ಮಂಗಳವಾರ, ಮೇ 17, 2022
28 °C
5–10 ಕಿ.ಮೀ. ವ್ಯಾಪ್ತಿಯ ನಿರ್ದಿಷ್ಟ ಪ್ರದೇಶ ಗುರುತಿಸಿ, ಯೋಜನೆ ರೂಪಿಸುವುದು ಅಗತ್ಯ: ವಾಹನ ನಿಲುಗಡೆ ನೀತಿ 2.0 ಪ್ರತಿಪಾದನೆ

ರಸ್ತೆವಾರು ಅಲ್ಲ, ಪ್ರದೇಶವಾರು ಪಾರ್ಕಿಂಗ್‌ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಾಹನಗಳ ನಿಲುಗಡೆಗೆ ಸಂಬಂಧಿಸಿದಂತೆ ಇಡೀ ನಗರಕ್ಕೆ ಒಂದು ಯೋಜನೆ ರೂಪಿಸುವುದು ಸೂಕ್ತವಲ್ಲ. ಅಂತೆಯೇ ನಿರ್ದಿಷ್ಟ ರಸ್ತೆಗೊಂದರಂತೆ ಯೋಜನೆ ರೂಪಿಸಿದರೂ ಫಲಪ್ರದ ವಾಗದು.

ಅದರ ಬದಲು 5–10 ಕಿ.ಮೀ ವ್ಯಾಪ್ತಿಯ ನಿರ್ದಿಷ್ಟ ಪ್ರದೇಶವನ್ನು ಗುರುತಿಸಿ, ಅಲ್ಲಿನ ರಸ್ತೆ, ವಾಹನ ಓಡಾಟ ಪ್ರಮಾಣಕ್ಕೆ ಅನುಗುಣವಾಗಿ ಪ್ರದೇಶವಾರು ಯೋಜನೆ (ಎಪಿಪಿ) ರೂಪಿಸಬೇಕು ಎಂದು ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್‌) ಅಂತಿಮಗೊಳಿಸಿರುವ ‘ವಾಹನ ನಿಲುಗಡೆ ನೀತಿ 2.0’ ಪ್ರತಿಪಾದಿಸುತ್ತದೆ.

ಪ್ರದೇಶವಾರು ಯೋಜನೆ ಹೇಗಿರಬೇಕು, ಅದನ್ನು ನಿರ್ಧರಿಸು ವುದಕ್ಕೆ ಮಾನದಂಡಗಳೇನು, ಇದನ್ನು ನಿರ್ಧರಿಸುವವರು ಯಾರು ಎಂಬುದನ್ನೂ ನೀತಿಯಲ್ಲಿ ವಿಸ್ತೃತವಾಗಿ ವಿವರಿಸಲಾಗಿದೆ. ಆರಂಭಿಕ ಹಂತದಲ್ಲಿ ಪ್ರದೇಶವಾರು ಯೋಜನೆಗಳನ್ನು ರೂಪಿಸುವುದು ಡಲ್ಟ್‌ ಜವಾಬ್ದಾರಿ. ಬಿಬಿಎಂಪಿ ಹಾಗೂ ಸಂಚಾರ ಪೊಲೀಸ್‌ ಇಲಾಖೆಯ ಜೊತೆ ಚರ್ಚಿಸಿ ಇದನ್ನು ಅಂತಿಮಗೊಳಿಸಲಾಗುತ್ತದೆ. 

ನೀತಿ ಅನುಷ್ಠಾನಕ್ಕೆ ಕಾರ್ಯಪಡೆ: ಪ್ರದೇಶವಾರು ಯೋಜನೆಯನ್ನು ಪ್ರತಿ ವಲಯಗಳಲ್ಲೂ ಅನುಷ್ಠಾನಗೊಳಿಸುವುದು ಬಿಬಿಎಂಪಿಯ ಜವಾಬ್ದಾರಿ. ಈ ಸಲುವಾಗಿಯೇ ವಲಯವಾರು ಕಾರ್ಯಪಡೆಗಳನ್ನು (ಜೆಡ್‌ಟಿಎಫ್‌) ರಚಿಸಲಾಗುತ್ತದೆ. ಬಿಬಿಎಂಪಿಯ ಆಯಾ ವಲಯದ ಜಂಟಿ ಆಯುಕ್ತರು ಈ ಕಾರ್ಯಪಡೆಯ ಮುಖ್ಯಸ್ಥರಾಗಿರುತ್ತಾರೆ. ಸ್ಥಳೀಯ ಸಂಚಾರ ಪೊಲೀಸ್‌ ಇಲಾಖೆಯ ಡಿಸಿಪಿ ಅಥವಾ ಎಸಿಪಿ ದರ್ಜೆ ಅಧಿಕಾರಿ ಹಾಗೂ ಸಾರಿಗೆ ಇಲಾಖೆಯ ಪ್ರಾದೇಶಿಕ ಸಾರಿಗೆ ಆಯುಕ್ತ (ಆರ್‌ಟಿಒ) ಅಥವಾ ಪ್ರಾದೇಶಿಕ ಸಾರಿಗೆ ಸಹಾಯಕ ಆಯುಕ್ತ (ಎಆರ್‌ಟಿಒ) ಈ ಕಾರ್ಯಪಡೆಯಲ್ಲಿರುತ್ತಾರೆ. ಈ ಕಾರ್ಯಪಡೆಗಳು ಪ್ರದೇಶವಾರು ಯೋಜನೆ ರೂಪಿಸಲು ನೆರವಾಗುತ್ತವೆ. ಆಯಾ ಪ್ರದೇಶದಲ್ಲಿ ವಾಹನ ನಿಲುಗಡೆ ಶುಲ್ಕ ಪರಿಷ್ಕರಣೆಗೆ ಸಂಬಂಧಿಸಿಯೂ ಶಿಫಾರಸುಗಳನ್ನು ಮಾಡುತ್ತವೆ. 

ಪ್ರದೇಶವಾರು ಯೋಜನೆಯಡಿ ವಾಹನ ನಿಲುಗಡೆಯನ್ನು ವಾಣಿಜ್ಯ ಹಾಗೂ ವಸತಿ ಪ್ರದೇಶಕ್ಕೆ ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ. ಯಾವುದೇ ಬೀದಿಯು ಶೇ 30ಕ್ಕೂ ಅಧಿಕ ವಾಣಿಜ್ಯ ಮಳಿಗೆಗಳನ್ನು ಅಥವಾ ವಸತಿಯೇತರ ಉದ್ದೇಶದ ಕಟ್ಟಡಗಳನ್ನು ಹೊಂದಿದ್ದರೆ ಅದನ್ನು ವಾಣಿಜ್ಯ ಪ್ರದೇಶವೆಂದು ಹಾಗೂ ಶೇ 30ಕ್ಕಿಂತ ಕಡಿಮೆ ವಾಣಿಜ್ಯ ಉದ್ದೇಶದ ಕಟ್ಟಡಗಳಿದ್ದರೆ ಅದನ್ನು ವಸತಿ ಪ್ರದೇಶಗಳೆಂದು ಗುರುತಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ರಸ್ತೆಯಲ್ಲಿ ವಾಹನ ನಿಲುಗಡೆ, ಪ್ರತ್ಯೇಕ ತಾಣದಲ್ಲಿ ನಿಲುಗಡೆ, ವಸತಿ ಪ್ರದೇಶದಲ್ಲಿ ವಾಹನ ನಿಲುಗಡೆ ಮುಂತಾದ ವಿವಿಧ ಮಾದರಿಗಳನ್ನು ಪ್ರದೇಶವಾರು ಯೋಜನೆಯು ಒಳಗೊಂಡಿರಬೇಕು. ಸೈಕಲ್‌, ಸಮಗ್ರ ಸಮೂಹ ಸಾರಿಗೆ, ಹಂಚಿಕೊಂಡು ಬಳಸುವ ಸಾರಿಗೆಗಳ ನಿಲುಗಡೆಯನ್ನೂ ಇದರಲ್ಲಿ ಸ್ಪಷ್ಟ
ಪಡಿಸಬೇಕು.

ವಾಣಿಜ್ಯ ಪ್ರದೇಶಗಳಲ್ಲಿ ಸರಕುಗಳನ್ನು ವಾಹನಗಳಿಗೆ ಲೋಡ್‌ ಮಾಡುವ ಅಥವಾ ಇಳಿಸುವಾಗ ಅವುಗಳನ್ನು ನಿಲ್ಲಿಸುವುದಕ್ಕೂ ಪ್ರತ್ಯೇಕ ವಲಯಗಳನ್ನೂ ಇದರಲ್ಲಿ ಗುರುತಿಸಬೇಕು. ಅಗತ್ಯವಿರುವ ಕಡೆ ನಿಲುಗಡೆ ನಿಷೇಧ ಪ್ರದೇಶಗಳನ್ನು ಸ್ಪಷ್ಟವಾಗಿ ಗುರುತಿಸುವುದು ಕಡ್ಡಾಯ. 

ಎಪಿಪಿ ರೂಪಿಸಲಿದೆ ಉನ್ನತ ಸಮಿತಿ

ನಗರದಲ್ಲಿ ಪ್ರದೇಶವಾರು ಯೋಜನೆ ರೂಪಿಸಲು ಹಾಗೂ ವಾಹನ ನಿಲುಗಡೆಗೆ ಸಂಬಂಧಿಸಿದ ಸಾರ್ವಜನಿಕ ಕುಂದು ಕೊರತೆ ಆಲಿಸುವುದಕ್ಕಾಗಿಯೇ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆ ಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುತ್ತದೆ. ಈ ಸಮಿತಿಗೆ ಡಲ್ಟ್‌ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌, ಬಿಡಿಎ ಆಯುಕ್ತರು ಸದಸ್ಯರಾಗಿರುತ್ತಾರೆ. ಜನಪ್ರತಿನಿಧಿಗಳು, ಸಾರಿಗೆ ತಜ್ಞರು, ವಿಷಯ ತಜ್ಞರನ್ನು ವಿಶೇಷ ಆಹ್ವಾನಿತರನ್ನಾಗಿ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಪ್ರದೇಶವಾರು ಪಾರ್ಕಿಂಗ್‌ ಯೋಜನೆಗಳನ್ನು ರೂಪಿಸುವುದು ಹಾಗೂ ಪಾರ್ಕಿಂಗ್‌ ಶುಲ್ಕದ ಪರಿಷ್ಕರಣೆಯ ಬಗ್ಗೆ ಉನ್ನತ ಸಮಿತಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ವಿವಿಧ ಏಜೆನ್ಸಿಗಳ ನಡುವೆ ಸಮನ್ವಯ ಕಾಪಾಡುವ ಕಾರ್ಯವನ್ನೂ ನಿರ್ವಹಿಸಲಿದೆ. ಈ ಸಮಿತಿಯು ಮಹಾನಗರದ ಏಕೀಕೃತ ಸಾರಿಗೆ ಪ್ರಾಧಿಕಾರ (ಉಮ್ಟಾ) ರಚನೆ ಆಗುವವರೆಗೆ ಮಾತ್ರ ಹೊಣೆ ನಿಭಾಯಿಸಲಿದೆ. ಉಮ್ಟಾ ರಚನೆ ಆದ ಬಳಿಕ ಉನ್ನತ ಸಮಿತಿಯ ಎಲ್ಲ ಜವಾಬ್ದಾರಿಗಳು ಅದಕ್ಕೆ ವರ್ಗಾವಣೆ ಆಗಲಿವೆ.

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ

‘ಪಾರ್ಕಿಂಗ್‌ ನೀತಿ 2.0’ ಬಗ್ಗೆ ಸಾರ್ವಜನಿಕರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಈ ಯಾವ ರೀತಿ ಪರಿಣಾಮ ಬೀರಲಿದೆ ಎಂಬ ಕುರಿತ ಸಂಕ್ಷಿಪ್ತ ವಿಶ್ಲೇಷಣೆಗಳನ್ನು ಕಳುಹಿಸಬಹುದು.

ನಿಮ್ಮ ಅನಿಸಿಕೆಗಳನ್ನು ವಾಟ್ಸ್‌ ಆ್ಯಪ್‌ ಮಾಡಿ– 96060 38256

ಪ್ರದೇಶವಾರು ಯೋಜನೆಗೆ ಮಾರ್ಗಸೂಚಿಗಳು

lಪ್ರದೇಶವಾರು ಯೋಜನೆಯನ್ನು ಅಂತಿಮಗೊಳಿಸುವುದಕ್ಕೆ ಮುನ್ನ
ಅದರಿಂದ ಪರಿಣಾಮ ಎದುರಿಸುವ ನಾಗರಿಕ ಗುಂಪುಗಳ (ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ವಾಣಿಜ್ಯ ಸಂಸ್ಥೆಗಳ ಸಂಘ, ವರ್ತಕರ ಸಂಘ, ಸಾರಿಗೆ ನಿರ್ವಹಣೆ ಸಂಸ್ಥೆಗಳು ಇತ್ಯಾದಿ) ಅಭಿಪ್ರಾಯ ಪಡೆಯುವುದು ಕಡ್ಡಾಯ.

lಯೋಜನೆಯು ಆ ಪ್ರದೇಶದಲ್ಲಿ ವಾಸ್ತವದಲ್ಲಿ ಎಷ್ಟು ವಾಹನಗಳು ಸಂಚರಿಸುತ್ತವೆ ಎಂಬ ಅಂಕಿ–ಸಂಖ್ಯೆಗಳನ್ನು ಆಧರಿಸಿರಬೇಕು

l ಸಮೀಪದಲ್ಲಿ ಎಲ್ಲೂ ವಾಹನ ನಿಲುಗಡೆಗೆ ಪ್ರತ್ಯೇಕ ತಾಣಗಳನ್ನು ಗುರುತಿಸುವುದು ಸಾಧ್ಯವಿಲ್ಲದಿದ್ದರೆ ಮಾತ್ರ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕು.

lವಾಹನ ನಿಲುಗಡೆಗೆ ತಾಣಕ್ಕೆ ಜನ ನಡೆದು ಸಾಗುವುದಕ್ಕೆ ಸೂಕ್ತ ಸಂಪರ್ಕ
ಸೌಕರ್ಯಗಳಿರಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು