ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಎಂಎಸ್‌ಎಸ್‌ವೈ ಯೋಜನೆಯ ಆಸ್ಪತ್ರೆ| ಪ್ರಯೋಗಾಲಯ ಸ್ಥಗಿತ: ರೋಗಿಗಳ ಪರದಾಟ

ಪಿಎಂಎಸ್‌ಎಸ್‌ವೈ ಯೋಜನೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸಿಟಿ ಸ್ಕ್ಯಾನ್ ಸೇರಿ ವಿವಿಧ ಪರೀಕ್ಷೆಗಳಿಗೆ ಸಮಸ್ಯೆ
Published 29 ಆಗಸ್ಟ್ 2024, 0:25 IST
Last Updated 29 ಆಗಸ್ಟ್ 2024, 0:25 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯ (ಪಿಎಂಎಸ್‌ಎಸ್‌ವೈ) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಯೋಗಾಲಯವು ಹಲವು ದಿನಗಳಿಂದ ಸ್ಥಗಿತಗೊಂಡಿದೆ. ಇದರಿಂದಾಗಿ ಸಿಟಿ ಸ್ಕ್ಯಾನ್‌, ಎಕ್ಸ್‌–ರೇ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ರೋಗಿಗಳು ಪರದಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಈ ಆಸ್ಪತ್ರೆಯು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ (ಬಿಎಂಸಿಆರ್‌ಐ) ಕಾರ್ಯನಿರ್ವಹಿಸುತ್ತಿದೆ. 203 ಹಾಸಿಗೆಗಳೊಂದಿಗೆ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಆಸ್ಪತ್ರೆಯಲ್ಲಿ, ಹೃದಯ ವಿಜ್ಞಾನ, ನರ ವಿಜ್ಞಾನ, ಪ್ಲಾಸ್ಟಿಕ್ ಸರ್ಜರಿ ಸೇರಿ ವಿವಿಧ ವಿಭಾಗಗಳಿವೆ. ಪ್ರತಿನಿತ್ಯ 500ರಿಂದ 800 ಹೊರರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಾರೆ.

ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬರುವವರಲ್ಲಿ ಹೆಚ್ಚಿನವರು ಒಂದಲ್ಲ ಒಂದು ಪರೀಕ್ಷೆಗೆ ಒಳಗಾಗಬೇಕಾ ಗುತ್ತದೆ. ಆದರೆ, ಅಲ್ಲಿನ ಪ್ರಯೋಗಾಲಯ ನಿರ್ವಹಣೆ ಮಾಡುತ್ತಿದ್ದ ಸಂಸ್ಥೆಯ ಗುತ್ತಿಗೆ ಅವಧಿ ಮುಕ್ತಾಯಗೊಂಡಿದ್ದರಿಂದ ಪ್ರಯೋಗಾಲಯವನ್ನು ಸ್ಥಗಿತಗೊಳಿಸ ಲಾಗಿದೆ. ಇದರಿಂದ ರೋಗಿಗಳಿಗೆ ಪರೀಕ್ಷೆ ಮಾಡಿಸಿಕೊಳ್ಳುವುದು ಸಮಸ್ಯೆ ಯಾಗಿದ್ದು, ಚಿಕಿತ್ಸೆಯೂ ವಿಳಂಬ ಆಗುತ್ತಿದೆ. ಸರ್ಕಾರಿ– ಖಾಸಗಿ ಸಹಭಾಗಿತ್ವ ದಲ್ಲಿ (ಪಿಪಿಪಿ)ಕಾರ್ಯನಿರ್ವಹಿಸುತ್ತಿದ್ದ ಈ ಪ್ರಯೋಗಾಲಯವನ್ನು, ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ಸ್ ಇಂಡಿಯಾ ಸಂಸ್ಥೆಯು ನಿರ್ವಹಣೆ ಮಾಡುತ್ತಿತ್ತು. ವಾರದ ಎಲ್ಲ ದಿನ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದ ಈ ಪ್ರಯೋಗಾಲಯದಲ್ಲಿ, ಸಿಟಿ ಸ್ಕ್ಯಾನ್, ಎಂಆರ್‌ಐ, ಎಕ್ಸ್‌–ರೇ, ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್, ಮೂತ್ರ ಹಾಗೂ ರಕ್ತದ ಮಾದರಿ ಪರೀಕ್ಷೆ ಸೇರಿ ವಿವಿಧ ಪರೀಕ್ಷೆ ಗಳನ್ನು ರಿಯಾಯಿತಿ ದರದಲ್ಲಿ ನಡೆಸಲಾಗುತ್ತಿತ್ತು.

ಹೊರಗಡೆ ಪರೀಕ್ಷೆಗೆ ಸೂಚನೆ: ಆಸ್ಪತ್ರೆಯಲ್ಲಿ ಪ್ರಯೋಗಾಲಯ ಸ್ಥಗಿತವಾಗಿರುವುದರಿಂದ ಹೊರಗಡೆ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ರೋಗಿಗಳಿಗೆ ವೈದ್ಯರು ಸೂಚಿಸುತ್ತಿ ದ್ದಾರೆ. ಬಿಎಂಸಿಆರ್‌ಐ ಆಸ್ಪತ್ರೆಗಳ ಸಂಕೀರ್ಣದಲ್ಲಿರುವ ಪಿಎಂಎಸ್‌ಎಸ್‌ವೈ ಕಟ್ಟಡದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಅವರ ಸಹ ಮಾಲೀಕತ್ವದ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ಸ್ ಇಂಡಿಯಾ ಪ್ರಯೋಗಾಲಯವನ್ನು 2016ರಲ್ಲಿ ಆರಂಭಿಸಲಾಗಿತ್ತು. ಅದಕ್ಕೆ ವಿರೋಧ ವ್ಯಕ್ತವಾದ್ದರಿಂದ ಯತೀಂದ್ರ ಅವರು ಕಂಪನಿಯಿಂದ ಹೊರ ನಡೆದಿದ್ದರು. ಆ ವೇಳೆ ವಿರೋಧಗಳ ಮಧ್ಯೆಯೂ ಪಿಎಂಎಸ್‌ಎಸ್‌ವೈ ಆಸ್ಪತ್ರೆಯು ಮ್ಯಾಟ್ರಿಕ್ಸ್ ಸಂಸ್ಥೆಯೊಂದಿಗಿನ ತನ್ನ ಒಡಂಬಡಿಕೆ ಮುಂದುವರಿಸಿತ್ತು.

‘ತಂದೆಗೆ ಹೃದಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಬರಲಾಗಿತ್ತು. ವೈದ್ಯರು ಸಿಟಿ ಸ್ಕ್ಯಾನ್ ಮಾಡಿಸಲು ಸೂಚಿಸಿದ್ದಾರೆ. ಆಸ್ಪತ್ರೆಯ ಪ್ರಯೋಗಾಲಯ ಸ್ಥಗಿತದಿಂದ ಪರೀಕ್ಷೆ ಮಾಡಿಸುವುದು ಸಮಸ್ಯೆ ಯಾಗಿದ್ದು, ಖಾಸಗಿ ಪ್ರಯೋಗಾಲಯಕ್ಕೆ ತೆರಳಬೇಕಾಗಿದೆ’ ಎಂದು ಚಾಮರಾಜಪೇಟೆ ನಿವಾಸಿಯೊಬ್ಬರು ತಿಳಿಸಿದರು.

ಇನ್ಫೊಸಿಸ್ ಪ್ರಯೋಗಾಲಯದಲ್ಲಿ ದಟ್ಟಣೆ

ಪಿಎಂಎಸ್‌ಎಸ್‌ವೈನ ಪ್ರಯೋಗಾಲಯ ಸ್ಥಗಿತದಿಂದ ಬಿಎಂಸಿಆರ್‌ಐ ಆಸ್ಪತ್ರೆಗಳ ಸಂಕೀರ್ಣದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಯ ಇನ್ಫೊಸಿಸ್ ಪ್ರಯೋಗಾಲಯದಲ್ಲಿ ರೋಗಿಗಳ ದಟ್ಟಣೆ ಹೆಚ್ಚಿದೆ.

ಮೂರು ಮಹಡಿಗಳ ಈ ಪ್ರಯೋಗಾಲಯದಲ್ಲಿ ರಕ್ತ ಹಾಗೂ ಮೂತ್ರ ಸೇರಿ ವಿವಿಧ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈ ಪ್ರಯೋಗಾಲಯಕ್ಕೆ ವಿಕ್ಟೋರಿಯಾ ಆಸ್ಪತ್ರೆಯ ರೋಗಿಗಳ ಜತೆಗೆ ವಾಣಿವಿಲಾಸ, ಟ್ರಾಮಾ ಕೇರ್ ಕೇಂದ್ರ, ನೆಫ್ರೊ–ಯೂರಾಲಜಿ ಸಂಸ್ಥೆ ಸೇರಿ ಸುತ್ತಮುತ್ತಲಿನ ಆಸ್ಪತ್ರೆಗಳ ರೋಗಿಗಳೂ ಬರುತ್ತಾರೆ. ಈಗ ಪಿಎಂಎಸ್‌ಎಸ್‌ವೈ ಆಸ್ಪತ್ರೆಯ ರೋಗಿಗಳೂ ಬರುತ್ತಿ ರುವುದರಿಂದ ಪರೀಕ್ಷೆಗೆ ಸರದಿಯಲ್ಲಿ ದಿನಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ವರದಿಯೂ ವಿಳಂಬವಾಗುತ್ತಿದೆ.

‘ಪಿಎಂಎಸ್‌ಎಸ್‌ವೈ ಆಸ್ಪತ್ರೆಯು ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ಸ್ ಇಂಡಿಯಾ ಜೊತಗೆ ಏಳು ವರ್ಷಗಳಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ನಿಯಮಾನುಸಾರ ಏಳು ವರ್ಷಕ್ಕಿಂತ ಹೆಚ್ಚು ಅವಧಿಗೆ ನಿರ್ವಹಣಾ ಗುತ್ತಿಗೆ ನೀಡಲು ಅವಕಾಶವಿಲ್ಲ. ಅಲ್ಲದೆ, ರಾಷ್ಟ್ರೀಯ ವೈದ್ಯಕೀಯ ಪರಿಷತ್ತು (ಎನ್‌ಎಂಸಿ) ನಿಯಮದ ಪ್ರಕಾರ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪಿಪಿಪಿ ಮಾದರಿ ಪ್ರಯೋಗಾಲಯ ತೆರೆಯಲು ಖಾಸಗಿಯವರಿಗೆ ಅವಕಾಶ ನೀಡಬಾರದೆಂದು ವೈದ್ಯಕೀಯ ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ.

ಹೀಗಾಗಿ, ಆಸ್ಪತ್ರೆಯಿಂದಲೇ ಪ್ರಯೋಗಾಲಯ ನಡೆಸುವ ಕುರಿತು ಚರ್ಚೆ ನಡೆಯುತ್ತಿದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ವೈದ್ಯರೊಬ್ಬರು ತಿಳಿಸಿದರು.

ಗುತ್ತಿಗೆ ಅವಧಿ ಮುಕ್ತಾಯಗೊಂಡಿದ್ದರಿಂದಪ್ರಯೋಗಾಲಯ ಸ್ಥಗಿತವಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಸಲಾಗುವುದುಡಾ.
ದಿವ್ಯಪ್ರಕಾಶ್ ಎಂ. ಪಿಎಂಎಸ್‌ಎಸ್‌ವೈ ವಿಶೇಷಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT