ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ ರಸ್ತೆ ಅಪಘಾತ: ಪೂರ್ಣ ‘ಬ್ರೇಕ್‌’ಗೆ ಕಸರತ್ತು  

ವೇಗದ ಮಿತಿಗೆ ಕಡಿವಾಣ, ನಿಯಮ ಉಲ್ಲಂಘನೆಗೆ ದಂಡದಿಂದಾಗಿ ತಗ್ಗಿದ ಸಾವಿನ ಸಂಖ್ಯೆ
Published : 26 ಸೆಪ್ಟೆಂಬರ್ 2024, 18:54 IST
Last Updated : 26 ಸೆಪ್ಟೆಂಬರ್ 2024, 18:54 IST
ಫಾಲೋ ಮಾಡಿ
Comments

ಬೆಂಗಳೂರು: ವೇಗದ ವಾಹನ ಚಾಲನೆಗೆ ಕಡಿವಾಣ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಕುರಿತು ಜಾಗೃತಿಯ ಜೊತೆಯಲ್ಲೇ ಪೊಲೀಸರು ದಂಡದ ಅಸ್ತ್ರವನ್ನೂ ಬಳಸಿದ್ದರಿಂದ ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ ಸಂಭವಿಸುವ ಸಾವುಗಳ ಸಂಖ್ಯೆ ತಗ್ಗಲಾರಂಭಿಸಿದೆ.

2022, 2023 ಮತ್ತು 2024ರ ಮೊದಲ ಎಂಟು ತಿಂಗಳ ಅಪಘಾತಗಳ ಅಂಕಿ ಅಂಶಗಳನ್ನು ಉಲ್ಲೇಖಿಸಿರುವ ಪೊಲೀಸ್ ಇಲಾಖೆ, ಅಪಘಾತಗಳನ್ನು ಇನ್ನಷ್ಟು ನಿಯಂತ್ರಿಸಲು ಬ್ಲಾಕ್‌ ಸ್ಪಾಟ್‌ಗಳನ್ನು (ಅಪಘಾತ ವಲಯ) ಗುರುತಿಸಿ ಮುಂಜಾಗ್ರತೆ ಕ್ರಮವಹಿಸಲಾ
ಗುತ್ತಿದೆ ಎಂದು ಹೇಳಿದೆ.

ಈ ವರ್ಷದ ಮೊದಲ ಎಂಟು ತಿಂಗಳಲ್ಲಿ ರಸ್ತೆ ಅಪಘಾತಗಳಲ್ಲಿನ ಸಾವುಗಳ ಸಂಖ್ಯೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕೊಂಚ ಕಡಿಮೆ ಆಗಿದೆ. ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಈ ವರ್ಷ ಆಗಸ್ಟ್‌ವರೆಗೆ 7,596 ಮಂದಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. 2023, 2022ರಲ್ಲಿ ಕ್ರಮವಾಗಿ 8,146, 7,996 ಜನರು ಮೃತಪಟ್ಟಿದ್ದರು.

ಆದರೆ, ಇತರೆ ನಗರಗಳಿಗೆ ಹೋಲಿಸಿದರೆ ರಾಜಧಾನಿ ಈ ವರ್ಷವೂ ಅಪಘಾತಗಳ ಪಟ್ಟಿಯಲ್ಲಿ ‘ಪ್ರಥಮ’ ಸ್ಥಾನದಲ್ಲಿದೆ. ಬೆಂಗಳೂರು ನಗರದಲ್ಲಿ ಈ ವರ್ಷ ಆಗಸ್ಟ್‌ವರೆಗೆ 569 ಮಂದಿ ಮೃತ ಪಟ್ಟಿದ್ದರೆ, 2022ರಲ್ಲಿ 515 ಹಾಗೂ 2023ರಲ್ಲಿ 567 ಮಂದಿ ಜೀವ ಕಳೆದುಕೊಂಡಿದ್ದರು.

ಮೈಸೂರು–ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸಂಭವಿಸಿದ ರಸ್ತೆ ಅಪಘಾತ
ಗಳಲ್ಲಿ ಮೃತಪಟ್ಟವರ ಸಂಖ್ಯೆಯಲ್ಲಿಯೂ ಗಣನೀಯ ಇಳಿಕೆಯಾಗಿದೆ. 2023ರ ಜನವರಿಯಿಂದ ಆಗಸ್ಟ್‌ವರೆಗೆ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 147 ಮಂದಿ ಮೃತಪಟ್ಟಿದ್ದರು. ಈ ವರ್ಷ ಜನವರಿಯಿಂದ ಆಗಸ್ಟ್‌ವರೆಗೆ 50 ಮಂದಿ ಮೃತಪಟ್ಟಿದ್ದಾರೆ.

‘ವಾಹನಗಳ ವೇಗಕ್ಕೆ ಮಿತಿ ನಿಗದಿ, ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆ, ದ್ವಿಚಕ್ರ ವಾಹನ ಸಂಚಾರ ನಿಷೇಧ, ನಿಯಮ ಉಲ್ಲಂಘನೆ ವಿರುದ್ಧ ಪೊಲೀಸರ ವಿಶೇಷ ಕಾರ್ಯಾಚರಣೆ, ಸಂಚಾರ ನಿಯಮ ಉಲ್ಲಂಘನೆಯನ್ನು ಕೃತಕ ಬುದ್ದಿಮತ್ತೆ (ಎ.ಐ) ತಂತ್ರಜ್ಞಾನ ಬಳಸಿ ಪತ್ತೆ ಹಚ್ಚುವುದು ಸೇರಿ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಸಾವಿನ ಪ್ರಮಾಣ ಇಳಿಕೆಯಾಗಿದೆ’ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಮರಣ ಪ್ರಮಾಣ ಇಳಿಕೆಗೆ ಕಾರಣ?: ಅಪಘಾತ ಹೆಚ್ಚು ಸಂಭವಿಸುವ ಹೆದ್ದಾರಿಗಳಲ್ಲಿ ವೇಗದ ಚಾಲನೆಗೆ ಕಡಿವಾಣ, ಶಿಸ್ತುಪಥ, ಬ್ಲ್ಯಾಕ್‌ ಸ್ಪಾಟ್‌ಗಳ (ಅಪಘಾತ ವಲಯ) ಬಳಿ ಸೂಚನಾ ಫಲಕ, ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ, ಪಾನಮತ್ತ ಚಾಲಕರ ಮೇಲೆ ನಿಗಾ, ಪ್ರಖರ ಬೆಳಕು ಹೊರಸೂಸುವ ಮತ್ತು ಕಣ್ಣು
ಕುಕ್ಕುವ ದೀಪಗಳನ್ನು ಅಳವಡಿಸಿಕೊಂಡ ವಾಹನ ಸವಾರರಿಗೆ ದಂಡ ಮತ್ತು ಎ.ಐ ಆಧಾರಿತ ಕ್ಯಾಮೆರಾಗಳ ಅಳವಡಿಕೆಯು ಸ್ವಲ್ಪ ಪ್ರಮಾಣದಲ್ಲಿ ಫಲ ಕೊಟ್ಟಿದೆ. ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ ಇಳಿಕೆಯಾಗಿದೆ.

ಹೆದ್ದಾರಿಗಳಲ್ಲಿ ರಸ್ತೆ ಬದಿ ಕೆಟ್ಟು ನಿಂತ ಅಥವಾ ನಿಲುಗಡೆ ಮಾಡಿರುವ ವಾಹನಗಳ ತೆರವಿಗೆ ಆದ್ಯತೆ ನೀಡುವಂತೆ ಗಸ್ತು ಸಿಬ್ಬಂದಿಗೆ ಸೂಚಿಸಲಾಗಿದೆ. ಅದರಲ್ಲಿಯೂ ರಾತ್ರಿ ವೇಳೆ
ಹೆದ್ದಾರಿಗಳಲ್ಲಿ ವಾಹನಗಳು ಕೆಟ್ಟು ನಿಂತರೆ ಅಪಾಯ ಹೆಚ್ಚು. ಆದ್ದರಿಂದ ಇಂತಹ ವಾಹನಗಳ ಮೇಲೆ ನಿಗಾ ವಹಿಸುವಂತೆ ಹೆದ್ದಾರಿ ಗಸ್ತು ವಾಹನಗಳ ಸಿಬ್ಬಂದಿಗೆ ಪೊಲೀಸ್ ಇಲಾಖೆ ಸೂಚಿಸಿದೆ.

‘2023ಕ್ಕೆ ಹೋಲಿಕೆ ಮಾಡಿದರೆ ಅಪಘಾತ ಪ್ರಮಾಣದಲ್ಲಿ ಪ್ರಸ್ತುತ ವರ್ಷ ಶೇ 30ರಷ್ಟು ಇಳಿಕೆಯಾಗಿದೆ. ಅಪಘಾತ ಇಳಿಮುಖವಾಗಲು ಕೆಲ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಾಹನ ಸವಾರರಿಗೆ ಸಂಚಾರ ನಿಯಮ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಬ್ಲ್ಯಾಕ್‌ ಸ್ಪಾಟ್‌ಗಳನ್ನು ಅಭಿವೃದ್ಧಿಪಡಿಸಿ ಎಚ್ಚರಿಕೆ ವಹಿಸಲಾಗಿದೆ’ ಎಂದು ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಹಿಂದಿನ ಎಡಿಜಿಪಿ ಅಲೋಕ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುರಕ್ಷಿತ ಪ್ರಯಾಣಕ್ಕೆ ನಿಯಮ ಪಾಲನೆ ಅಗತ್ಯ. ಪ್ರಖರ ದೀಪಗಳಿಂದ ಎದುರಿನ ವಾಹನ ಚಾಲಕರು ಮತ್ತು ದ್ವಿಚಕ್ರ ವಾಹನ ಸವಾರರಿಗೆ ರಸ್ತೆ ಕಾಣದಂತಾಗಿ, ಅಪಘಾತಗಳು ಸಂಭವಿಸುತ್ತಿದ್ದವು. ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ದಂಡ ಹಾಕಲಾಗುತ್ತಿದೆ’ ಎಂದು ಹೇಳಿದರು.

‘ಫಲಿಸಿದ ಸುಧಾರಣಾ ಕ್ರಮಗಳು’

‘ಬೆಂಗಳೂರು ಸೇರಿದಂತೆ ಮಹಾನಗರಿಗೆ ಹೊಂದಿಕೊಂಡಂತಿರುವ ಹೆದ್ದಾರಿ
ಗಳಲ್ಲಿಯೇ ಅತಿ ಹೆಚ್ಚಿನ ಅಪಘಾತಗಳು ಸಂಭವಿಸಿವೆ. ವಾಹನ ದಟ್ಟಣೆ, ಅಸುರಕ್ಷಿತ ರಸ್ತೆಗಳು, ಮಿತಿ ಮೀರಿದ ವೇಗ, ಕುಡಿದು ವಾಹನ ಚಾಲನೆ, ಹೆಲ್ಮೆಟ್‌ ಹಾಕದೇ ಇರುವುದು, ಸೀಟ್ ಬೆಲ್ಟ್‌ ಧರಿಸದೇ ಇರುವುದು, ಬ್ರೇಕ್ ವೈಫಲ್ಯ ಸೇರಿದಂತೆ ವಿವಿಧ ಕಾರಣಗಳಿಂದ ರಾಜ್ಯದಲ್ಲಿ ಸಂಭವಿಸಿದ್ದ ರಸ್ತೆ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಇದನ್ನು ತಗ್ಗಿಸುವ ಸಲುವಾಗಿ ಕೈಗೊಂಡ ಸುಧಾರಣಾ ಕ್ರಮಗಳು ಫಲಿಸಿದೆ’ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT