ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಆರ್.ಪುರ | ಹೊರಗಿನವರಿಗೆ ನಿವೇಶನ: ಮೇಡಹಳ್ಳಿ ನಿವಾಸಿಗಳ ಆಕ್ರೋಶ

Published 3 ಜುಲೈ 2024, 17:53 IST
Last Updated 3 ಜುಲೈ 2024, 17:53 IST
ಅಕ್ಷರ ಗಾತ್ರ

ಕೆ.ಆರ್.ಪುರ: ಸ್ಥಳೀಯರಿಗೆ ನಿವೇಶನಗಳನ್ನು ಮಂಜೂರು ಮಾಡದೆ ಹೊರಗಿನವರಿಗೆ ನೀಡಲಾಗಿದೆ ಎಂದು ಮೇಡಹಳ್ಳಿಯ ಗ್ರಾಮಸ್ಥರು ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

ಮೇಡಹಳ್ಳಿಯ ಜ್ಯೋತಿನಗರಕ್ಕೆ ಅಧಿಕಾರಿಗಳು ಜಮೀನು ಸರ್ವೇ ಮಾಡಲು ಬುಧವಾರ ಬಂದಾಗ ಈ ಆಕ್ರೋಶ ವ್ಯಕ್ತವಾಯಿತು.

ಬಿದರಹಳ್ಳಿ ಹೋಬಳಿಯ ಮೇಡಹಳ್ಳಿ ಗ್ರಾಮದ ಸರ್ವೇ ನಂಬರ್‌ 89ರಲ್ಲಿ 4 ಎಕರೆ 15 ಗುಂಟೆ ಜಮೀನನ್ನು ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಲಾಗಿತ್ತು. ಆದರೆ, ನಿವೇಶನ ಹಂಚುವಾಗ ಸ್ಥಳೀಯರಿಗೆ ಆದ್ಯತೆ ನೀಡದೆ ತಾರತಮ್ಯ ನೀತಿಯನ್ನು ಅಧಿಕಾರಿಗಳು ಅನುಸರಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.

‘ಹಿಂದೆ ಇಲ್ಲಿ 150 ಅಡಿ ಅಳದ ಕಲ್ಲು ಕ್ವಾರಿ ಇತ್ತು. ಮೇಡಹಳ್ಳಿ ಹಾಗೂ ಜ್ಯೋತಿನಗರ ಗ್ರಾಮಸ್ಥರು ಸೇರಿ ಮಣ್ಣು ಮುಚ್ಚಿ ಸಮತಟ್ಟು ಮಾಡಿ ಜಮೀನು ಕಾಪಾಡಿಕೊಂಡು ಬಂದಿದ್ದರು. ಕೊಳೆಗೇರಿ ಮಂಡಳಿಗೆ ಹಸ್ತಾಂತರವಾದ ಮೇಲೆ ಇಲ್ಲಿನವರಿಗೆ ನಿವೇಶನ ನೀಡದೇ ದೇವಸಂದ್ರದ ನಿವಾಸಿಗಳಿಗೆ ನೀಡಲಾಗಿದೆ’ ಎಂದು ಮೇಡಹಳ್ಳಿಯ ಮಲ್ಲೇಶ್ ದೂರಿದರು.

ಸ್ಥಳೀಯರಿಗೆ ನಿವೇಶನ ನೀಡಬೇಕು. ಜೊತೆಗೆ ಆಟದ ಮೈದಾನ, ಉದ್ಯಾನ ಸೇರಿದಂತೆ ಸಾರ್ವಜನಿಕರಿಗೆ ಉಪಯುಕ್ತವಾಗುವ ಉದ್ದೇಶಗಳಿಗೆ ಬಳಸಲು ಮೀಸಲಿಡಬೇಕು ಎಂದು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ಸ್ಥಳೀಯರಿಗೆ ನಿವೇಶನ ನೀಡಬೇಕು. ಒತ್ತುವರಿ ಆಗಿರುವ ಇನ್ನುಳಿದ ಜಮೀನನ್ನು ಸರ್ವೇ ಮಾಡಿಸಿ ಒತ್ತುವರಿ ತೆರವುಗೊಳಿಸಿ ಸ್ಥಳೀಯರಿಗೆ ನೀಡಬೇಕು’ ಎಂದು ಮೇಡಹಳ್ಳಿ ರಾಕೇಶ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT