಲೀಸರಿಂದ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು. ಜತೆಗೆ, ಸರ್ಕಾರ ಗುಂಡಿ, ಹೊಂಡಗಳಿಲ್ಲದ ಉತ್ತಮ ರಸ್ತೆ, ಪಾದಚಾರ ಮಾರ್ಗಗಳನ್ನು ನಿರ್ಮಿಸಲಿ' ಎಂದು ಒತ್ತಾಯಿಸಿದರು ವಾಹನ ವಿಮೆ ಮಾಡಿಸಲು ಬಂದಿದ್ದ ಮಹಾಲಕ್ಷ್ಮಿ ಲೇಔಟ್ ನ ನಿವಾಸಿ ರಹೀಂ ಖಾನ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು