ಶನಿವಾರ, ಜುಲೈ 31, 2021
20 °C
ಯುವಕನೊಬ್ಬನ ಟ್ವೀಟ್‌ಗೆ ತನಿಖೆ ನಡೆಸಿ ಎಂದ ಭಾಸ್ಕರ್ ರಾವ್  

ಪೊಲೀಸ್ ಕಮಿಷನರ್– ನೆಟ್ಟಿಗರ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್‌ನಲ್ಲಿದ್ದ ಶೇ 97ರಷ್ಟು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆಂದು ಸುದ್ದಿ ಮೂಲಗಳು ಹೇಳುತ್ತಿವೆ’ ಎಂಬುದಾಗಿ ಸುಬ್ರಜಿತ್ ಬೇಹರ್ ಎಂಬುವರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ಮಂಗಳವಾರ ಟ್ವೀಟ್‌ ಮಾಡಿದ್ದು, ಇದರಿಂದಾಗಿ ಕಮಿಷನರ್ ಹಾಗೂ ನೆಟ್ಟಿಗರ ನಡುವೆ ಟ್ವೀಟ್‌ಗಳ ಜಟಾಪಟಿಯೇ ನಡೆಯಿತು.

ಯುವಕನ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಭಾಸ್ಕರ್ ರಾವ್, ‘ನಿಮ್ಮ ಸುದ್ದಿ ಮೂಲದ ಬಗ್ಗೆ ಮಾಹಿತಿ ಕಲೆಹಾಕುತ್ತೇವೆ. ಅದು ಏನಾದರೂ ತಪ್ಪು ಎಂಬುದು ಗೊತ್ತಾದರೆ, ಪರಿಣಾಮ ಎದುರಿಸಲು ನೀವು ಸಿದ್ಧವಾಗಿರಿ. ಅದು ನಿಜವಾಗಿದ್ದರೆ ಸರ್ಕಾರ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಿದೆ’ ಎಂದಿದ್ದರು.

‘ಯುವಕನ ಹೇಳಿಕೆ ಬಗ್ಗೆ ತನಿಖೆ ನಡೆಸಿ’ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ ಪಾಟೀಲ್ ಅವರಿಗೆ ಟ್ವೀಟ್‌ನಲ್ಲಿ ಸೂಚನೆ ನೀಡಿದ್ದರು. ‘ಸಿಸಿಬಿ ತಾಂತ್ರಿಕ ವಿಭಾಗ ಈಗಾಗಲೇ ಕೆಲಸದಲ್ಲಿ ನಿರತವಾಗಿದೆ ಸರ್’ ಎಂದು ಸಂದೀಪ್ ಪಾಟೀಲ ಅವರೂ ಉತ್ತರಿಸಿದ್ದರು.

ಯುವಕ, ‘ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಯನ್ನೇ ಉಲ್ಲೇಖಿಸಿ ನಾನು ಹೇಳಿದ್ದೇನೆ’ ಎಂಬುದಾಗಿ ಪುರಾವೆಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.

ಕಮಿಷನರ್, ‘ಇಂಥ ಸುದ್ದಿಗಳನ್ನು ಲೈಕ್ ಮಾಡಿದರೆ ಹಾಗೂ ಮರು ಟ್ವೀಟ್‌ ಮಾಡಿದರೆ ಸಿಸಿಬಿ ವಿಭಾಗವೇ ಕ್ರಮ ಕೈಗೊಳ್ಳುತ್ತೆ’ ಎಂದಿದ್ದರು.

ಟ್ವೀಟ್‌ ಗಮನಿಸಿ ಕಮಿಷನರ್ ಅವರನ್ನು ಪ್ರಶ್ನಿಸಿದ ನೆಟ್ಟಿಗರು, ‘ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಯನ್ನು ನಿಮ್ಮ ಗಮನಕ್ಕೆ ತರಬಾರದಾ‘ ಎಂದರು. ‘ಸುದ್ದಿ ಸುಳ್ಳು ಎಂಬುದಾದರೆ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ. ಸುಳ್ಳು ಸುದ್ದಿ ಪ್ರಕಟಿಸುವ ಮಾಧ್ಯಮಗಳ ವಿರುದ್ಧವೂ ತನಿಖೆ ನಡೆಸಿ. ನಾವು ನಿಮಗೆ ಅಭಿನಂದನೆ ಸಲ್ಲಿಸುತ್ತೇವೆ’ ಎಂದೂ ಹೇಳಿದರು.

ಬಾಲಾಜಿ ಎಂಬುವರು, ‘ಮಾನ್ಯ ಕಮಿಷನರ್ ಅವರೇ ಸಂದೀಪ್ ಪಾಟೀಲ್ ಅವರಿಗೆ ಸೂಚಿಸುವ ಮುನ್ನ ಮಾಧ್ಯಮಗಳಲ್ಲಿರುವ ವರದಿ ಓದಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಟ್ವಿಟರ್‌ನಲ್ಲಿ ವರ್ತಿಸುವುದಾ’ ಎಂದು ಪ್ರಶ್ನಿಸಿದ್ದಾರೆ.

ಕಮಿಷನರ್, ‘ತನಿಖೆಯು ಉತ್ತಮವಾಗಿ ಅಂತ್ಯವಾಗಿದೆ’ ಎಂದೂ ಟ್ವೀಟ್ ಮಾಡಿದ್ದಾರೆ. ಕಮಿಷನರ್ ಅವರನ್ನು ಹೊಗಳಿರುವ ಕೆಲವರು, ‘ನಿಮ್ಮ ಕೆಲಸ ಉತ್ತಮವಾಗಿದೆ ಸರ್. ಯಾರೇ ಸುಳ್ಳು ಸುದ್ದಿ ಹರಿಬಿಟ್ಟರೂ ಅವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು