ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಇಎಸ್‌ ವಿಶ್ವವಿದ್ಯಾಲಯ: ವಿದ್ಯಾರ್ಥಿವೇತನಕ್ಕೆ ₹ 10 ಕೋಟಿ

4,558 ಮಂದಿಗೆ ₹3.15 ಕೋಟಿ ಚೆಕ್‌ ವಿತರಣೆ
Last Updated 30 ನವೆಂಬರ್ 2019, 19:58 IST
ಅಕ್ಷರ ಗಾತ್ರ

ಬೆಂಗಳೂರು: ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನದ ಮೊತ್ತವನ್ನು ಮುಂದಿನ ವರ್ಷದಿಂದ ₹ 10 ಕೋಟಿಗೆ ಹೆಚ್ಚಿಸಲಾಗುವುದು ಎಂದು ಸಹ ಕುಲಾಧಿಪತಿ ಪ್ರೊ.ಡಿ.ಜವಾಹರ್‌ ಹೇಳಿದರು.

ರಿಂಗ್‌ರಸ್ತೆ ಬಳಿಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಶನಿವಾರ ಸಂಸ್ಥೆಯ 4,558 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ₹ 3.15 ಕೋಟಿ ವಿದ್ಯಾರ್ಥಿವೇತನದ ಚೆಕ್‌ ವಿತರಣಾ ಸಮಾರಂಭದಲ್ಲಿ ಅವರು ಈ ವಿಷಯ ಪ್ರಕಟಿಸಿದರು.

1991ರಲ್ಲಿ 14 ವಿದ್ಯಾರ್ಥಿಗಳಿಗೆ ₹ 14 ಸಾವಿರ ವಿದ್ಯಾರ್ಥಿವೇತನ ನೀಡಲಾಗಿತ್ತು. ಅಲ್ಲಿಂದೀಚೆಗೆ ಸಂಸ್ಥೆಯ ವತಿಯಿಂದ ಪ್ರತಿ ವರ್ಷ ನೀಡುವ ಮೊತ್ತ ಹೆಚ್ಚುತ್ತಲೇ ಇದೆ. ಸಂಶೋಧನಾ ಮನೋಭಾವ ಬೆಳೆಸುವಲ್ಲಿ ಇದು ಬಹಳ ದೊಡ್ಡ ಪಾತ್ರ ವಹಿಸುತ್ತಿದೆ ಎಂದರು.

ಕುಲಾಧಿಪತಿ ಪ್ರೊ.ಎಂ.ಆರ್‌.ದೊರೆಸ್ವಾಮಿ ಮಾತನಾಡಿ, ನೆರೆ ಪೀಡಿತ ಬಾಗಲಕೋಟೆ, ಚಿಕ್ಕೋಡಿ (ಬೆಳಗಾವಿ), ಗದಗ, ಹಾವೇರಿ ಜಿಲ್ಲೆಗಳಲ್ಲಿ ಸಂಸ್ಥೆಯ ವತಿಯಿಂದ ₹ 5 ಕೋಟಿ ವೆಚ್ಚದಲ್ಲಿ12 ಸರ್ಕಾರಿ ಶಾಲೆಗಳ ದುರಸ್ತಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಗುವಾಹಟಿ ಐಐಟಿಯ ನಿರ್ದೇಶಕ ಪ್ರೊ.ಟಿ.ಜಿ.ಸೀತಾರಾಂ, ದೇಶ ಇಂದು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ಸಂಘಟಿತ ಪ್ರಯತ್ನದ ಅಗತ್ಯ ಎಂದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ಅವರು ಪಿಇಎಸ್‌ ವಿಶ್ವವಿದ್ಯಾಲಯದ ಸಮರ್ಥ ಆಡಳಿತವನ್ನು ಕೊಂಡಾಡಿದರು.

ವಾಲ್‌ಮಾರ್ಟ್‌ ಲ್ಯಾಬ್ಸ್‌ನ ಉಪಾಧ್ಯಕ್ಷ ಹರಿ ವಾಸುದೇವ್, ವಿದ್ಯಾರ್ಥಿಗಳು ಮಹತ್ವದ ಸಾಧನೆ ಮಾಡಿ, ಜನರ ಜೀವನ ಮಟ್ಟ ಸುಧಾರಿಸುವ ಕೆಲಸ ಮಾಡಬೇಕು ಎಂದರು.

ಕುಲಪತಿ ಡಾ.ಕೆ.ಎನ್.ಬಿ.ಮೂರ್ತಿ, ಕುಲಸಚಿವ ಡಾ.ವಿ.ಕೃಷ್ಣಮೂರ್ತಿ, ಪರೀಕ್ಷಾ ನಿಯಂತ್ರಕ ಡಾ.ಆರ್‌.ವಾಸುದೇವನ್‌ ಅಯ್ಯರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT