ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಒಂದು ಭಾಗ ಕುಸಿದು ಇಬ್ಬರ ಸಾವು

ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್‌ ಕಾಮಗಾರಿ ವೇಳೆ ಕುಸಿದ ಸೆಟ್ರಿಂಗ್‌
Published 10 ಆಗಸ್ಟ್ 2024, 13:20 IST
Last Updated 10 ಆಗಸ್ಟ್ 2024, 13:20 IST
ಅಕ್ಷರ ಗಾತ್ರ

ಬೆಂಗಳೂರು: ಪೀಣ್ಯದ ಎನ್‌ಟಿಟಿಎಫ್‌ ವೃತ್ತದ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್‌ ಅಳವಡಿಕೆ ಕಾಮಗಾರಿ ನಡೆಸುತ್ತಿದ್ದ ವೇಳೆ ಸೆಟ್ರಿಂಗ್‌ ಕುಸಿದುಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಯಾದಗಿರಿಯ ಇಮಾಮ್‌ ಶೇಖ್‌(28) ಹಾಗೂ ಕಲಬುರಗಿಯ ವೀರೇಶ್(35) ಮೃತಪಟ್ಟವರು. ಗಾಯಗೊಂಡಿರುವ ಕಲಬುರಗಿಯ ನಾಗೇಂದ್ರ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

4ನೇ ಮಹಡಿಯಿಂದ ಬಿದ್ದರು:

‘ಯೋಮ್‌ ಸ್ವಿಚ್‌ ಗೇರ್‌ ಕಂಪನಿ ಈ ಕಟ್ಟಡ ನಿರ್ಮಿಸುತ್ತಿದ್ದು, ಶನಿವಾರ ಐದನೇ ಮಹಡಿಯಲ್ಲಿ ಕೆಲಸ ನಡೆಯುತ್ತಿತ್ತು. ಸ್ಥಳದಲ್ಲಿ ಏಳು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನಾಲ್ಕನೇ ಮಹಡಿಯಿಂದ ಕಬ್ಬಿಣದ ಸರಳುಗಳನ್ನು ಇಟ್ಟು ಚಾವಣಿ ನಿರ್ಮಿಸಲಾಗಿತ್ತು. 5ನೇ ಮಹಡಿಯಲ್ಲಿ ಲಿಫ್ಟ್‌ ಅಳವಡಿಕೆಗೆ ಸಂಬಂಧಿಸಿದ ಕಾಮಗಾರಿ ನಡೆಯುತ್ತಿತ್ತು. ಶನಿವಾರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಏಕಾಏಕಿ ಸೆಟ್ರಿಂಗ್‌ ಕುಸಿದು ಬಿದ್ದ ಪರಿಣಾಮ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ. ನಾಲ್ವರು ಅಪಾಯದಿಂದ ಪಾರಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.

ಮರಣೋತ್ತರ ಪರೀಕ್ಷೆಗಾಗಿ ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಕುರಿತು ಕಾರ್ಮಿಕರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ಹೇಳಿದರು.

ಪೀಣ್ಯದ ಎನ್‌ಟಿಟಿಎಫ್‌ ವೃತ್ತದ ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಸೆಟ್ರಿಂಗ್‌ ಕುಸಿದಿದ್ದ ಸ್ಥಳ

ಪೀಣ್ಯದ ಎನ್‌ಟಿಟಿಎಫ್‌ ವೃತ್ತದ ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಸೆಟ್ರಿಂಗ್‌ ಕುಸಿದಿದ್ದ ಸ್ಥಳ

ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌

ಜೆಡಿಎಸ್‌ ಮುಖಂಡ ಮಾಲೀಕತ್ವದ ಕಟ್ಟಡ:

ಜೆಡಿಎಸ್ ಮುಖಂಡ ಎನ್‌.ಗೋವಿಂದರಾಜು ಅವರು ಈ ಕಟ್ಟಡದ ಮಾಲೀಕರು. ತುಮಕೂರು ನಗರ ಕ್ಷೇತ್ರದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗೋವಿಂದರಾಜು ಅವರು ಸ್ಪರ್ಧಿಸಿದ್ದರು.

ಹಲವರ ವಿರುದ್ಧ ಎಫ್‌ಐಆರ್‌:

‘ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಅನಾಹುತ ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಮಾಲೀಕರು, ಗುತ್ತಿಗೆ ಕಂಪನಿ, ಮ್ಯಾನೇಜರ್ ಸೇರಿದಂತೆ ಹಲವರ ವಿರುದ್ಧ ದೂರು ನೀಡಲಾಗಿದ್ದು ಪೀಣ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ’ ಎಂದು ಪೊಲೀಸರು ಹೇಳಿದರು.

ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಸೈದುಲ್‌ ಅಡಾವತ್‌ ಹಾಗೂ ಪೀಣ್ಯ ಇನ್‌ಸ್ಟೆಕ್ಟರ್‌ ಭೇಟಿ ನೀಡಿ ಪರಿಶೀಲಿಸಿದರು.

‘ಕಾಮಗಾರಿ ವೇಳೆ ಫ್ಲೋರಿಂಗ್ ಕುಸಿದಿದೆ. ಈ ವೇಳೆ ಏಳು ಮಂದಿ ಕೆಲಸ ಮಾಡುವಾಗ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಮೃತ ಕಾರ್ಮಿಕರು ಸೋಲದೇವಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮಶೆಟ್ಟಿ ಹಳ್ಳಿಯಲ್ಲಿ ವಾಸವಿದ್ದರು. ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಅವಘಡವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ಡಿಸಿಪಿ ಸೈದುಲ್ಲಾ ಅದಾವತ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT