ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆಯುತ್ತಿವೆ ಹೊಸ ಪೈಪ್‌ಗಳು!

ಎಚ್‌ಎಎಲ್‌ 3ನೇ ಹಂತದ ನ್ಯೂ ತಿಪ್ಪಸಂದ್ರ ವಾರ್ಡ್‌ನಲ್ಲಿ ಸಮಸ್ಯೆ
Last Updated 20 ಮಾರ್ಚ್ 2020, 23:06 IST
ಅಕ್ಷರ ಗಾತ್ರ

ಬೆ‌ಂಗಳೂರು: ನಗರದ 58ನೇ ವಾರ್ಡ್‌ನ ನ್ಯೂ ತಿಪ್ಪಸಂದ್ರ ಬಡಾವಣೆಯಲ್ಲಿ ನೀರಿನ ಹಳೆಯ ಪೈಪ್‌ಗಳನ್ನು ತೆಗೆದು ಹೊಸ ಪೈಪ್‌ಗಳನ್ನು ಹಾಕಲಾಗುತ್ತಿದೆ. ಆದರೆ, ಹೀಗೆ ಅಳವಡಿಸಿದ ಒಂದು ವಾರದೊಳಗೇ ಪೈಪ್‌ಗಳು ಒಡೆಯುತ್ತಿವೆ. ಹಳೆಯ ಪೈಪ್‌ಲೈನ್‌ ಇದ್ದಾಗ ಬರುತ್ತಿದ್ದಷ್ಟು ನೀರೂ ಈಗ ಪೂರೈಕೆಯಾಗುತ್ತಿಲ್ಲ.

ನೀರು ಸೋರಿಕೆ ತಡೆಗಟ್ಟುವ ಉದ್ದೇಶದಿಂದ ಈ ಪೈಪ್‌ಗಳನ್ನು ಹಾಕಲಾಗುತ್ತಿದೆ. ಆದರೆ, ಈಗ ಸರಿಯಾಗಿ ನೀರೇ ಬರುತ್ತಿಲ್ಲ.

‘ಹೊಸ ಕೊಳವೆಗಳನ್ನು ಹಾಕಿ ಒಂದು ವಾರವೂ ಆಗಿಲ್ಲ. ಕೊಳವೆಗಳು ಹಾಗೂ ಪೈಪಿನ ಭಾಗ (ಎಲ್ಬೊ) ಒಡೆದು ಹೋಗುತ್ತಿವೆ. ಒಡೆದ ಪೈಪ್‌ಗಳಲ್ಲಿ ಮಣ್ಣು ತುಂಬಿಕೊಳ್ಳುತ್ತಿರುವುದರಿಂದ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ’ ಎಂದು ನ್ಯೂ ತಿಪ್ಪಸಂದ್ರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಯ ಸದಸ್ಯ ವಿನಯ್ ಕುಮಾರ್ ದೂರಿದರು.

‘ಹೊಸ ಕೊಳವೆ ರಸ್ತೆಯಿಂದ 4 ಇಂಚಿನಿಂದ 5 ಇಂಚಿನಷ್ಟು ಮಾತ್ರ ಕೆಳಗೆ ಇದೆ. ಸಣ್ಣ ಕಾರು ಹೋದರೂ ಪೈಪ್‌ಗಳು ಒಡೆಯುತ್ತಿವೆ' ಎಂದು ಸಂಘದ ಸದಸ್ಯ ಪ್ರೊ. ಚಿರಂತನ ನಂಜಪ್ಪ ಹೇಳಿದರು.

'ಪೈಪ್‌ಲೈನ್‌ ಹಾಕಿದ ನಂತರವೂ ರಸ್ತೆ ಅಗೆಯಲಾಗುತ್ತಿದೆ. ಸದ್ಯ ಈಗ ಬೆಸ್ಕಾಂನಿಂದ 11ಕೆವಿ ಕೇಬಲ್ ಹಾಕಲಾಗುತ್ತಿದೆ. ಅದಕ್ಕೂ ರಸ್ತೆ ಅಗೆಯುತ್ತಿರುವುದರಿಂದ ನೀರಿನ ಪೈಪ್‌ಲೈನ್‌ಗೂ ಹಾನಿಯಾಗುತ್ತಿದೆ' ಎಂದು ಅವರು ಹೇಳಿದರು.

ಟ್ಯಾಂಕರ್‌ ಮಾಫಿಯಾ:‘ಮೊದಲಿದ್ದ ಪೈಪ್‌ಲೈನ್‌ ಹಾಕಿ 45 ವರ್ಷಗಳಾಗಿದ್ದವು. ಜಲಮಂಡಳಿ ಈಗ ಹೊಸ ಪೈಪ್‌ಲೈನ್‌ ಹಾಕುತ್ತಿದೆ. ಆದರೆ, ನೀರು ಪೂರೈಕೆ ಸಮರ್ಪಕವಾಗಿಲ್ಲ. ಪೈಪ್‌ಗಳಲ್ಲಿ ಬರುವ ಮಣ್ಣು ನೀರಿನಿಂದ ಮೀಟರ್‌ ಹಾಳಾಗುತ್ತಿದೆ. ದಿನ ಬಿಟ್ಟು ದಿನ ನೀರು ಬಿಡಲಾಗುತ್ತಿದೆ. ಆದರೆ, ನೀರಿನ ಪ್ರಮಾಣ ತುಂಬಾ ಕಡಿಮೆ ಇದೆ. ಅನಿವಾರ್ಯವಾಗಿ ಟ್ಯಾಂಕರ್ ನೀರಿನ ಮೊರೆ ಹೋಗಬೇಕಾಗಿದೆ. ಟ್ಯಾಂಕರ್‌ ನೀರು ಮಾಫಿಯಾ ಇಲ್ಲಿ ಕೆಲಸ ಮಾಡುತ್ತಿದೆ’ ಎಂದು ವಿನಯ್‌ ಕುಮಾರ್ ದೂರಿದರು.

ಗಾಳಿಗೂ ಬರುತ್ತೆ ಬಿಲ್ !

‘ಪೈಪ್‌ಗಳು ಒಡೆಯುತ್ತಿರುವುದರಿಂದ ಮಣ್ಣು ಸೇರಿಕೊಳ್ಳುತ್ತಿದೆ. ಪೈಪ್‌ ಮೂಲಕ ನೀರು ಸರಾಗವಾಗಿ ಬರುತ್ತಿಲ್ಲ. ಅದರ ಬದಲಾಗಿ ಗಾಳಿ ಸೇರಿಕೊಳ್ಳುತ್ತಿದೆ. ಇಂತಹ ಗಾಳಿಯಿಂದಲೂ ಮೀಟರ್‌ ಓಡುತ್ತಿದೆ. ನಮ್ಮ ಮನೆಯ ಮೀಟರ್‌ ಗಾಳಿಯಿಂದ 25 ಸಾವಿರ ಲೀಟರ್‌ನಷ್ಟು ಓಡಿತ್ತು. ಇದಕ್ಕಾಗಿ ನಾನು ₹800 ಶುಲ್ಕವನ್ನೂ ಪಾವತಿಸಬೇಕಾಯಿತು’ ಎಂದು ಚಿರಂತನ ದೂರಿದರು.

‘ಬೆಸ್ಕಾಂ ಕಾಮಗಾರಿಯಿಂದ ಪೈಪ್‌ಗೆ ಹಾನಿ’

‘ಹೊಸ ಪೈಪ್‌ಲೈನ್‌ ಹಾಕುವಾಗ ಗುಣಮಟ್ಟದ ಪೈಪ್‌ಗಳನ್ನೇ ಬಳಸಲಾಗಿದೆ. 100 ಎಂಎಂ ವ್ಯಾಸದ ಪೈಪ್‌ಗಳನ್ನು ಹಾಕಲಾಗಿದೆ. ಬೆಸ್ಕಾಂನ 11 ಕೆವಿ ಕೇಬಲ್‌ ಅಳವಡಿಕೆ ವೇಳೆ ಕೆಲವು ಪೈಪ್‌ಗಳಿಗೆ ಹಾನಿಯಾಗಿದೆಯೇ ವಿನಾ, ಜಲಮಂಡಳಿ ಕಾಮಗಾರಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ’ ಎಂದು ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಯೋಜನೆ) ಕೇಶವ ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಡೀ ಪ್ರದೇಶಕ್ಕೆ ಹೊಸ ಮಾರ್ಗ ಅಳವಡಿಸುವಾಗ ಕೆಲವು ಕಡೆ ಸಮಸ್ಯೆ ಇರಬಹುದು. ಬಹಳಷ್ಟು ‍ಪ್ರದೇಶಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು ಹೆಚ್ಚು ನೀರು ಪೂರೈಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT