ಶನಿವಾರ, ಸೆಪ್ಟೆಂಬರ್ 18, 2021
26 °C
* ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಅವಘಡ * ಜಲಮಂಡಳಿ ಗುತ್ತಿಗೆದಾರನ ವಿರುದ್ಧ ಎಫ್‌ಐಆರ್

ರಸ್ತೆ ಗುಂಡಿಯಿಂದ ಉರುಳಿಬಿದ್ದ ವಾಹನ; ಅಂಗವಿಕಲ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯ ಮಂಗನಹಳ್ಳಿ ಮುಖ್ಯರಸ್ತೆಯಲ್ಲಿ ಗುಂಡಿಯಿಂದಾಗಿ ದ್ವಿಚಕ್ರ ವಾಹನ ಉರುಳಿ ಬಿದ್ದಿದ್ದು, ಸವಾರ ಖುರ್ಷಿದ್ ಅಹ್ಮದ್ (65) ಎಂಬುವರು ಮೃತಪಟ್ಟಿದ್ದಾರೆ.

‘ಮೈಕೊ ಲೇಔಟ್‌ನ ಬಿಸ್ಮಿಲ್ಲಾ ನಗರದ ನಿವಾಸಿ ಖರ್ಷಿದ್ ಅಹ್ಮದ್, ಅಂಗವಿಕಲರಾಗಿದ್ದರು. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಎರಡು ಪ್ರತ್ಯೇಕ ಚಕ್ರಗಳನ್ನು ಅಳವಡಿಸಿಕೊಂಡು ಬಳಸುತ್ತಿದ್ದರು. ಅದೇ ವಾಹನದಲ್ಲಿ ಸೋಮವಾರ ರಾತ್ರಿ ವಿಶ್ವೇಶ್ವರಯ್ಯ ಬಡಾವಣೆಯ 4ನೇ ಹಂತದಲ್ಲಿರುವ ಮಂಗನಹಳ್ಳಿ ಮುಖ್ಯರಸ್ತೆಯಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ರಸ್ತೆ ಗುಂಡಿಯಿಂದಾಗಿ ವಾಹನ ಉರುಳಿಬಿದ್ದು ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಜಲಮಂಡಳಿ ಗುತ್ತಿಗೆದಾರ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದೂ ಅವರು ತಿಳಿಸಿದರು.

ಮಳೆಯಿಂದ ಕಿತ್ತುಹೋದ ಮಣ್ಣು: ‘ವಿಶ್ವೇಶ್ವರಯ್ಯ ಬಡಾವಣೆ ಹಾಗೂ ಸುತ್ತಮುತ್ತ ಒಳಚರಂಡಿ ಕೊಳವೆ ಅಳವಡಿಸುವ ಕೆಲಸ ನಡೆಯುತ್ತಿದೆ. ಜಲಮಂಡಳಿಯ ಕಾಮಗಾರಿಯ ಗುತ್ತಿಗೆ ಪಡೆದವರು, ಈ ಕೆಲಸ ಮಾಡಿಸುತ್ತಿದ್ದಾರೆ. ಮಂಗನಹಳ್ಳಿ ಮುಖ್ಯರಸ್ತೆಯಲ್ಲೂ ಇತ್ತೀಚೆಗೆ ಡಾಂಬರ್ ರಸ್ತೆ ಅಗೆದು ಪೈಪ್ ಅಳವಡಿಸಲಾಗಿತ್ತು.’

‘ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಯವರೆಗೆ ಮಣ್ಣು ಅಗೆದು ಗುಂಡಿ ತೊಡಲಾಗಿತ್ತು. ಅದರೊಳಗೆ ಕೊಳವೆ ಅಳವಡಿಸಿ, ನಂತರ ಮಣ್ಣಿನಿಂದ ಮುಚ್ಚಲಾಗಿತ್ತು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮಣ್ಣು ಕಿತ್ತು ಹೋಗಿ, ದೊಡ್ಡ ಗುಂಡಿ ಸೃಷ್ಟಿಯಾಗಿತ್ತು. ಅದರೊಳಗೆ ನೀರು ನಿಂತುಕೊಂಡಿತ್ತು’ ಎಂದೂ ಪೊಲೀಸರು ವಿವರಿಸಿದರು.

‘ರಸ್ತೆ ಮೇಲೆ ನೀರು ನಿಂತಿರಬಹುದೆಂದು ಕೆಲ ಸವಾರರು, ದ್ವಿಚಕ್ರ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದರು. ಆದರೆ, ಗುಂಡಿಯಲ್ಲಿ ವಾಹನಗಳು ಇಳಿದು ಉರುಳಿ ಬೀಳುತ್ತಿದ್ದವು. ಇದರಿಂದಾಗಿ ಅನೇಕ ಸವಾರರು ಗಾಯಗೊಂಡಿದ್ದರು ಎಂಬ ಮಾಹಿತಿಯೂ ಇದೆ.’

‘ಖುರ್ಷಿದ್ ಅಹ್ಮದ್‌ ಅವರು ಕೆಲಸ ನಿಮಿತ್ತ ಇದೇ ರಸ್ತೆಯಲ್ಲಿ ಹೊರಟಿದ್ದರು. ಗುಂಡಿಯಲ್ಲಿ ಚಕ್ರಗಳು ಇಳಿದಾಗ ವಾಹನ ಉರುಳಿಬಿದ್ದಿತ್ತು. ತೀವ್ರ ಗಾಯಗೊಂಡು ನರಳುತ್ತಿದ್ದ ಖುರ್ಷಿದ್ ಅವರನ್ನು ಸ್ಥಳೀಯರೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಅವರು ಅಸುನೀಗಿದ್ದಾರೆ. ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ’ ಎಂದೂ ಪೊಲೀಸರು ವಿವರಿಸಿದರು.

‘ಅವೈಜ್ಞಾನಿಕ ಕೆಲಸ’

‘ಕೊಳವೆ ಅಳವಡಿಸಿದ ನಂತರ ವೈಜ್ಞಾನಿಕವಾಗಿ ಗುಂಡಿ ಮುಚ್ಚಬೇಕೆಂದು ಜಲಮಂಡಳಿಯು ಗುತ್ತಿಗೆದಾರನಿಗೆ ಸೂಚಿಸಿತ್ತು. ತರಾತುರಿಯಲ್ಲಿ ಪೈಪ್ ಅಳವಡಿಸಿದ್ದ ಗುತ್ತಿಗೆದಾರ, ಗುಂಡಿ ಮುಚ್ಚುವಾಗಲೂ ನಿರ್ಲಕ್ಷ್ಯ ವಹಿಸಿದ್ದ. ಹೀಗಾಗಿಯೇ ಮಣ್ಣು ಕೊಚ್ಚಿಕೊಂಡು ಹೋಗಿ ರಸ್ತೆಯಲ್ಲಿ ಗುಂಡಿ ಬಿದ್ದಿತ್ತು. ಇದುವೇ ಇದೀಗ ಅಂಗವಿಕಲರೊಬ್ಬರ ಸಾವಿಗೆ ಕಾರಣವಾಗಿದೆ’ ಎಂದು ಪೊಲೀಸರು ಹೇಳಿದರು.

‘ಅಪಘಾತ ಸಂಬಂಧ ಜಲಮಂಡಳಿ ಅಧಿಕಾರಿಗಳಿಂದ ಕೆಲ ಮಾಹಿತಿ ಕೋರಲಾಗಿದೆ. ಗುತ್ತಿಗೆದಾರ ತಲೆಮರೆಸಿಕೊಂಡಿದ್ದು, ಆತನನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ತಿಳಿಸಿದರು.

ರಸ್ತೆ ಗುಂಡಿಯಿಂದ ಮುಕ್ತಿ ಯಾವಾಗ? 

‘ಕಾಮಗಾರಿಗಳ ಹೆಸರಿನಲ್ಲಿ ನಗರದ ಹಲವು ರಸ್ತೆಗಳನ್ನು ಬೇಕಾಬಿಟ್ಟಿಯಾಗಿ ಅಗೆಯಲಾಗಿದೆ. ಈ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದ್ದು, ಸಾರ್ವಜನಿಕರು ಭಯದಲ್ಲೇ ವಾಹನ ಚಲಾಯಿಸುವಂತಾಗಿದೆ. ಕೆಲವೆಡೆ ಅಪಘಾತಗಳು ಸಂಭವಿಸಿ, ಗಾಯಾಗಳು ಆಸ್ಪತ್ರೆಗೆ ಸೇರುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿಗಳು ದೂರಿದರು.

‘ವಿಶ್ವೇಶ್ವರಯ್ಯ ಬಡಾವಣೆ ಹಾಗೂ ಸುತ್ತಮುತ್ತ ಪ್ರದೇಶಗಳ ರಸ್ತೆಗಳಲ್ಲಿ ಗುಂಡಿ ಹೆಚ್ಚಿವೆ. ಅಪಘಾತಗಳು ಸಂಭವಿಸಿ ಮತ್ತಷ್ಟು ಮಂದಿ ಜೀವ ಕಳೆದುಕೊಳ್ಳುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು’ ಎಂದೂ ಆಗ್ರಹಿಸಿದರು.

‘ಗುಂಡಿ ಮುಚ್ಚಲು ಕ್ರಮ ಕೈಗೊಳ್ಳದ ಬಿಡಿಎ’

ಅಪಘಾತ ಸಂಭವಿಸಿದ್ದ ರಸ್ತೆಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧೀನದಲ್ಲಿದೆ. ಈ ರಸ್ತೆ ಹದಗೆಟ್ಟಿದ್ದನ್ನು ಬಿಡಿಎ ಗಮನಕ್ಕೆ ತಂದಿದ್ದ ಬಿಬಿಎಂಪಿ ಅಧಿಕಾರಿಗಳು ಗುಂಡಿಗಳನ್ನು ದುರಸ್ತಿಪಡಿಸುವಂತೆ ಪತ್ರ ಬರೆದಿದ್ದರು. ಆದರೂ ಗುಂಡಿ ಮುಚ್ಚಲು ಬಿಡಿಎ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. 

ಉಲ್ಲಾಳು ವಾರ್ಡ್‌ನಲ್ಲಿ ಪ್ರಮುಖ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಮುಚ್ಚುವಂತೆ ಬಿಬಿಎಂಪಿಯ ಕೆಂಗೇರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ಬಿಡಿಎ ಅಧಿಕಾರಿಗಳಿಗೆ ಆ.23ರಂದು ಬರೆದಿದ್ದರು.

‘ರಸ್ತೆ ಗುಂಡಿಯಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ಫೋಟೊ ಸಮೇತ ದೂರುಗಳು ಬಂದಿದ್ದವು. ರಸ್ತೆಯಲ್ಲಿ ತಪಾಸಣೆ ನಡೆಸಿದಾಗ, ಗುಂಡಿಗಳು ಹೆಚ್ಚಿರುವುದು ಕಂಡುಬಂದಿದೆ. ಹೀಗಾಗಿ, ಗುಂಡಿ ಮುಚ್ಚಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸಿದರೆ, ಬಿಬಿಎಂಪಿ ಜವಾಬ್ದಾರಿಯಲ್ಲ’ ಎಂಬುದಾಗಿ ಪತ್ರದಲ್ಲಿ ಬಿಬಿಎಂಪಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಲು ಬಿಡಿಎ ಅಧಿಕಾರಿಗಳು ಲಭ್ಯವಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.