ಶನಿವಾರ, ಫೆಬ್ರವರಿ 27, 2021
30 °C

ಗಾನ ಗಾರುಡಿಗ ಭೀಮಸೇನ ಜೋಷಿಗೆ ‘ಭೀಮ ನಮನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೊಮ್ಮನಹಳ್ಳಿ: ವಿಎಲ್ಎನ್ ನಿರ್ಮಾಣ್ ಪುರಂದರ ಪ್ರತಿಷ್ಠಾನ ಭಾನುವಾರ ಹಮ್ಮಿಕೊಂಡಿದ್ದ ಹಿಂದೂಸ್ತಾನಿ ಗಾಯಕ ಪಂಡಿತ್ ಭೀಮಸೇನ ಗುರುರಾಜ ಜೋಷಿ ಅವರ 10ನೇ ವರ್ಷದ ಸ್ಮರಣೆ ಕಾರ್ಯಕ್ರಮ ಬನ್ನೇರುಘಟ್ಟ ರಸ್ತೆ ನಿಸರ್ಗ ಬಡಾವಣೆಯಲ್ಲಿ ನಡೆಯಿತು.

ಹಿಂದೂಸ್ತಾನಿ ಗಾಯಕ ಡಾ.ನಾಗರಾಜ್ ರಾವ್ ಹವಾಲ್ದಾರ್ ಅವರು ಭೀಮಸೇನ ಜೋಷಿಯವರ ಪ್ರಸಿದ್ಧ ಹಾಡುಗಳನ್ನು ಪ್ರಸ್ತುತಪಡಿಸಿದರು. ಕಿರಾನ – ಘರಾನ ಮೂಲ ಶಾಸ್ತ್ರೀಯ ಗಾಯನದ ಜೊತೆಗೆ ಭಾಗ್ಯದ ಲಕ್ಷ್ಮಿ ಬಾರಮ್ಮ, ಕರುಣಿಸೋ ರಂಗ ಕರುಣಿಸೋ, ನೀನಿರದ ದಿನವಾ ಹೇಗೆ ನಾ ಕಳೆಯಲಿ ಹಾಡುಗಳನ್ನು ಹಾಡಿ ರಂಜಿಸಿದರು. ಗಾಯನದ ಮಧ್ಯೆ ಭೀಮಸೇನ ಜೋಷಿಯವರ ಬದುಕು, ಸಂಗೀತ ಸಾಧನೆ ಕುರಿತ ಸ್ವಾರಸ್ಯಕರ ಘಟನೆಗಳನ್ನು ಮೆಲುಕು ಹಾಕಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿರ್ಮಾಣ್ ಶೆಲ್ಟರ್ಸ್ ಪ್ರೈ.ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ ವಿ.ಲಕ್ಷ್ಮಿನಾರಾಯಣ ‘ವಿಶ್ವಖ್ಯಾತಿ ಗಾಯಕ ಭೀಮಸೇನ ಜೋಷಿ ಕನ್ನಡಿಗರ ಹೆಮ್ಮೆ. ಅವರ ಸಂಗೀತ ಸಾಧನೆ, ಪ್ರಯೋಗಗಳು ಸೂರ್ಯಚಂದ್ರರಿರುವವರೆಗೂ ಅಜರಾಮರವಾಗಿರಲಿವೆ’ ಎಂದರು.

‘ಪ್ರತಿಷ್ಠಾನದ ವತಿಯಿಂದ ಪ್ರತಿ ವರ್ಷವೂ ಅವರ ಸ್ಮರಣಾ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದ್ದು, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಭೀಮಸೇನ ಜೋಷಿ ಅವರ ಹೆಸರಿನಲ್ಲಿ ವಾರ್ಷಿಕ ‘ಸಂಗೀತ ರತ್ನ’ ನೀಡಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರುವರಿಯಲ್ಲಿ ನಡೆಯಲಿದೆ’ ಎಂದರು.

‘ನವ್ಯ ಸಾಹಿತ್ಯದ ಕಾವ್ಯಗಳಿಗೆ ಶಾಸ್ತ್ರೀಯ ಗಾಯನದ ಲೇಪನ ಹಚ್ಚಿ, ಗರ್ಭಗುಡಿಯಲ್ಲಿದ್ದ ಶಾಸ್ತ್ರೀಯ ಗಾಯನವನ್ನು ಹಳ್ಳಿಗರೂ ತಲೆದೂಗುವಂತೆ ಜನಪ್ರಿಯಗೊಳಿಸಿದ ಕೀರ್ತಿ ಪಂಡಿತ್ ಭೀಮಸೇನರಿಗೆ ಸಲ್ಲುತ್ತದೆ’ ಎಂದು ಡಾ.ನಾಗರಾಜ್ ರಾವ್ ಹವಾಲ್ದಾರ್ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.