ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಪಕ್ಕದಲ್ಲಿದ್ದ ಚಿಪ್ಪು ಹಂದಿ ರಕ್ಷಣೆ

Last Updated 28 ಅಕ್ಟೋಬರ್ 2021, 22:00 IST
ಅಕ್ಷರ ಗಾತ್ರ

ಬೆಂಗಳೂರು: ಅಂಚೆಪಾಳ್ಯದಿಂದ ತುಮಕೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದ ಚಿಪ್ಪುಹಂದಿಯೊಂದನ್ನು ಬಿಬಿಎಂಪಿ ವನ್ಯಜೀವಿ ರಕ್ಷಕರು ಮಂಗಳವಾರ ತಡರಾತ್ರಿ ರಕ್ಷಣೆ ಮಾಡಿದ್ದಾರೆ.

‘ಹೆದ್ದಾರಿ ಪಕ್ಕದಲ್ಲಿ ವಿಚಿತ್ರ ಜೀವಿ ಕಂಡು ಬಂದಿದೆ ಎಂದು ಅಂಚೆಪಾಳ್ಯದಿಂದ ಬಿಬಿಎಂಪಿ ಸಹಾಯವಾಣಿಗೆ ಯಾರೋ ಮಂಗಳವಾರ ರಾತ್ರಿ ಕರೆ ಮಾಡಿದ್ದರು. ರಾತ್ರಿ 12.30ರ ಸುಮಾರಿಗೆ ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ಈ ಚಿಪ್ಪುಹಂದಿ ಪತ್ತೆಯಾಯಿತು. ಅದಕ್ಕೆ ಸುಮಾರು ಎರಡೂ ವರ್ಷವಾಗಿರಬಹುದು. ಅದು ಸುಮಾರು 6 ಕೆ.ಜಿ. ತೂಗುತ್ತಿತ್ತು. ಅದು ಆರೋಗ್ಯವಾಗಿಯೇ ಇತ್ತು. ಹಾಗಾಗಿ ಅದನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಬಿಟ್ಟಿದ್ದೇವೆ’ ಎಂದು ಜಿಲ್ಲೆಯ ಗೌರವ ವನ್ಯಜೀವಿ ಪರಿಪಾಲಕ ಪ್ರಸನ್ನ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಿಪ್ಪುಹಂದಿಗಳು ಗೆದ್ದಲುಗಳನ್ನು ತಿಂದು ಬದುಕುವ ಜೀವಿಗಳು. ಕಾಂಕ್ರೀಟ್‌ ಕಟ್ಟಡಗಳ ಸಂಖ್ಯೆ ಹೆಚ್ಚಿದಂತೆ ನಗರದಲ್ಲಿ ಹುತ್ತಗಳು ನಶಿಸಿವೆ. ಕಾಂಕ್ರೀಟ್‌ ಕಾಡಿನಿಂದಲೇ ತುಂಬಿರುವ ಬೆಂಗಳೂರಿನಲ್ಲಿ ಈ ಜೀವಿಗಳು ಬದುಕುವುದು ಕಷ್ಟ’ ಎಂದು ಅವರು ಅಭಿಪ್ರಾಯಪಟ್ಟರು.

‘ಚಿಪ್ಪುಗಳಿಗಾಗಿ ಈ ಜೀವಿಗಳ ಕಳ್ಳಸಾಗಣೆ ಜಾಸ್ತಿ ಆಗಿದೆ. ನಗರದ ಪೊಲೀಸರೂ ಇತ್ತೀಚೆಗೆ ಭಾರಿ ಪ್ರಮಾಣದಲ್ಲಿ ಚಿಪ್ಪುಹಂದಿ ಚಿಪ್ಪುಗಳನ್ನು ವಶಪಡಿಸಿಕೊಂಡಿದ್ದರು. ಹೆದ್ದಾರಿ ಪಕ್ಕದಲ್ಲಿ ಪತ್ತೆಯಾಗಿದ್ದು ನೋಡಿದರೆ, ಈ ಚಿಪ್ಪುಹಂದಿಯೂ ಕಳ್ಳಸಾಗಣೆಯಾಗಿರುವ ಸಾಧ್ಯತೆ ಇದೆ’ ಎಂದರು.

*

ಚಿಪ್ಪುಹಂದಿಗಳು ಅಪಾಯದ ಅಂಚಿನಲ್ಲಿರುವ ಜೀವಿಗಳು. ಇವುಗಳ ಸಂತತಿ ನಶಿಸುತ್ತಿದೆ. ಈ ಜೀವಿಗಳ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು.
-ಪ್ರಸನ್ನ ಕುಮಾರ್‌, ಗೌರವ ವನ್ಯಜೀವಿ ಪರಿಪಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT