ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಪಾದಚಾರಿ ಸುರಂಗ ಮಾರ್ಗ ಇನ್ನು ಜನಸ್ನೇಹಿ

ಎಲ್ಲಾ ಕಡೆ ಸಿಸಿಟಿವಿ ಕ್ಯಾಮೆರಾ, ಪ್ಯಾನಿಕ್ ಬಟನ್ ಅಳವಡಿಕೆ: ಸುರಕ್ಷತೆ, ಸ್ವಚ್ಛತೆಗೂ ಆದ್ಯತೆ
Last Updated 27 ಜೂನ್ 2022, 21:22 IST
ಅಕ್ಷರ ಗಾತ್ರ

ಬೆಂಗಳೂರು: ಕತ್ತಲೆಯ ಗವಿಗಳಾಗಿ ಇತಿಹಾಸದ ಪುಟ ಸೇರಿದ್ದ ಪಾದಚಾರಿ ಸುರಂಗ ಮಾರ್ಗಗಳ ಚಿತ್ರಣ ಬದಲಿಸುವ ಕಾರ್ಯವನ್ನು ಬಿಬಿಎಂಪಿ ಕೈಗೊಂಡಿದ್ದು, ನವೀಕರಣಗೊಳಿಸಿ ಜನಸ್ನೇಹಿ ಆಗಿಸುತ್ತಿದೆ.

ಒಂದಿಲ್ಲೊಂದು ಕಾರಣಕ್ಕೆ ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸಲು ಸಿಲಿಕಾನ್ ಸಿಟಿಯ ಜನರು ನಿತ್ಯ ತಿಣುಕಾಡುತ್ತಾರೆ. ವಾಹನ ಸವಾರರಿಗೆ ತಮ್ಮ ಗುರಿ ತಲುಪುವ ಅವಸರವಾ ದರೆ, ಪಾದಚಾರಿಗಳಿಗೆ ರಸ್ತೆ ದಾಟುವ ಧಾವಂತ.

ವಾಹನ ಸಂಚಾರ ಕಡಿಮೆ ಇರುವಾಗ ಧೈರ್ಯ ಮಾಡಿ ರಸ್ತೆ ದಾಟೋಣವೆಂದರೆ ಅದಕ್ಕೂ ಅಡ್ಡಿಗಳಿವೆ. ರಸ್ತೆ ವಿಭಜಕಗಳನ್ನು ಎಲ್ಲೆಡೆ ಎದೆ ಮಟ್ಟಕ್ಕೆ ಎತ್ತರಿಸಲಾಗಿದ್ದು, ಅವುಗಳನ್ನು ದಾಟುವುದು ಅಸಾಧ್ಯ. ರಸ್ತೆ ದಾಟಲು ಝೀಬ್ರಾ ಕ್ರಾಸಿಂಗ್‌ ತಲುಪಲು ಕಿಲೋ ಮೀಟರ್‌ಗಟ್ಟಲೆ ನಡೆದು ಹೋಗಬೇಕು. ಹಸಿರು ದೀಪ ಮಿನುಗುವವರೆಗೆ ಅಲ್ಲಿ ಕಾದು ನಿಲ್ಲಬೇಕು.

ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಕಿರಿಕಿರಿ ಆಗದಂತೆ ಪಾಲಿಕೆ ಅಲ್ಲಲ್ಲಿ ಪಾದಚಾರಿ ಸುರಂಗ ಮಾರ್ಗಗಳನ್ನು (ಸಬ್‌ವೇ) ನಿರ್ಮಿಸಿದೆ. ಆದರೆ, ನಿರ್ವಹಣೆ ಇಲ್ಲದೇ ಈ ಸುರಂಗ ಮಾರ್ಗಗಳು ಅವ್ಯವಸ್ಥೆಯ ಗೂಡಾಗಿದ್ದವು. ಅನೈತಿಕ ಚಟುವಟಿಕೆಯ ತಾಣವಾಗಿ ಬದಲಾಗಿದ್ದವು. ಆದ್ದರಿಂದ ಹಲವು ಸುರಂಗ ಮಾರ್ಗಗಳಿಗೆ ಬೀಗ ಜಡಿಯಲಾಗಿತ್ತು.

ಅನುಪಯುಕ್ತವಾಗಿದ್ದ ಈ ಪಾದಚಾರಿ ಮಾರ್ಗಗಳ ಸುಧಾರಣೆಗೆ ಸರ್ಕಾರದ ಈ ಹಿಂದಿನ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಬಿಬಿಎಂಪಿಗೆ ಸೂಚನೆ ನೀಡಿದ್ದರು. ಫೆಬ್ರುವರಿಯಲ್ಲಿ ಉನ್ನತಾಧಿಕಾರಿಗಳ ಸಭೆಯಲ್ಲಿ ಅವರು ಈ ಮಾರ್ಗಗಳನ್ನು ಜನಸ್ನೇಹಿಯಾಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಪರಿಣಾಮವಾಗಿ ಈಗ ಧರ್ಮಾಂಬುಧಿ ರಸ್ತೆ, ಸುಜಾತಾ ಚಿತ್ರಮಂದಿರ, ಶೇಷಾದ್ರಿ ರಸ್ತೆ, ಕೆ.ಆರ್. ವೃತ್ತ, ನೃಪತುಂಗ ರಸ್ತೆ, ಸೆಂಚುರಿ ಕ್ಲಬ್, ರಾಜಭವನ ರಸ್ತೆ, ಬಸವೇಶ್ವರ ವೃತ್ತ, ಹೆಬ್ಬಾಳ, ಬಳ್ಳಾರಿ ರಸ್ತೆಯ ಆನಂದನಗರ, ಸಂಪಿಗೆ ರಸ್ತೆ, ಕಾರ್ಡ್ ರಸ್ತೆ, ಎನ್‌.ಆರ್. ರಸ್ತೆ ಮತ್ತು ರಾಜ್‌ಕುಮಾರ್ ಸಮಾಧಿ ರಸ್ತೆಯಲ್ಲಿನ ಸುರಂಗ ಮಾರ್ಗಗಳು ಗೃಹ ರಕ್ಷಕ ಸಿಬ್ಬಂದಿ ಕಾವಲಿನ ಜತೆಗೆ ಪಾದಚಾರಿ ಸ್ನೇಹಿಯಾಗಿ ಮಾರ್ಪಟ್ಟಿವೆ.

ಬಿಬಿಎಂಪಿ ಮೂಲಸೌಕರ್ಯ ವಿಭಾಗದಿಂದ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ₹63 ಲಕ್ಷ ವೆಚ್ಚದಲ್ಲಿ ಪ್ರತಿ ಸುರಂಗ ಮಾರ್ಗಕ್ಕೆ ತಲಾ ಎರಡು ಸಿಸಿಟಿವಿ ಕ್ಯಾಮೆರಾ ಮತ್ತು ಆತಂಕದ ಪರಿಸ್ಥಿತಿಯಲ್ಲಿ ಒತ್ತಬಹುದಾದ ಗುಂಡಿ (ಪ್ಯಾನಿಕ್ ಬಟನ್) ಅಳವಡಿಸಲಾಗಿದೆ. ಮಳೆ ಬಂದಾಗ ನೀರು ತುಂಬಿಕೊಂಡರೆ ಕೂಡಲೇ ಹೊರಹಾಕುವುದೂ ಸೇರಿ ನಿರಂತರವಾಗಿ ಸ್ವಚ್ಛಗೊಳಿಸಲು ಸಿಬ್ಬಂದಿಯನ್ನೂ ಬಿಬಿಎಂಪಿ ನಿಯೋಜಿಸಿಕೊಂಡಿದೆ.

ಬೆಳಿಗ್ಗೆ 7ರಿಂದ ರಾತ್ರಿ 9.30ರ ತನಕ ಈ ಪಾದಚಾರಿ ಸುರಂಗ ಮಾರ್ಗಗಳು ತೆರೆದಿರಲಿವೆ. ಈ ಸಂದರ್ಭದಲ್ಲಿ ಪಾದಚಾರಿಗಳ ಸುರಕ್ಷತೆ ಒದಗಿಸಲು ಗೃಹ ರಕ್ಷಕ ಸಿಬ್ಬಂದಿ ಎರಡು ಪಾಳಿಯಲ್ಲಿ ಕಾವಲಿದ್ದಾರೆ. ಗೃಹ ರಕ್ಷಕ ಸಿಬ್ಬಂದಿ ಬದಲಿಗೆ ಕೆಲವೆಡೆ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗಿದೆ.

‘ಸುರಂಗ ಮಾರ್ಗಗಳನ್ನು ದಿನಕ್ಕೆ ಎರಡು ಬಾರಿ ಸ್ವಚ್ಛಗೊಳಿಸಲಾಗುತ್ತಿದೆ. ನಾವು ಎರಡು ಪಾಳಿಯಲ್ಲಿ ಕಾವಲಿರುತ್ತೇವೆ. ಕಾನೂನುಬಾಹಿರ ಚಟುವಟಿಕೆ ಕಂಡ ಕೂಡಲೇ ಎಚ್ಚರಿಕೆ ನೀಡಿ ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ’ ಎಂದು ಕೆ.ಆರ್. ವೃತ್ತದಲ್ಲಿ ಕೆಲಸ ಮಾಡುತ್ತಿರುವ ಗೃಹ ರಕ್ಷಕ ಸಿಬ್ಬಂದಿ ಹೇಳಿದರು.

ಮೆಜೆಸ್ಟಿಕ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ವಿರೋಧ

ಮೆಜೆಸ್ಟಿಕ್‌ನಲ್ಲಿ ಇರುವ ಎರಡು ಸುರಂಗ ಮಾರ್ಗಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸ್ಥಳೀಯ ವ್ಯಾಪಾರಿಗಳಿಂದ ವಿರೋಧ ವ್ಯಕ್ತವಾಗಿದೆ.

ಸ್ಥಳೀಯರು ಈ ಸುರಂಗ ಮಾರ್ಗಗಳಲ್ಲಿ ವ್ಯಾಪಾರ–ವಹಿವಾಟು ನಡೆಸುತ್ತಿದ್ದಾರೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಿದರೆ ವಹಿವಾಟಿಗೆ ತೊಂದರೆ ಆಗಬಹುದು ಎಂಬ ಆತಂಕದಿಂದ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರ ನೆರವಿನೊಂದಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

ಸುರಂಗ ಮಾರ್ಗ ಬಳಕೆ ವಿರಳ

ಸುರಂಗ ಮಾರ್ಗಗಳು ಜನಸ್ನೇಹಿ ಆಗಿದ್ದರೂ ಪಾದಚಾರಿಗಳು ಈ ಮಾರ್ಗಗಳನ್ನು ಬಳಸುವುದು ವಿರಳವಾಗಿವೆ.

ಸುರಂಗ ಮಾರ್ಗಗಳು ಸುಸ್ಥಿತಿಯಲ್ಲಿ ಇರುವುದು ಇನ್ನೂ ಹಲವು ಪಾದಚಾರಿಗಳಿಗೆ ಗೊತ್ತಿಲ್ಲ. ಸುರಕ್ಷತೆ ಮತ್ತು ಸ್ವಚ್ಛತೆ ಇಲ್ಲ ಎಂದು ಭಾವಿಸಿ ಸುರಂಗ ಮಾರ್ಗಗಳ ಪಕ್ಕದಲ್ಲೇ ಪ್ರಾಣ ಪಣಕ್ಕಿಟ್ಟು ರಸ್ತೆ ದಾಟುತ್ತಿದ್ದಾರೆ.

ಮೆಟ್ಟಿಲುಗಳನ್ನು ಇಳಿದು ಸುರಂಗಗಳಲ್ಲಿ ಹಾದು ಹೋಗುವುದು ವೃದ್ಧರು ಮತ್ತು ಮಕ್ಕಳಿಗೆ ಕೊಂಚ ಪ್ರಯಾಸದ ಕೆಲಸ. ಆದ್ದರಿಂದ ವಾಹನಗಳ ನಡುವಯೇ ರಸ್ತೆ ದಾಟಲು ಪ್ರಯತ್ನಿಸುತ್ತಾರೆ. ಲಿಫ್ಟ್‌ ಅಥವಾ ಎಸ್ಕಲೇಟರ್‌ಗಳಿದ್ದರೆ ಸಹಾಯವಾಗುತ್ತಿತ್ತು ಎಂಬುದು ಪಾದಚಾರಿಗಳ ಅನಿಸಿಕೆ.

ಬಣ್ಣ ಬಳಿಯಲು ಯೋಜನೆ

‘ಸುರಂಗ ಮಾರ್ಗಗಳಲ್ಲಿ ಸುರಕ್ಷತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಬಣ್ಣ ಬಳಿಯುವುದು ಮತ್ತು ಹಾಳಾಗಿರುವ ಗೇಟ್‌ಗಳನ್ನು ಬದಲಿಸಲು ₹1.50 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ’ ಎಂದು ಬಿಬಿಎಂಪಿ ಮೂಲಸೌಕರ್ಯ ವಿಭಾಗದ ಎಂಜಿನಿಯರ್‌ ಒಬ್ಬರು ಹೇಳಿದರು.

‘ಎರಡು–ಮೂರು ದಿನಗಳಲ್ಲಿ ಟೆಂಡರ್ ಆಹ್ವಾನಿಸಲಾಗುತ್ತಿದ್ದು, ಇನ್ನು ಮೂರು ತಿಂಗಳಲ್ಲಿ ಸುರಂಗ ಮಾರ್ಗಗಳ ಸ್ವರೂಪವೇ ಬದಲಾಗಲಿದೆ. ಇನ್ನಷ್ಟು ಜನಸ್ನೇಹಿ ಆಗಲಿವೆ’ ಎಂದರು.

ಪೊಲೀಸ್ ನಿಯಂತ್ರಣಾ ಕೊಠಡಿಯಿಂದ ನಿಗಾ

ಸುರಂಗ ಮಾರ್ಗಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಮತ್ತು ಪ್ಯಾನಿಕ್ ಬಟನ್‌ಗಳ ಮಾಹಿತಿ ನೇರವಾಗಿ ಪೊಲೀಸ್ ನಿಯಂತ್ರಣಾ ಕೊಠಡಿಗೆ ರವಾನೆ ಆಗುವಂತೆ ವ್ಯವಸ್ಥೆ ಮಾಡಲಾಗಿದೆ.

ನೃಪತುಂಗ ರಸ್ತೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಕಚೇರಿ ಬಳಿ ಇರುವ ಸುರಂಗ ಮಾರ್ಗದಲ್ಲಿ ಮಾಡಿರುವ ಪ್ರಯೋಗ ಯಶಸ್ವಿಯಾಗಿದೆ. ಎಲ್ಲಾ ಸುರಂಗ ಮಾರ್ಗಗಳ ಕಾರ್ಯಚಟುವಟಿಕೆಗಳ ಮೇಲೆ ಪೊಲೀಸ್ ನಿಯಂತ್ರಣಾ ಕೊಠಡಿ ನಿಗಾ ವಹಿಸಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು.

ಕೆ.ಆರ್‌.ಮಾರುಕಟ್ಟೆಯಲ್ಲಿನ ಸುರಂಗ ಮಾರ್ಗವನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಆದ್ದರಿಂದ ಈ ಯೋಜನೆಯಿಂದ ಅದನ್ನು ಕೈಬಿಡಲಾಗಿದೆ. ಉಳಿದ ಎಲ್ಲಾ ಕಡೆಯೂ ಸುರಂಗ ಮಾರ್ಗಗಳನ್ನು ಸುಸ್ಥಿತಿಗೊಳಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT