ಶುಕ್ರವಾರ, ಮೇ 27, 2022
26 °C
ಐದು ವರ್ಷದ ‌ಬಾಲಕಿ‌ ಮೇಲೆ ಲೈಂಗಿಕ ದೌರ್ಜನ್ಯ; ಪೊಲೀಸರ ವಿರುದ್ಧ ಸ್ಥಳೀಯರ ಆಕ್ರೋಶ

ಬೆಂಗಳೂರು: ಸಂಜಯನಗರ ಪೊಲೀಸ್ ಠಾಣೆಗೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಂಜಯನಗರ ಠಾಣೆ ವ್ಯಾಪ್ತಿಯಲ್ಲಿ ಐದು ವರ್ಷದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಈ ಕೃತ್ಯವನ್ನು ಖಂಡಿಸಿ ಸ್ಥಳೀಯರು ಠಾಣೆಗೆ ಮುತ್ತಿಗೆ ಹಾಕಿ ಭಾನುವಾರ ರಾತ್ರಿ ಪ್ರತಿಭಟನೆ ನಡೆಸಿದರು.

ಸ್ಥಳೀಯ ನಿವಾಸಿಯೊಬ್ಬರ ಮಗಳ ಮೇಲೆ ಪಶ್ಚಿಮ ಬಂಗಾಳದ 23 ವರ್ಷದ ಯುವಕ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಈ ಬಗ್ಗೆ ಪೋಷಕರು, ಠಾಣೆಗೆ ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಿದ್ದ ಪೊಲೀಸರು, ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದರು.

ಸುದ್ದಿ ತಿಳಿದ ಸ್ಥಳೀಯರು ಸಂಜಯನಗರ ಠಾಣೆ ಎದುರು ಸೇರಿ ಪ್ರತಿಭಟನೆ ಆರಂಭಿಸಿದ್ದರು. ‘ಆರೋಪಿಯನ್ನು ನನ್ನ ವಶಕ್ಕೆ ನೀಡಿ, ನಾವೇ ಪಾಠ ಕಲಿಸುತ್ತೇವೆ’ ಎಂದು ಕೂಗಾಡಿದರು. ಸಮಯ ಕಳೆದಂತೆ ಮತ್ತಷ್ಟು ಮಂದಿ ಠಾಣೆ ಬಳಿ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದರು. 200ಕ್ಕೂ ಹೆಚ್ಚು ಮಂದಿ ಏಕಕಾಲದಲ್ಲಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಠಾಣೆ ಪ್ರವೇಶ ದ್ವಾರದಲ್ಲೇ ಅವರನ್ನು ಪೊಲೀಸರು ತಡೆದು ನಿಲ್ಲಿಸಿದರು.

ಇದೇ ಸಂದರ್ಭದಲ್ಲೇ ಸ್ಥಳೀಯರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಹೆಬ್ಬಾಳ ಶಾಸಕ ಭೈರತಿ ಸುರೇಶ್ ಹಾಗೂ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ಸ್ಥಳಕ್ಕೆ ಬಂದು ಪ್ರತಿಭಟನಕಾರರ ಜೊತೆ ಮಾತುಕತೆ ನಡೆಸಿ ಸಮಾಧಾನಪಡಿಸಿದರು.

‘ಬಾಲಕಿ ಪೋಷಕರು ನೀಡಿರುವ ದೂರು ಆಧರಿಸಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ. ಬಾಲಕಿಯ ವೈದ್ಯಕೀಯ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದರು.

‘ಜನರ ರಕ್ಷಣೆಗಾಗಿ ನಾವು ಸದಾ ಸಿದ್ಧ. ಯಾವುದೇ ತೊಂದರೆ ಇದ್ದರೂ 112ಕ್ಕೆ ಕರೆ ಮಾಡಬಹುದು. ಪೊಲೀಸರೇ ಆರೋಪಿಗಳ ಜೊತೆ ಶಾಮೀಲಾಗಿದ್ದರೆ, ಅವರ ಬಗ್ಗೆ ದೂರು ನೀಡಬಹುದು. ಅಂಥ ಪೊಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗ ಪ್ರತಿಭಟನೆ ಕೈಬಿಟ್ಟು ಸಹಕರಿಸಿ’ ಎಂದೂ ಕೋರಿದರು.

ಇದಕ್ಕೆ ಸ್ಪಂದಿಸಿದ ಸ್ಥಳೀಯರು, ಠಾಣೆಯಿಂದ ಹೊರಟು ಹೋದರು. ನಂತರವೇ ಪರಿಸ್ಥಿತಿ ತಿಳಿಯಾಯಿತು.

ಪೊಲೀಸರ ವಿರುದ್ಧ ಆಕ್ರೋಶ: ‘ಸಂಜಯನಗರ ಠಾಣೆ ವ್ಯಾಪ್ತಿಯಲ್ಲಿ ನಿತ್ಯವೂ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಆರೋಪಿಗಳನ್ನು ಬಂಧಿಸಬೇಕಾದ ಪೊಲೀಸರು, ಮೌನವಾಗಿದ್ದಾರೆ. ಕೆಲವರು ಆರೋಪಿಗಳ ಜೊತೆ ಶಾಮೀಲಾಗಿದ್ದು, ಇಂಥವರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

‘ಹೊರರಾಜ್ಯದಿಂದ ಬಂದಿರುವ ಬಹುತೇಕರು ಸಂಜಯನಗರದಲ್ಲಿ ವಾಸವಿದ್ದಾರೆ. ಆ ಪೈಕಿ ಹಲವರು ಅಪರಾಧ ಕೃತ್ಯ ಎಸಗುತ್ತಿದ್ದಾರೆ. ಇದು ಗೊತ್ತಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಇವರ ವಿರುದ್ಧ ಹಲವು ಬಾರಿ ದೂರು ನೀಡಿದರೂ ಕ್ರಮ ಜರುಗಿಸಿಲ್ಲ’ ಎಂದೂ ದೂರಿದರು.

‘ಬಹುತೇಕ ರಸ್ತೆಗಳಲ್ಲಿ ಮಹಿಳೆಯರು ಒಂಟಿಯಾಗಿ ಓಡಾಡದ ಸ್ಥಿತಿ ಇದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಾದಕ ವ್ಯಸನಿಗಳು, ಕಳ್ಳರು ರಾಜಾರೋಷವಾಗಿ ಕೃತ್ಯ ಎಸಗುವಂತಾಗಿದೆ. ಇದಕ್ಕೆಲ್ಲ ಪೊಲೀಸರ ವೈಫಲ್ಯವೇ ಕಾರಣ. ತುರ್ತು ಸಂಖ್ಯೆಗೆ ಕರೆ ಮಾಡಿದರೂ ಪೊಲೀಸರು ತಡವಾಗಿ ಬರುತ್ತಾರೆ. ಬಂದರೂ ದೂರದಿಂದಲೇ ಸೈರನ್ ಮೊಳಗಿಸುತ್ತಾರೆ. ಇದರಿಂದ ಆರೋಪಿಗಳು ತಪ್ಪಿಸಿಕೊಂಡು ಓಡಿಹೋಗುತ್ತಾರೆ’ ಎಂದೂ ಆರೋಪಿಸಿದರು.

‘ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ. ಈ ಹಿಂದೆಯೂ ಇಂಥ ಹಲವು ಘಟನೆಗಳು ನಡೆದಿವೆ. ದೂರು ಕೊಟ್ಟರೂ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ’ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಡಿಸಿದರು.

‘ಪ್ರತಿಭಟನೆ ವಾಪಸು’
‘ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಹೀಗಾಗಿ, ಸ್ಥಳೀಯರು ಪ್ರತಿಭಟನೆ ವಾಪಸು ಪಡೆದಿದ್ದಾರೆ’ ಎಂದು ಶಾಸಕ ಭೈರತಿ ಸುರೇಶ್ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು