ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ.ಎಂ. ಸ್ವನಿಧಿ– ಸಾಲ ನೀಡುವಿಕೆ ಚುರುಕುಗೊಳಿಸಿ

ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಸೂಚನೆ
Last Updated 24 ಫೆಬ್ರುವರಿ 2021, 21:04 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ‘ಪ್ರಧಾನ ಮಂತ್ರಿ ಸ್ವ-ನಿಧಿ’ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ವಿವಿಧ ಬ್ಯಾಂಕ್‌ಗಳ ಮೂಲಕ ₹ 10 ಸಾವಿರದವರೆಗೆ ಕಿರು ಸಾಲ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯಕ್ರಮ ಕೈಗೊಳ್ಳಬೇಕು ಎಂದುಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೂಚನೆ ನೀಡಿದರು.

ಪ್ರಧಾನಮಂತ್ರಿಯವರ ಆತ್ಮನಿರ್ಭರ್ ಘೋಷವಾಕ್ಯದಂತೆ ಬೀದಿ ವ್ಯಾಪಾರಿಗಳು ಸ್ವಾವಲಂಬಿ ಬದುಕು ಕಟ್ಟಲು ನೆರವಾಗುವ ಯೋಜನೆಯ ಪ್ರಗತಿಯನ್ನು ಆಯುಕ್ತರು ಬುಧವಾರ ಪರಿಶೀಲಿಸಿದರು.

ಪಾಲಿಕೆಯ ಎಲ್ಲ ವಾರ್ಡ್‌ಗಳ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ಬೀದಿ ವ್ಯಾಪಾರಿಗಳ ಸಮೀಕ್ಷೆ ಕಾರ್ಯ ನಡೆಸಬೇಕು. ಸಮೀಕ್ಷೆಯಲ್ಲಿ ಗುರುತಿಸಿರುವ ಎಲ್ಲ ಬೀದಿ ವ್ಯಾಪಾರಿಗಳಿಗೆ ಕಿರು ಸಾಲ ಪಡೆಯುವ ಅರ್ಜಿಗಳನ್ನು ನೀಡಿ, ಅದನ್ನು ಭರ್ತಿ ಮಾಡಲು ನೆರವಾಗಬೇಕು. ಅರ್ಜಿಗಳನ್ನು ಪಿಎಂ ಸ್ವ-ನಿಧಿ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಿ ಬ್ಯಾಂಕ್‌ಗಳಿಂದ ತ್ವರಿತವಾಗಿ ಕಿರು ಸಾಲ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಈ ಯೋಜನೆಯಡಿ ಸಲ್ಲಿಕೆಯಾಗುವ ಅರ್ಜಿಗಳಿಗೆ ತ್ವರಿತವಾಗಿ ಸಾಲ ನೀಡಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೂ ಆಯುಕ್ತರು ಸೂಚಿಸಿದರು.

ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ, ಪೊಲೀಸ್ ಸಿಬ್ಬಂದಿ, ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು, ಎಲ್ಲ ವಲಯಗಳ ಜಂಟಿ ಆಯುಕ್ತರು ಉಪಸ್ಥಿತರಿದ್ದರು.

ಅಂಕಿ ಅಂಶ

85,400

ಬಿಬಿಎಂಪಿ ವ್ಯಾಪ್ತಿಯಲ್ಲಿ ಪಿಎಂ ಸ್ವನಿಧಿ ಯೋಜನೆ ಅಡಿ ಸಾಲ ಒದಗಿಸಲು ನಿಗದಿಪಡಿಸಿದ ಗುರಿ

64,147

ಇದುವರೆಗೆ ವಿತರಿಸಿರುವ ಅರ್ಜಿಗಳು

39,512

ಅರ್ಜಿಗಳನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ

ಮಕ್ಕಳ ಭಿಕ್ಷಾಟನೆ ಸಮೀಕ್ಷೆ: ತರಬೇತಿ ಇಂದು

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ಬದಿಗಳಲ್ಲಿ ಭಿಕ್ಷಾಟನೆ ಮಾಡುತ್ತಿರುವ ಮತ್ತು ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಮಕ್ಕಳನ್ನು ನಿಖರವಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸುವ ತಂಡಕ್ಕೆ ಇದೇ 25ರಂದು (ಗುರುವಾರ) ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳು ಯಾವ ಕಾರಣಕ್ಕಾಗಿ ಭಿಕ್ಷಾಟನೆ ಅಥವಾ ವ್ಯಾಪಾರದಲ್ಲಿ ತೊಡಗಿದ್ದಾರೆ, ಅವರ ಬಳಿ ನಯವಾಗಿ ಮಾತನಾಡಿ ಮಾಹಿತಿ ಪಡೆಯುವ ಬಗೆ ಹೇಗೆ ಎಂಬ ಕುರಿತು ತಜ್ಞರು ತರಬೇತಿ ನೀಡಲಿದ್ದಾರೆ.

ನಗರದ ಬೀದಿಗಳಲ್ಲಿ ಹಾಗೂ ಸಂಚಾರ ಸಿಗ್ನಲ್‌ಗಳಲ್ಲಿ ಭಿಕ್ಷಾಟನೆ ಹಾಗೂ ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುವ 886 ಮಕ್ಕಳನ್ನು ಗುರುತಿಸಲಾಗಿದೆ. ಚಿಣ್ಣರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯದಲ್ಲಿ ತೊಡಗಿರುವ ತಾಣಗಳನ್ನೂ (ಹಾಟ್ ಸ್ಪಾಟ್‌) ಪಟ್ಟಿಮಾಡಲಾಗಿದೆ. ಸಮೀಕ್ಷಾ ಕಾರ್ಯಕರ್ತರು ಇಂತಹ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.

‘ಮಾಹಿತಿ ಸಂಗ್ರಹಿಸುವ ತಂಡಗಳ ಸಮೀಕ್ಷೆ ಕಾರ್ಯಕ್ಕೆ ವಾಹನಗಳನ್ನು ಒದಗಿಸಬೇಕು. ಇಂತಹ ಕಾರ್ಯಕರ್ತರಿಗೆ ಉಪಾಹಾರ ಮತ್ತು ಊಟದ ವ್ಯವಸ್ಥೆ ಮಾಡಬೇಕು’ ಎಂದು ಬಿಬಿಎಂಪಿ ಆಯುಕ್ತರು ಎಲ್ಲ ವಲಯಗಳ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.

ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT