ಭಾನುವಾರ, ಆಗಸ್ಟ್ 1, 2021
27 °C
ಬಿಬಿಎಂಪಿ: ಹಿರಿಯ ಸಿಬ್ಬಂದಿ ಕೋರಿಕೆ

ಕೋವಿಡ್-19 | 50 ವರ್ಷ ಮೀರಿದವರಿಗೆ ವಿನಾಯಿತಿ ನೀಡಿ

ಪ್ರವೀಣಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂ‍ಪಿಯಲ್ಲಿ 50 ವರ್ಷ ಮೇಲ್ಪಟ್ಟ ನಾಲ್ವರು ಸಿಬ್ಬಂದಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ, 50 ವರ್ಷ ಮೀರಿದವರು ಕರ್ತವ್ಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಬೇಕು ಎಂದು ಬಿಬಿಎಂಪಿ ಸಿಬ್ಬಂದಿ ಒತ್ತಾಯಿಸುತ್ತಿದ್ದಾರೆ.

ಪೊಲೀಸ್‌ ಇಲಾಖೆಯೂ ಸೇರಿದಂತೆ ಇತರ ಇಲಾಖೆಗಳಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಕರ್ತವ್ಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗುತ್ತಿದೆ. ಬಿಬಿಎಂಪಿಯಲ್ಲೂ ಇದನ್ನು ಅನುಸರಿಸಿ ಎಂದು ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೇಡಿಕೆ ಸಲ್ಲಿಸಿದ್ದಾರೆ.

‘ನಾವು ಇದುವರೆಗೂ ರಜೆ ಪಡೆಯದೇ ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದ ಕೆಲಸ ಮಾಡಿದ್ದೇವೆ. ಆದರೆ, ಈಗ ಸೋಂಕು ವ್ಯಾಪಕವಾಗಿ ಹರಡಿದೆ. 150ಕ್ಕೂ ಅಧಿಕ ಬಿಬಿಎಂಪಿ ಸಿಬ್ಬಂದಿಗೆ ಸೋಂಕು ತಗುಲಿದೆ. 50 ವರ್ಷ ದಾಟಿದವರಿಗೆ ಹಾಗೂ ಅಧಿಕ ರಕ್ತದೊತ್ತಡ, ಮಧುಮೇಹ, ಹೃದ್ರೋಗ ಮತ್ತಿತರ ಅನ್ಯ ಕಾಯಿಲೆಗಳನ್ನು ಹೊಂದಿದ್ದವರಿಗೆ ಈ ಸೋಂಕಿನಿಂದ ಅಪಾಯ ಹೆಚ್ಚು ಎಂದು ವೈದ್ಯರೇ ಹೇಳುತ್ತಾರೆ. ಇಂತಹವರು ಕರ್ತವ್ಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಬೇಕು’ ಎಂದು ಕಂದಾಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಒತ್ತಾಯಿಸಿದರು.

‘ಕೊರೊನಾ ಸೋಂಕು ನಿಯಂತ್ರಣಕ್ಕೆ ಬಿಬಿಎಂಪಿ ಮುಂಚೂಣಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂಬುದು ನಮಗೂ ಗೊತ್ತು. ಈ ಜವಾಬ್ದಾರಿ ಇರುವುದರಿಂದಲೇ ನಾವು ಇಷ್ಟು ದಿನ ಯಾವುದೇ ಚಕಾರ ಎತ್ತದೆ ಕರ್ತವ್ಯ ನಿರ್ವಹಿಸಿದ್ದೇವೆ. ಇದೇ ವೇಳೆ ಸಿಬ್ಬಂದಿಯ ಕ್ಷೇಮವನ್ನೂ ಬಿಬಿಎಂಪಿ ಹಾಗೂ ಸರ್ಕಾರ ನೋಡಿಕೊಳ್ಳಬೇಕು. ಈಗಾಗಲೇ ಕೆಲವು ಅಧಿಕಾರಿಗಳು ಸಕಾಲದಲ್ಲಿ ಚಿಕಿತ್ಸೆ ಸಿಗದೇ ಸಮಸ್ಯೆ ಎದುರಿಸಿದ್ದಾರೆ. ಹೆಚ್ಚು ಅಪಾಯ ಎದುರಿಸುವಂತಹ ಸಿಬ್ಬಂದಿಗೆ ವಿನಾಯಿತಿ ನೀಡುವ ಬಗ್ಗೆ ಪಾಲಿಕೆ ಉದಾರ ಮನೋಭಾವ ತೋರಬೇಕು’ ಎಂದು ಇನ್ನೊಬ್ಬರು ಅಧಿಕಾರಿ ಕೋರಿದರು.

‘ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿರುವ ಬಿಬಿಎಂಪಿ ನೌಕರರ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುವಂತೆ ನಾವು ಕೋರಿದ್ದೇವೆ’ ಎಂದು ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಸಂಘದ ಅಧ್ಯಕ್ಷ ಎ.ಅಮೃತರಾಜ್‌ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್, ‘ಬೇರೆ ಇಲಾಖೆಗಳು 50 ವರ್ಷ ದಾಟಿದವರಿಗೆ ಕರ್ತವ್ಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಿರಬಹುದು. ನಮ್ಮ ಪರಿಸ್ಥಿತಿ ಬೇರೆಯೇ ಇದೆ. ನಮ್ಮ ಮೇಲೆ ಹೆಚ್ಚಿನ ಹೊಣೆ ಇದೆ. ಸಾಧ್ಯವಿರುವ ಎಲ್ಲ ಮುನ್ನೆಚ್ಚರಿಕೆ ವಹಿಸಿ ನಾವು ಕರ್ತವ್ಯ ನಿರ್ವಹಿಸಬೇಕಾಗುತ್ತದೆ’ ಎಂದರು.

ವಿಶೇಷ ಆಯುಕ್ತ (ಆಡಳಿತ) ಅನ್ಬುಕುಮಾರ್‌, ‘55 ವರ್ಷ ಮೀರಿದ ಅಧಿಕಾರಿಗಳು, ಅಧಿಕ ರಕ್ತದೊತ್ತಡ, ಮಧುಮೇಹ, ಹೃದ್ರೋಗ ಮತ್ತಿತರ ಅನ್ಯ ಕಾಯಿಲೆ ಹೊಂದಿರುವವರು ಹಾಗೂ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅಧಿಕಾರಿಗಳು ಅಥವಾ ಸಿಬ್ಬಂದಿ ಯಾರಾದರೂ ಕೋವಿಡ್ ಕರ್ತವ್ಯದಿಂದ ವಿನಾಯಿತಿ ಕೋರಿದರೆ ಅವರಿಗೆ ನಾವು ಬೇರೆ ಹೊಣೆ ವಹಿಸಲು ಸಿದ್ಧ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಸಂಘದವರು ಕೋರಿಕೆ ಸಲ್ಲಿಸಿದ್ದು, ಇದಕ್ಕೆ ಒಪ್ಪಿದ್ದೇವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಪಾಲಿಕೆ ಸಿಬ್ಬಂದಿಗೆ ಪ್ರತ್ಯೇಕ ಆಸ್ಪತ್ರೆ ನಿಗದಿಗೆ ಒಪ್ಪದ ಆಯುಕ್ತ
‘ಕೊರೊನಾ ಸೋಂಕಿನಿಂದ ಬಳಲುತ್ತಿರುವ ಬಿಬಿಎಂಪಿ ಸಿಬ್ಬಂದಿಯ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ನಿಗದಿ ಪಡಿಸಲು ಸಾಧ್ಯವಿಲ್ಲ. ನಾವು ಒಬ್ಬೊಬ್ಬರಿಗೆ ಒಂದೊಂದು ಮಾನದಂಡ ಅನುಸರಿಸಲು ಆಗದು’ ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ.

ಚಿಕಿತ್ಸೆ ಪಡೆಯಲು ಬಿಬಿಎಂಪಿ ಸಿಬ್ಬಂದಿಯೇ ಸಮಸ್ಯೆ ಎದುರಿಸುತ್ತಿದ್ದಾರೆ. ಪಾಲಿಕೆ ಸಿಬ್ಬಂದಿಯ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆಯನ್ನು ನಿಗದಿಪಡಿಸುವಂತೆ ಬಿಬಿಎಪಿ ಅಧಿಕಾರಿಗಳ ಮತ್ತು ನೌಕರರ ಸಂಘ ಒತ್ತಾಯಿಸಿತ್ತು. ಇಲ್ಲದಿದ್ದರೆ ಕರ್ತವ್ಯ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಆಯುಕ್ತರು, ‘ಚಿಕಿತ್ಸೆಯ ಅಗತ್ಯ ಇರುವ ಬಿಬಿಎಂಪಿ ನೌಕರರನ್ನು ವಿಳಂಬ ಮಾಡದೇ ದಾಖಲಿಸಿಕೊಳ್ಳುವಂತೆ ಎಲ್ಲ ಆಸ್ಪತ್ರೆಗಳನ್ನೂ ಕೋರುತ್ತೇವೆ. ನಮ್ಮವರೂ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು’ ಎಂದರು.

‘ಪ್ರತ್ಯೇಕ ಆಸ್ಪತ್ರೆ ನಿಗದಿಗೆ ಒಪ್ಪದಿದ್ದರೂ ಅಗತ್ಯ ಬಿದ್ದರೆ ಸಿಬ್ಬಂದಿಗೆ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದ್ದಾರೆ. ಹಾಗಾಗಿ ಪ್ರತಿಭಟನೆ ನಡೆಸುವುದಿಲ್ಲ’ ಎಂದು ಅಮೃತರಾಜ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು