ಭಾನುವಾರ, ಅಕ್ಟೋಬರ್ 24, 2021
21 °C
ಕನ್ನಡ ವೈದ್ಯ ಬರಹಗಾರರ ಬಳಗದ ಎರಡನೇ ರಾಜ್ಯ ಸಮ್ಮೇಳನ

ವೈದ್ಯ ಸಾಹಿತ್ಯ ಗಟ್ಟಿಯಾಗಬೇಕು: ಡಾ.ಆರ್‌.ಕೆ. ಸರೋಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವೈದ್ಯಕೀಯ ಸಾಹಿತ್ಯ ಮತ್ತಷ್ಟು ಗಟ್ಟಿಯಾಗಬೇಕಾದ ಅಗತ್ಯವಿದೆ’ ಎಂದು ರೇಡಿಯಾಲಜಿ ತಜ್ಞೆ ಹಾಗೂ ಕನ್ನಡ ವೈದ್ಯ ಬರಹಗಾರರ ಬಳಗದ ಎರಡನೇ ರಾಜ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಆರ್‌.ಕೆ. ಸರೋಜಾ ಅಭಿಪ್ರಾಯಪಟ್ಟರು.

ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ ಭಾನುವಾರ ಆಯೋಜಿಸಿದ್ದ ಕನ್ನಡ ವೈದ್ಯ ಬರಹಗಾರರ ಬಳಗದ ಎರಡನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಹೊಸ ವೈದ್ಯ ಸಾಹಿತಿಗಳು ಸೃಜನಶೀಲ ಸಾಹಿತ್ಯಕ್ಕೆ ಹೆಚ್ಚು ವಾಲಿಕೊಂಡಂತಿದೆ. ಕಥೆ, ಕವನ, ಸಣ್ಣಕಥೆ, ಕಾದಂಬರಿ ಇತ್ಯಾದಿ ಹೆಚ್ಚು ವಸ್ತು ನಿಷ್ಠವಾಗಬೇಕು. ‘ಕಟ್ ಆ್ಯಂಡ್‌ ಪೇಸ್ಟ್’ ಮಾಡಿ ವಾರಕ್ಕೆರಡು ಪುಸ್ತಕ ಬಿಡುಗಡೆ ಮಾಡಿದರೆ ಸತ್ವ ಉಳಿಯಲಾರದು’ ಎಂದು ಹೇಳಿದರು.

‘ವೈದ್ಯಕೀಯ ಸಾಹಿತ್ಯ ಇನ್ನೂ ಉತ್ತಮವಾಗಬೇಕಾಗಿದೆ. ಆಕರ್ಷಕ ವಸ್ತು, ವೈವಿಧ್ಯತೆ, ವೈದ್ಯ ವಿಜ್ಞಾನ ಮಾಹಿತಿಯನ್ನು ತಮ್ಮ ಚಿಕಿತ್ಸಾ ಅನುಭವಗಳೊಂದಿಗೆ ಹದವಾಗಿ ಬೆರೆಸಿ ಸಾಹಿತ್ಯದ ಅಂಚು ಕಟ್ಟಿ ಬರೆಯಬೇಕು' ಎಂದು ಸಲಹೆ ನೀಡಿದರು.

ಸಮ್ಮೇಳನ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್, ‘ಕನ್ನಡ ಸಾಹಿತ್ಯದ ವಿಸ್ತರಣೆಗೆ ವೈದ್ಯರ ಕೊಡುಗೆ ಅತ್ಯಮೂಲ್ಯವಾಗಿದೆ. ವೈದ್ಯರು ತಮ್ಮ ಕೆಲಸದ ಒತ್ತಡದ ನಡುವೆಯೂ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯ
ರಾಗಿರುವುದು ಶ್ಲಾಘನೀಯ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ 2019-20 ಮತ್ತು 20-21ನೇ ಸಾಲಿನ ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿಗಳನ್ನು ಡಾ. ಎಚ್‌.ಎಸ್‌. ಅನುಪಮಾ, ಡಾ. ಎಚ್‌.ಎಸ್‌. ಮೋಹನ್, ಡಾ. ಶಶಿಕಲಾ ಕೃಷ್ಣಮೂರ್ತಿ ಮತ್ತು ಡಾ. ವಿನೋದ ಕುಲಕರ್ಣಿ ಅವರಿಗೆ ಪ್ರದಾನ ಮಾಡಲಾಯಿತು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಎಂ. ಜಯಕರ, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯ ಅಧ್ಯಕ್ಷ ಡಾ. ಎಂ. ವೆಂಕಟಾಚಲಪತಿ, ಐಎಂಎ–ಕೆಎಸ್‌ಬಿ ಕನ್ನಡ ವೈದ್ಯ ಬರಹಗಾರರ ಬಳಗದ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಎಂ. ಉಳ್ತೂರು, ಐಎಂಎ ರಾಜ್ಯ ಶಾಖೆಯ ಗೌರವ ರಾಜ್ಯ ಕಾರ್ಯದರ್ಶಿ ಡಾ. ಎಸ್. ಎಂ. ಪ್ರಸಾದ್, ಡಾ. ಲಕ್ಷ್ಮೀಪತಿ ಬಾಬು ಇದ್ದರು.

ಸಮ್ಮೇಳನದ ಅಂಗವಾಗಿ ವೈದ್ಯಕೀಯ ಸಾಹಿತ್ಯದ ವಿವಿಧ ಮಜಲುಗಳು ಕುರಿತಂತೆ ಗೋಷ್ಠಿಗಳು ನಡೆದವು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು