ಶುಕ್ರವಾರ, ಅಕ್ಟೋಬರ್ 30, 2020
27 °C
ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಎಚ್ಚರಿಕೆ

ಪ್ರತಿಭಟನೆ, ರ‍್ಯಾಲಿ ನಡೆಸಿದರೆ ಪ್ರಕರಣ ದಾಖಲು: ಪೊಲೀಸ್ ಕಮಿಷನರ್ ಕಮಲ್ ಪಂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಗರದಲ್ಲಿ ಸೋಮವಾರ ‌ರ‍್ಯಾಲಿ ಹಾಗೂ ಪ್ರತಿಭಟನೆ ನಡೆಸಲು ಯಾರೊಬ್ಬರಿಗೂ ಅನುಮತಿ ನೀಡಿಲ್ಲ. ಯಾರಾದರೂ ರಸ್ತೆಗಿಳಿದು ಪ್ರತಿಭಟನೆ ಹಾಗೂ ರ‍್ಯಾಲಿ ನಡೆಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಅಂಥವರನ್ನು ಬಂಧಿಸಿ ಐಪಿಸಿ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಎಚ್ಚರಿಸಿದ್ದಾರೆ.

ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸೋಮವಾರ ಕೈಗೊಳ್ಳಬೇಕಾದ ಭದ್ರತೆ ಬಗ್ಗೆ ವಿಶೇಷ ಸಭೆ ನಡೆಸಿ ಚರ್ಚಿಸಲಾಗಿದೆ. ನಿತ್ಯ ಕೆಲಸಕ್ಕೆ ಹೋಗುವವರು ಹಾಗೂ ವ್ಯಾಪಾರ ನಡೆಸುವವರು ಸೇರಿದಂತೆ ಯಾರೊಬ್ಬರಿಗೂ ತೊಂದರೆಯಾಗದಂತೆ ಭದ್ರತೆ ಕೈಗೊಳ್ಳಲು ಆಯಾ ಡಿಸಿಪಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

‘ರೈಲು ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ನಗರ ಎಲ್ಲ ಕಡೆಯೂ ನಾಳೆ ಬಿಗಿ ಭದ್ರತೆ ಇರಲಿದೆ. ಬಲವಂತವಾಗಿ ಅಂಗಡಿಗಳನ್ನು ಬಂದ್ ಮಾಡಿಸುವಂತಿಲ್ಲ. ಸಾರ್ವಜನಿಕರು ಹಾಗೂ ಅವರ ಆಸ್ತಿಗೆ ಧಕ್ಕೆ ತರುವಂತಿಲ್ಲ. ಪ್ರತಿಭಟನೆಗೆ ಕರೆ ನೀಡಿದ್ದಾರೆ ಎನ್ನಲಾದ ಕೆಲವರಿಂದ ಈಗಾಗಲೇ ಮುಚ್ಚಳಿಕೆ ಬರೆಸಿಕೊಳ್ಳಲಾಗಿದ್ದು, ಯಾವುದೇ ಅನಾಹುತ ಸಂಭವಿಸಿದರೂ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದೂ ಕಮಲ್ ಪಂತ್ ತಿಳಿಸಿದರು.

‘ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಹಮ್ಮಿಕೊಳ್ಳಲಾಗಿದೆ ಎನ್ನಲಾದ ರ‍್ಯಾಲಿಗೆ ಯಾರೂ ಅನುಮತಿ ಕೇಳಿಲ್ಲ. ಈ ಸ್ಥಳದಲ್ಲಿ ಯಾರಾದರೂ ರ‍್ಯಾಲಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಸೋಂಕು ತಡೆ ನಿಯಮಗಳು ಜಾರಿಯಲ್ಲಿದ್ದು, ಅವುಗಳು ಉಲ್ಲಂಘನೆಯಾದರೂ ಪ್ರಕರಣ ದಾಖಲಿಸಲಾಗುವುದು’ ಎಂದೂ ಅವರು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು