ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಹಣಕ್ಕಾಗಿ ವ್ಯಕ್ತಿಯ ಅಪಹರಣ, ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಜ್ಞಾನ ಭಾರತಿ ಠಾಣೆ ಪೊಲೀಸರ ಕಾರ್ಯಾಚರಣೆ
Published 10 ಜನವರಿ 2024, 14:52 IST
Last Updated 10 ಜನವರಿ 2024, 14:52 IST
ಅಕ್ಷರ ಗಾತ್ರ

ಬೆಂಗಳೂರು: ಹಣಕ್ಕಾಗಿ ವ್ಯಕ್ತಿಯೊಬ್ಬರನ್ನು ಅಪಹರಿಸಿ, ಕೊಲೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಮಸಂದ್ರ ಗಾಯತ್ರಿ ಲೇಔಟ್‌ನ ಸಂಜಯ್‌ (25), ಮಂಗನಹಳ್ಳಿ ಕ್ರಾಸ್‌ ಎಸ್‌.ಎಂ.ವಿ ಲೇಔಟ್‌ 5ನೇ ಬ್ಲಾಕ್‌ನ ಆನಂದ ಹಾಗೂ ನಾಗದೇವಹಳ್ಳಿ ನಿವಾಸಿ ಹನುಮಂತು ಬಂಧಿತರು.

‘ಕಿಶನ್‌ ಕುಮಾರ್‌ ಎಂಬ ಯುವಕನನ್ನು ಅಪಹರಿಸಿ, ಹಣ ಸುಲಿಗೆಗೆ ಪ್ರಯತ್ನಿಸಿದ್ದರು. ಆತನನ್ನು ಸ್ಥಳೀಯರು ರಕ್ಷಿಸಿ ವಾಪಸ್‌ ಕಳುಹಿಸಿದ್ದರು. ಅದು ವಿಫಲವಾದ ಮೇಲೆ ಗುರುಸಿದ್ದಪ್ಪ ಎಂಬಾತನನ್ನು ಅಪಹರಿಸಿ, ಜೀವಂತವಾಗಿ ಬಿಟ್ಟರೆ ತೊಂದರೆ ಮಾಡಬಹುದು ಎಂಬ ಭಯದಿಂದ ರಾಮನಗರ ಜಿಲ್ಲೆ ಕೂಟಗಲ್‌ ತಿಮ್ಮಪ್ಪಸ್ವಾಮಿ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದರು. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘15 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಸಂಜಯ್‌ ಮಂಗನಗಳ್ಳಿಯಲ್ಲಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ. ತರಕಾರಿ ಡೆಲಿವರಿ ಕೆಲಸ ಮಾಡುತ್ತಿದ್ದ ಆನಂದ್, ಹಲವು ಸುಲಿಗೆ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಮೂಲತಃ ರಾಯಚೂರಿನ ಹನುಮಂತ ನಾಗದೇವಹಳ್ಳಿಯಲ್ಲಿ ನೆಲೆಸಿದ್ದ. ಮೂವರು ಪರಸ್ಪರ ಪರಿಚಯಸ್ಥರು. ಹಣಕ್ಕಾಗಿ  ರನ್ನು ಹುಡುಕಿ ಅಪಹರಿಸುತ್ತಿದ್ದರು. ಗಾಂಜಾ ವ್ಯಸನಿಗಳಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಕಾರ್ಪೆಂಟರ್‌ ಕೆಲಸ ಮಾಡುತ್ತಿದ್ದ ಸಂಜಯ್‌ಕುಮಾರ್‌ ಪಂಡಿತ್‌ ಅವರಿಗೆ ಕರೆ ಮಾಡಿ, ತಮ್ಮ ಜತೆಗೆ ಕೆಲಸವಿದ್ದು, ತಮ್ಮೊಂದಿಗೆ ಮಾತನಾಡಬೇಕೆಂದು ಆರೋಪಿಗಳು ಹೇಳಿದ್ದರು. ನಾನು ಕುಂದಾಪುರದಲ್ಲಿದ್ದು ನನ್ನ ಬಳಿ ಕೆಲಸಕ್ಕಿರುವ ಕಿಶನ್‌ಕುಮಾರ್‌ನನ್ನು ಸ್ಥಳಕ್ಕೆ ಕಳುಹಿಸುವುದಾಗಿ ಪಂಡಿತ್‌ ತಿಳಿಸಿದ್ದರು. ಆರೋಪಿಗಳು ತಿಳಿಸಿದ ಕೃಷ್ಣ ಅರಮನೆ ಹೋಟೆಲ್‌ ಬಳಿಗೆ ಅಂದು ಕಿಶನ್‌ ತೆರಳಿದ್ದರು. ಅಲ್ಲಿಗೆ ಬಂದಿದ್ದ ಮೂವರು ಆರೋಪಿಗಳು ಕಿಶನ್‌ನನ್ನು ಅಪಹರಿಸಿದ್ದರು. ₹10 ಸಾವಿರ ನೀಡಿದರೆ ವಾಪಸ್‌ ಕಳುಹಿಸುವುದಾಗಿ ಹೇಳಿದ್ದರು. ನನ್ನ ಬಳಿ ಹಣವಿಲ್ಲ ಎಂದಾಗ ಸಂಜಯ್‌ಕುಮಾರ್‌ ಪಂಡಿತ್‌ನಿಂದ ₹1 ಲಕ್ಷ ಕೊಡಿಸುವಂತೆ ಬೇಡಿಕೆಯಿಟ್ಟಿದ್ದರು. ಅದಾದ ಮೇಲೆ ಚಾಕು ತೋರಿಸಿ ಕುಂದಾಪುರಕ್ಕೆ ಕರೆದೊಯ್ಯುವ ಪ್ರಯತ್ನ ಮಾಡಿದ್ದರು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್‌ ಮಾಹಿತಿ ನೀಡಿದರು.

ಸ್ಥಳೀಯರಿಂದ ರಕ್ಷಣೆ: ಕಾರಿನಲ್ಲಿ ತೆರಳುತ್ತಿದ್ದಾಗ ಮಧ್ಯದಲ್ಲಿ ಕಿಶನ್‌ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಕಿರುಚಿಕೊಂಡಾಗ ಕಾರಿನಿಂದ ಇಳಿಸಿ ಪರಾರಿಯಾಗಿದ್ದರು. ಸ್ಥಳೀಯರ ನೆರವಿನಿಂದ ಕಿಶನ್‌ ಬೆಂಗಳೂರಿಗೆ ವಾಪಸ್ ಆಗಿದ್ದರು. ಸಂಜಯ್‌ ಕುಮಾರ್ ಅವರು ಬೆಂಗಳೂರಿಗೆ ವಾಪಸ್‌ ಬಂದ ಮೇಲೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು ಎಂದು ಹೇಳಿದರು.

‘ಮೊದಲ ಪ್ರಯತ್ನ ವಿಫಲವಾದ ಮೇಲೆ ಆರೋಪಿ ಸಂಜಯ್‌ಗೆ ಪರಿಚಯವಿದ್ದ ಆಟೊಮೊಬೈಲ್‌ ಕಂಪನಿಯಲ್ಲಿ ಸೇಲ್ಸ್‌ ಎಕ್ಸಿಕ್ಯೂಟಿವ್‌ ಆಗಿದ್ದ ಗುರುಸಿದ್ದಪ್ಪ ಎಂಬುವವರನ್ನು ಅಪಹರಣ ಮಾಡಿದ್ದರು. ಆತನನ್ನು ಬೆದರಿಸಿ ಹಣ ಸುಲಿಗೆ ಮಾಡಿ ಕಾರಿನಲ್ಲಿ ಹಲವು ಕಡೆ ಸುತ್ತಾಡಿಸಿದ್ದರು. ಜೀವಂತಾಗಿ ವಾಪಸ್‌ ಕಳುಹಿಸಿದರೆ, ತೊಂದರೆ ಮಾಡುವ ಭಯದಿಂದ ತಿಮ್ಮಪ್ಪಸ್ವಾಮಿ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಕೊಲೆ ಮಾಡಿ ಮೃತದೇಹ ಎಸೆದು ಹೋಗಿದ್ದರು’ ಎಂದು ಮಾಹಿತಿ ನೀಡಿದರು.

‘ಬಂಧಿತರಿಂದ ₹2.40 ಲಕ್ಷ ನಗದು, ಚಿನ್ನದ ಚೈನು, ಕೃತ್ಯಕ್ಕೆ ಉಪಯೋಗಿಸಿದ್ದ ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT