ಭಾನುವಾರ, ಆಗಸ್ಟ್ 14, 2022
26 °C
ಕರ್ತವ್ಯನಿರತರನ್ನು ಕಾಲಿನಿಂದ ಒದ್ದ ವಿಧಾನಪರಿಷತ್ ಸದಸ್ಯನ ಮಗ: ಬಂಧನ

‘ಪೊಲೀಸರ ಮೇಲೆ ಕಾಂಗ್ರೆಸ್ ಎಂಎಲ್‌ಸಿ ಪುತ್ರನ ದೌರ್ಜನ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ ಪುತ್ರರಾದ ಫೈಜ್ ಅಹ್ಮದ್ (24) ಸೇರಿ ಮೂವರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ಹೆಬ್ಬಾಳ ಬಳಿಯ ಲುಂಬಿನಿ ಗಾರ್ಡನ್ ಸಮೀಪ ಭಾನುವಾರ ರಾತ್ರಿ ನಡೆದ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಫೈಜ್ ಅಹ್ಮದ್, ಅವರ ಸ್ನೇಹಿತರಾದ ಜೈನ್ ಷರೀಫ್ (25) ಹಾಗೂ ಅಹ್ಮದ್ (24) ಎಂಬುವರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಆರೋಪಿಗಳ ಹಲ್ಲೆಯಿಂದಾಗಿ ಹೆಡ್‌ ಕಾನ್‌ಸ್ಟೆಬಲ್ ಶ್ರೀನಿವಾಸ್ ಹಾಗೂ ಕಾನ್‌ಸ್ಟೆಬಲ್ ಬಾಬಾ ಸುಬಾನ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ’ ಎಂದೂ ತಿಳಿಸಿದರು.

ಘಟನೆ ವಿವರ: ‘ಮದ್ಯದ ಪಾರ್ಟಿ ಮಾಡಿದ್ದ ಫೈಜ್‌ ಅಹ್ಮದ್ ಹಾಗೂ ಸ್ನೇಹಿತರು, ಎರಡು ಕಾರಿನಲ್ಲಿ ಲುಂಬಿನಿ ಗಾರ್ಡನ್ ಬಳಿ ಬಂದಿದ್ದರು. ರಾತ್ರಿ 1.30ರ ಸುಮಾರಿಗೆ ರಸ್ತೆಯಲ್ಲಿ ಅಡ್ಡವಾಗಿ ಕಾರುಗಳನ್ನು ನಿಲ್ಲಿಸಿ ಕೂಗಾಡುತ್ತಿದ್ದರು. ಸ್ಥಳೀಯರ ಸಂಚಾರಕ್ಕೆ ತೊಂದರೆಯನ್ನುಂಟು ಮಾಡುತ್ತಿದ್ದರು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಗಸ್ತಿನಲ್ಲಿದ್ದ ಶ್ರೀನಿವಾಸ್ ಮತ್ತು ಬಾಬಾ ಸುಬಾನ್, ಆರೋಪಿಗಳ ವರ್ತನೆಯನ್ನು ಪ್ರಶ್ನಿಸಿದ್ದರು. ಸ್ಥಳದಿಂದ ಹೊರಟು ಹೋಗುವಂತೆ ಸೂಚಿಸಿದ್ದರು. ಸ್ಥಳದಿಂದ ಹೊರಟಂತೆ ನಟಿಸಿದ್ದ ಆರೋಪಿಗಳು, ಸಮೀಪದ ಜಂಕ್ಷನ್ ಬಳಿ ಪುನಃ ಕಾರು ನಿಲ್ಲಿಸಿಕೊಂಡು ಚೀರಾಡುತ್ತಿದ್ದರು. ಅಲ್ಲಿಗೂ ಹೋದ ಪೊಲೀಸರು, ಎಚ್ಚರಿಕೆ ನೀಡಿದ್ದರು.’

‘ಪೊಲೀಸರ ಮೇಲೆಯೇ ಹರಿಹಾಯ್ದಿದ್ದ ಆರೋಪಿಗಳು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್ ಸಮವಸ್ತ್ರ ಹಿಡಿದು ರಸ್ತೆಯಲ್ಲಿ ಎಳೆದಾಡಿದ್ದರು. ಇಬ್ಬರನ್ನೂ ನೆಲಕ್ಕೆ ಬೀಳಿಸಿ ಕಾಲಿನಿಂದ ಒದ್ದಿದ್ದರು’ ಎಂದೂ ಅಧಿಕಾರಿ ಹೇಳಿದರು.

‘ಆರೋಪಿಗಳಿಂದ ಬಿಡಿಸಿಕೊಂಡಿದ್ದ ಕಾನ್‌ಸ್ಟೆಬಲ್, ವೈರ್‌ಲೆಸ್ ಮೂಲಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಕೆಲ ನಿಮಿಷಗಳಲ್ಲೇ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದರು. ಅವರನ್ನು
ನೋಡಿದ ಆರೋಪಿಗಳು ಪರಾರಿಯಾಗಲು ಯತ್ನಿಸಿದರು. ಆ ಪೈಕಿ, ಫೈಜ್ ಅಹ್ಮದ್ ಸೇರಿ ಮೂವರನ್ನು ಪೊಲೀಸರು ಬೆನ್ನಟ್ಟಿ ಹಿಡಿದರು’ ಎಂದೂ ವಿವರಿಸಿದರು.

ಮದ್ಯದ ಅಮಲಿನಲ್ಲಿದ್ದರು: ‘ಆರೋಪಿಗಳನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮೂವರು ಮದ್ಯದ ಅಮಲಿನಲ್ಲಿದ್ದ ಸಂಗತಿ ಪರೀಕ್ಷೆಯಿಂದ ಗೊತ್ತಾಗಿದೆ. ಮೂವರು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದೂ ಅಧಿಕಾರಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು