ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕರ ಆಸೆ ಈಡೇರಿಕೆ: ಪೊಲೀಸ್ ‘ಠಾಣಾಧಿಕಾರಿ’ ಆದ ಮಕ್ಕಳು

Last Updated 21 ಜುಲೈ 2022, 14:35 IST
ಅಕ್ಷರ ಗಾತ್ರ

ಬೆಂಗಳೂರು: ಖಾಕಿ ಸಮವಸ್ತ್ರ ಧರಿಸಿ, ಸೊಂಟದಲ್ಲಿ ಪಿಸ್ತೂಲ್‌ ಹಾಗೂ ಕೈಯಲ್ಲಿ ವಾಕಿಟಾಕಿ ಹಿಡಿದು ಕೋರಮಂಗಲ ಠಾಣೆಗೆ ಬಂದ ಇಬ್ಬರು ಮಕ್ಕಳು, ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಂದ ಸೆಲ್ಯೂಟ್ ಮಾಡಿಸಿಕೊಂಡರು. ಇನ್‌ಸ್ಪೆಕ್ಟರ್‌ ಕುರ್ಚಿಯಲ್ಲಿ ಕುಳಿತು ಠಾಣಾಧಿಕಾರಿ ಆಗಿ ಒಂದು ದಿನ ಅಧಿಕಾರ ಚಲಾಯಿಸಿದರು.

ಗಂಭೀರ ಕಾಯಿಲೆಯಿಂದ ಬಳಲುತ್ತಿರುವ 14 ವರ್ಷದ ವಿ.ಎಸ್. ಮಿತಿಲೇಶ್ ಹಾಗೂ ಮಹಮ್ಮದ್ ಸಲ್ಮಾನ್, ಪೊಲೀಸ್ ಅಧಿಕಾರಿಯಾಗುವ ಆಸೆ ಇಟ್ಟುಕೊಂಡಿದ್ದರು. ಅದಕ್ಕೆ ಸ್ಪಂದಿಸಿದ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ, ಮಕ್ಕಳನ್ನು ಗುರುವಾರ ಬೆಳಿಗ್ಗೆ ಠಾಣೆಗೆ ಆತ್ಮೀಯವಾಗಿ ಆಹ್ವಾನಿಸಿ ಅಧಿಕಾರ ಚಲಾಯಿಸಲು ಅವಕಾಶ ಕಲ್ಪಿಸಿಕೊಟ್ಟರು.

ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮಕ್ಕಳು, ಪೊಲೀಸ್ ಆದ ಕ್ಷಣವನ್ನು ಸಂಭ್ರಮಿಸಿದರು. ಅವರ ಮುಖದಲ್ಲಿದ್ದ ನಗು ಕಂಡು ಪೋಷಕರು ಭಾವುಕರಾಗಿ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದರು.

ಆದೇಶ ನೀಡಿದ ಮಕ್ಕಳು: ಡಿಸಿಪಿ ಕಚೇರಿಗೆ ಭೇಟಿ ನೀಡಿದ್ದ ಮಕ್ಕಳು, ಡಿಸಿಪಿ ಕುರ್ಚಿಯಲ್ಲಿ ಕುಳಿತು ಖುಷಿಪಟ್ಟರು. ಕಾರ್ಯವೈಖರಿ ಬಗ್ಗೆ ತಿಳಿದುಕೊಂಡರು. ಅಲ್ಲಿಂದ ಕೋರಮಂಗಲ ಠಾಣೆಗೆ ಬಂದು ಇನ್‌ಸ್ಪೆಕ್ಟರ್ ಕುರ್ಚಿಯಲ್ಲಿ ಕುಳಿತು, ಸಿಬ್ಬಂದಿ ಹಾಜರಿ ಪಡೆದರು. ಠಾಣೆ ವ್ಯಾಪ್ತಿಯಲ್ಲಿ ಗಸ್ತಿನ ಬಗ್ಗೆ ವಿಚಾರಿಸಿದರು. ‘ಅಪರಾಧ ಕೃತ್ಯಗಳು ನಡೆಯದಂತೆ, ಜನರು ನಿರ್ಭಯವಾಗಿ ಜೀವಿಸುವಂತೆ ನೋಡಿಕೊಳ್ಳಿ’ ಎಂದು ಮಕ್ಕಳು ಆದೇಶ ನೀಡಿದರು. ಅದನ್ನು ಒಪ್ಪಿ ಪೊಲೀಸರು ಸೆಲ್ಯೂಟ್ ಮಾಡಿದರು.

ಡಿಸಿಪಿ ಸಿ.ಕೆ. ಬಾಬಾ ಹಾಗೂ ಇನ್‌ಸ್ಪೆಕ್ಟರ್ ಡಿ.ಎನ್‌. ನಟರಾಜ್, ಮಕ್ಕಳ ಪಕ್ಕದಲ್ಲೇ ನಿಂತು ಪೊಲೀಸ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ಯಾವ ಸಿಬ್ಬಂದಿ ಏನು ಕೆಲಸ ಮಾಡುತ್ತಾರೆಂದು ತಿಳಿಸಿಕೊಟ್ಟರು. ಕೊನೆಯಲ್ಲಿ ಉಡುಗೊರೆ ನೀಡಿ, ಬಾಲಕರನ್ನು ಬೀಳ್ಕೊಟ್ಟರು.

‘ಹೊಸೂರಿನ ವಿ.ಎಸ್. ಮಿತಿಲೇಶ್ ಹಾಗೂ ಕೇರಳದ ಮೊಹಮ್ಮದ್ ಸಲ್ಮಾನ್, ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಿದ್ವಾಯಿ ಹಾಗೂ ನಾರಾಯಣ ಹೃದಯಾಲಯದಲ್ಲಿ ಇವರಿಬ್ಬರು ಚಿಕಿತ್ಸೆ ಪಡೆಯುತ್ತಿದ್ದು, ಬದುಕಲು ಹೋರಾಟ ನಡೆಸುತ್ತಿದ್ದಾರೆ. ‘ಪೊಲೀಸ್ ಅಧಿಕಾರಿ’ ಆಗಬೇಕೆಂಬ ಇವರ ಆಸೆಯನ್ನು 'ಮೇಕ್ ಎ ವಿಷ್‌’ ಸಂಸ್ಥೆ ಪ್ರತಿನಿಧಿಗಳು ನಮ್ಮ ಗಮನಕ್ಕೆ ತಂದಿದ್ದರು. ಮಕ್ಕಳ ಆಸೆ ಈಡೇರಿಸಿದ್ದು ಒಂದು ಸಾರ್ಥಕ ಕ್ಷಣ’ ಎಂದು ಸಿ.ಕೆ. ಬಾಬಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT