‘ಗ್ರಾ.ಪಂ. ಚುನಾವಣೆ: ನಾಮಪತ್ರ ವಾಪಸಿನ ಮೇಲೆ ಕಣ್ಣಿಡಿ’
ಬೆಂಗಳೂರು: ‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು, ಅದನ್ನು ವಾಪಸು ಪಡೆಯತ್ತಿದ್ದರೆ ಯಾವುದೇ ಒತ್ತಡ, ಆಮಿಷಗಳಿಗೆ ಒಳಗಾಗದೆ ನ್ಯಾಯಯುತವಾಗಿ ಮತ್ತು ಸ್ವ ಇಚ್ಛೆಯಿಂದ ಹಿಂಪಡೆಯುತ್ತಿದ್ದಾರೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗಳಿಗೆ ರಾಜ್ಯ ಚುನಾವಣಾ ಆಯುಕ್ತರು ಸೂಚಿಸಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳು ಹರಾಜು ಹಾಕುತ್ತಿರುವ ಆರೋಪಗಳ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಸೋಮವಾರ ವಿಡಿಯೊ ಸಂವಾದ ನಡೆಸಿದ ಆಯುಕ್ತರು, ‘ಅವಿರೋಧವಾಗಿ ಆಯ್ಕೆಯಾಗುವ ಪ್ರಕರಣಗಳನ್ನು ಒಮ್ಮೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು’ ಎಂದೂ ನಿರ್ದೇಶನ ನೀಡಿದ್ದಾರೆ.
‘ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993 ನಿಯಮ 18ರಂತೆ ಉಮೇದುವಾರಿಕೆಯನ್ನು ಅಭ್ಯರ್ಥಿಯು ಖುದ್ದು ಅಥವಾ ಸೂಚಕರ ಮೂಲಕ ಅಥವಾ ಅಧಿಕೃತವಾಗಿ ನಿಯೋಜಿಸಿದ ಏಜೆಂಟ್ ಮೂಲಕ ಹಿಂತೆಗೆದುಕೊಳ್ಳಲು ಅವಕಾಶವಿದೆ. ಆದರೆ, ಈ ಸಂದರ್ಭದಲ್ಲಿ ಅಭ್ಯರ್ಥಿ ಯಾವುದೇ ಒತ್ತಡ ಇಲ್ಲದೆ ವಾಪಸು ಪಡೆಯುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದೂ ಆಯುಕ್ತರು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.