ಬುಧವಾರ, ಮೇ 27, 2020
27 °C

ಕಾಡುಪ್ರಾಣಿ ಬೇಟೆಗೆ ಹೊಂಚು-ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಡುಪ್ರಾಣಿಗಳ ಬೇಟೆಗೆ ಹೊಂಚುಹಾಕುತ್ತಿದ್ದ ಕಳ್ಳಬೇಟೆಗಾರರ ತಂಡವನ್ನು ಬೆನ್ನಟ್ಟಿರುವ ಕಗ್ಗಲೀಪುರ ವಲಯದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡ ಒಬ್ಬ ಆರೋಪಿಯನ್ನು ಶನಿವಾರ ಬಂಧಿಸಿದೆ. ಆತನ ಜೊತೆಗಿದ್ದ ಇತರ ನಾಲ್ವರು ಪರಾರಿಯಾಗಿದ್ದಾರೆ. ಆರೋಪಿಯಿಂದ ದ್ವಿಚಕ್ರವಾಹನ ಹಾಗೂ ಟೆಲಿಸ್ಕೋಪಿಕ್‌ ರೈಫಲ್‌ ವಶಪಡಿಸಿಕೊಳ್ಳಲಾಗಿದೆ.

ಬನ್ನೇರುಘಟ್ಟ ರಸ್ತೆ ಬಳಿಯ ಬಸವನಪುರ ನಿವಾಸಿ ಥಾಮಸ್‌ (45) ಬಂಧಿತ ಆರೋಪಿ.

‘ಕಗ್ಗಲೀಪುರ ವಲಯದ ಜಿಲ್ಲಾ ಅರಣ್ಯದ ಬಳಿ ಆರೋಪಿಗಳು ಬೇಟೆಗೆ ಹೊಂಚು ಹಾಕಿದ್ದರು. ನಮ್ಮ ತಂಡ ಅದೇ ವೇಳೆ ಗಸ್ತಿಗೆ ಅಲ್ಲಿಗೆ ತೆರಳಿತ್ತು. ನಮ್ಮನ್ನು ಕಂಡೊಡನೆಯೇ ಆರೋಪಿಗಳು ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಅವರಲ್ಲಿ ಒಬ್ಬನನ್ನು ಬಂಧಿಸಿದ್ದೇವೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಥಾಮಸ್‌ ವೃತ್ತಿಪರ ಬೇಟೆಗಾರ. ರೈಫಲ್‌ ಕೂಡಾ ಆತನ ಹೆಸರಿನಲ್ಲೇ ನೋಂದಣಿಯಾಗಿದೆ. ಒಂದೂವರೆ ವರ್ಷಗಳಿಂದ ಬೇಟೆಗೆ ಹೋಗುತ್ತಿಲ್ಲ. ಸಹವರ್ತಿಗಳು ಪುಸಲಾಯಿಸಿ ಕರೆತಂದಿದ್ದರು ಎಂದು ಆತ ಹೇಳಿಕೆ ನೀಡಿದ್ದಾನೆ. ಆತನ ಜೊತೆಗಿದ್ದ ಇತರ ನಾಲ್ವರಿಗಾಗಿ ಹುಡುಕುತ್ತಿದ್ದು, ಅವರನ್ನೂ ಬಂಧಿಸುತ್ತೇವೆ’ ಎಂದರು.

ಲಾಕ್‌ಡೌನ್‌ ಘೋಷಣೆಯಾದ ಬಳಿಕ ಕಾಡುಪ್ರಾಣಿಗಳ ಕಳ್ಳಬೇಟೆ ಹೆಚ್ಚಾಗಿದೆ. ಬೆಂಗಳೂರು ನಗರ ಜಿಲ್ಲೆಯ ಅರಣ್ಯ ಇಲಾಖೆಯ ತಂಡ ಸೂಲಿಕೆರೆ ಸಮೀಪ ಮೂರು ದಿನಗಳ ಹಿಂದೆ ಕಾಡುಪ್ರಾಣಿಗಳಿಗೆ ಉರುಳು ಇಡುತ್ತಿದ್ದ ತಾವರೆಕೆರೆ ಹೋಬಳಿಯ ಗಿಡದಪಾಳ್ಯ ನಿವಾಸಿಗಳಾದ ತಿಪ್ಪಣ್ಣ (31), ನಾಗರಾತ (33) ಹಾಗೂ ನಾಗಪ್ಪ (40) ಅವರನ್ನು ಉರುಳು ಸಮೇತ ಬಂಧಿಸಿತ್ತು.

ನಾಲ್ಕು ದಿನಗಳ ಹಿಂದೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಜಿಂಕೆಯೊಂದನ್ನು ಬೇಟೆಯಾಡಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು