ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾವತಿ ಪಾರ್ಕಿಂಗ್’: ಬಿಬಿಎಂಪಿಗೆ ಶುಲ್ಕ ಪಾವತಿಸದ ಏಜೆನ್ಸಿ

Published 23 ಜನವರಿ 2024, 22:23 IST
Last Updated 23 ಜನವರಿ 2024, 22:23 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ 11 ರಸ್ತೆಗಳಲ್ಲಿನ ‘ಪಾವತಿ ಪಾರ್ಕಿಂಗ್‌’ ವ್ಯವಸ್ಥೆಯಿಂದ ಬಿಬಿಎಂಪಿಗೆ ಮೂರು ವರ್ಷಗಳಿಂದ ಒಂದು ರೂಪಾಯಿಯೂ ಸಂದಾಯವಾಗಿಲ್ಲ. ಗುತ್ತಿಗೆ ಪಡೆದಿರುವ ಖಾಸಗಿ ಏಜೆನ್ಸಿಗಳು ಪಾರ್ಕಿಂಗ್‌ ಶುಲ್ಕವನ್ನು ಸಂಗ್ರಹಿಸುತ್ತಿದ್ದರೂ ಪಾಲಿಕೆಗೆ ಪಾವತಿಸಿಲ್ಲ.

ಪಾರ್ಕಿಂಗ್‌ ಶುಲ್ಕದಲ್ಲಿ ಬಿಬಿಎಂಪಿ ಪಾಲಿನ ಹಣವನ್ನು ಪಾವತಿಸದ ಗುತ್ತಿಗೆದಾರರ ಮೇಲೆ ಪಾಲಿಕೆ, ಪೊಲೀಸರಿಗೆ ದೂರು ದಾಖಲಿಸಿಲ್ಲ ಹಾಗೂ ಗುತ್ತಿಗೆಯನ್ನೂ ಸ್ಥಗಿತಗೊಳಿಸಿಲ್ಲ.

ಮಾಹಿತಿ ಹಕ್ಕು ಕಾಯ್ದೆಯಡಿ ಮರಿಲಿಂಗೇಗೌಡ ಮಾಲಿ ಪಾಟೀಲ್‌ ಅವರು ದಾಖಲೆಗಳನ್ನು ಪಡೆದುಕೊಂಡಿದ್ದು, ಅದರ ಪ್ರಕಾರ, 2019ರ ಆಗಸ್ಟ್‌ನಲ್ಲಿ ‘ಪಾವತಿ ಪಾರ್ಕಿಂಗ್‌’ ಗುತ್ತಿಗೆಯನ್ನು ನೀಡಲಾಗಿದೆ. 2021ರ ಏಪ್ರಿಲ್‌ನಿಂದ ಪಾಲಿಕೆಗೆ ಗುತ್ತಿಗೆದಾರರು ಶುಲ್ಕ ಪಾವತಿಲ್ಲ.

84 ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಹಲವು ಏಜೆನ್ಸಿಗಳಿಗೆ ಪಾಲಿಕೆ ಗುತ್ತಿಗೆಯನ್ನು ನೀಡಿದ್ದು, ಪ್ರತಿ ವರ್ಷ ₹31.60 ಕೋಟಿ ಶುಲ್ಕ ಸಂಗ್ರಹಿಸುತ್ತಿತ್ತು. ಎರಡು ವರ್ಷ ಕೋವಿಡ್‌ನಿಂದಾಗಿ ಏಜೆನ್ಸಿಗಳು ರಿಯಾಯಿತಿ ಪಡೆದುಕೊಂಡಿದ್ದವು.

2020ರ ಅಕ್ಟೋಬರ್‌ನಿಂದ 2021ರ ಮೇ ತಿಂಗಳವರೆಗೆ ಒಂಬತ್ತು ರಸ್ತೆಗಳ ಶುಲ್ಕವನ್ನು ಕಡಿಮೆ ಮಾಡಿದ್ದ ಪಾಲಿಕೆ ₹28 ಲಕ್ಷ ನಿಗದಿಪಡಿಸಿತ್ತು. ಈ ₹28 ಲಕ್ಷವನ್ನೂ ಪಾಲಿಕೆ ಪಾವತಿಸದ ಏಜೆನ್ಸಿ, ಕನ್ನಿಗ್‌ಹ್ಯಾಮ್ ರಸ್ತೆ, ಎಂ.ಜಿ.ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್‌ ಮಾರ್ಕ್ಸ್‌ ರಸ್ತೆ, ಚರ್ಚ್‌ ಸ್ಟ್ರೀಟ್‌ ಸೇರಿದಂತೆ ಇತರೆ ರಸ್ತೆಗಳಲ್ಲಿ ಪಾರ್ಕಿಂಗ್‌ ಶುಲ್ಕ ಸಂಗ್ರಹಿಸುತ್ತಿದೆ. ಅಲ್ಲದೆ, ಮುಂಗಡವಾಗಿ ಶುಲ್ಕ ಪಾವತಿಸದ ವಾಹನ ಸವಾರರಿಗೆ ₹500 ದಂಡವನ್ನೂ ವಿಧಿಸುತ್ತಿದೆ.

ಬಿಬಿಎಂಪಿ ಕಳೆದ ವರ್ಷ ₹2.6 ಕೋಟಿಯನ್ನು ಕೂಡಲೇ ಪಾವತಿಸಬೇಕು ಎಂದು ಏಜೆನ್ಸಿಗೆ ನೋಟಿಸ್‌ ಜಾರಿ ಮಾಡಿತ್ತು. ಏಳು ದಿನಗಳಲ್ಲಿ ಪಾವತಿ ಮಾಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿತ್ತು.

‘ನಮ್ಮ ನೋಟಿಸ್‌ಗೆ ಏಜೆನ್ಸಿ ಪ್ರತಿಕ್ರಿಯಿಸಿದ್ದು, ಸುಮಾರು ₹25 ಲಕ್ಷ ಪಾವತಿಸಿದೆ’ ಎಂದು ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್‌ ಎಂ.ಟಿ. ಬಾಲಾಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT