ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನ ಸ್ವಚ್ಛತೆಗೆ ಮುಂದಾದ ಅಧಿಕಾರಿಗಳು

ಮೆಟ್ರೊದಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು/ ನೆನ್ನೆಯಿಂದಲೇ ಸ್ವಚ್ಛತೆ ಕೆಲಸ ಪ್ರಾರಂಭ
Last Updated 31 ಜುಲೈ 2019, 19:45 IST
ಅಕ್ಷರ ಗಾತ್ರ

ನೆನ್ನೆಯವರೆಗು ನಿರ್ವಹಣೆಯಿಲ್ಲದೆ ಅವ್ಯವಸ್ಥೆಯಿಂದ ಕೂಡಿದ ಉದ್ಯಾನವು ಇಂದು ಸ್ವಚ್ಛತಾ ಕಾರ್ಯದ ಫಲವಾಗಿ ನಳನಳಿಸುತ್ತಿತ್ತು. ‘ಮೆಟ್ರೊ’ ಪ್ರಕಟಿಸಿದ ‘ಗಬ್ಬು ನಾರುವ ಉದ್ಯಾನಗಳು’ (ಮಂಗಳವಾರ 30 ಸಂಚಿಕೆ) ಎಂಬ ಶೀರ್ಷಿಕೆಯಡಿ, ಎಸ್‌.ಸಜ್ಜನ್‌ರಾವ್‌ ಸರ್ಕಲ್‌ನಲ್ಲಿರುವ ವಿಭಾಗ 47, ವಿವಿಪುರಂ ಉದ್ಯಾನದ ಸ್ಥಿತಿಯ ಬಗ್ಗೆ ಸಮಗ್ರ ವರದಿ ಪ್ರಕಟಿಸಿತ್ತು. ವರದಿಯ ಪರಿಣಾಮ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ತಾವೇ ನಿಂತು ಉದ್ಯಾನದಲ್ಲಿ ಸ್ವಚ್ಛತಾ ಕಾರ್ಯದ ಜೊತೆಗೆ ಸೂಕ್ತ ಪರಿಹಾರದ ಕ್ರಮಗಳನ್ನು ಕೈಗೊಂಡಿದ್ದಾರೆ. ಉದ್ಯಾನಕ್ಕೆ ‘ಮೆಟ್ರೊ’ ಖುದ್ದು ಭೇಟಿ ನೀಡಿದಾಗ ಕಂಡಿದ್ದು ಇಷ್ಟು.

ಕೆಲಸಗಾರರ ನಿಯೋಜನೆ

ಉದ್ಯಾನದಲ್ಲಿ ಬೆಳೆದಿರುವ ಕಳೆ ತೆಗೆಯಲು, ಸಸಿಗಳ ಸುತ್ತ ಮಣ್ಣು ತೆಗೆಯಲು ಹಾಗೂ ಕಸ ಗುಡಿಸಲು 10ರಿಂದ 15 ಜನ ಕೆಲಸಗಾರರನ್ನು ತೆಗೆದುಕೊಳ್ಳಲಾಗಿದೆ. ನೆನ್ನೆಯಿಂದಲೇ ಕೆಲಸ ಪ್ರಾರಂಭವಾಗಿರುವ ಮಾಹಿತಿ ‘ಮೆಟ್ರೊ’ಗೆ ಸಿಕ್ಕಿತು. ಈಗ ಉದ್ಯಾನದ ಅರ್ಧ ಭಾಗ ಸ್ವಚ್ಛಗೊಂಡಿದೆ. ಅಲ್ಲದೆ ಕೂರುವ ಆಸನದ ಮೇಲೆ ಮುರಿದು ಬಿದ್ದಿದ್ದ ಮರವನ್ನು ತೆರವುಗೊಳಿಸಿ ಅಪಾಯಕಾರಿಯಾದ ಕೊಂಬೆಗಳನ್ನು ಮುಂಜಾಗೃತೆಯಾಗಿ ಕಡಿದುಹಾಕಲಾಗಿದೆ.

ಕಸದ ಬುಟ್ಟಿಗಳ ಅಳವಡಿಕೆ

ಉದ್ಯಾನದ ಹುಲ್ಲುಹಾಸಿನ ಮೇಲೆ ಕಸ ಹಾಕುವುದನ್ನು ತಡೆಯಲು ಪಾರ್ಕ್‌ ಸುತ್ತಮುತ್ತ ಕಸದ ಒಂದಷ್ಟು ಬುಟ್ಟಿಗಳನ್ನು ಅಳವಡಿಸಲಾಗಿದೆ. ಅನಿವಾರ್ಯತೆ ಇದ್ದಲ್ಲಿ ಹೆಚ್ಚುವರಿ ಅಳವಡಿಸುವುದಾಗಿ ಮಾಹಿತಿ ನೀಡಿದ್ದಾರೆ.

ಉದ್ಯಾನದ ಟ್ರಾನ್ಸ್‌ಫಾರ್ಮರ್‌ಗೆ ಹೊಸ ರೂಪ

ಉದ್ಯಾನದಲ್ಲಿ ಕೂರುವ ಆಸನದ ಪಕ್ಕ ವಿದ್ಯುತ್‌ ಸಂಪರ್ಕ ಪೆಟ್ಟಿಗೆ ಅಳವಡಿಸಲಾಗಿತ್ತು. ಅದು ತೆರೆದ ಸ್ಥಿತಿಯಲ್ಲಿ ಇದ್ದದ್ದರಿಂದ ಅಪಾಯ ಹೆಚ್ಚಿರುತ್ತಿತ್ತು. ಸುದ್ದಿಯ ಪರಿಣಾಮವಾಗಿ ಹೊಸ ವಿದ್ಯುತ್‌ ಸಂಪರ್ಕ ಪೆಟ್ಟಿಗೆ ಅಳವಡಿಸಲಾಗಿದೆ. ಬೆಸ್ಕಾಂ ಸಿಬ್ಬಂದಿ ನೆನ್ನೆಯಿಂದಲೇ ಪರಿಶೀಲಿಸಿ, ವಿದ್ಯುತ್‌ ತಂತಿಗಳನ್ನು ಸೂಕ್ತ ಸ್ಥಳದಲ್ಲಿ ಇರಿಸಿದ್ದಾರೆ. ಉದ್ಯಾನದ ಒಳಗೆ ಅನಗತ್ಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ, ತಂತಿಗಳನ್ನು ತೆರವುಗೊಳಿಸಿದ್ದಾರೆ.

ಸಿಬ್ಬಂದಿ ನೇಮಕ

ಸಿಬ್ಬಂದಿ ಕೊರತೆಯಿಂದಾಗಿ ದಿನದ 24 ಗಂಟೆಯೂ ಪಾರ್ಕ್‌ ತೆರೆದಿರುತ್ತಿತ್ತು. ಉದ್ಯಾನವನ್ನು ನೋಡಿಕೊಳ್ಳಲು ಸಿಬ್ಬಂದಿಯನ್ನು ನೇಮಿಸಲಾಗಿದೆ. ನೆನ್ನೆಯಿಂದಲೇ ಇವರು ಕೆಲಸದಲ್ಲಿ ತೊಡಗಿದ್ದು, ಕಟ್ಟುನಿಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಬೆಳಗ್ಗೆ 6 ರಿಂದ 10 ಗಂಟೆ ವರೆಗೆ ಮತ್ತು ಸಂಜೆ 5 ರಿಂದ 7ರ ವರೆಗೆ ಮಾತ್ರ ಉದ್ಯಾನಕ್ಕೆ ಪ್ರವೇಶಾವಕಾಶವಿದೆ. ಸಂಜೆ 7ರ ನಂತರ ಉದ್ಯಾನವನ್ನು ಮುಚ್ಚಲಾಗುತ್ತದೆ’ ಎಂದು ಸಿಬ್ಬಂದಿ ಮಾಹಿತಿ ನೀಡಿದರು.

‘ಮೆಟ್ರೊ’ ಜತೆ ಮಾತನಾಡಿದ, ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ‘ನೆನ್ನೆಯಿಂದಲೇ ಪಾರ್ಕ್‌ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿನ ಕಸದ ರಾಶಿಯನ್ನು ತೆರವುಗೊಳಿಸಲಾಗಿದ್ದು, ಬಿಬಿಎಂಪಿ ಕಸದ ವಾಹನವು ದಿನನಿತ್ಯ ಇಲ್ಲಿನ ಕಸವನ್ನು ಸಾಗಿಸಲಿದೆ. ಪಾರ್ಕ್‌ ನಿರ್ವಹಣೆಗೆ ಸಿಬ್ಬಂದಿ ಮತ್ತು ಕೆಲಸಗಾರರನ್ನು ಕೂಡ ನಿಯೋಜಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT