ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಲಾಢ್ಯರಿಂದ ಸಾಕ್ಷಿ ತಿರುಚುವ ಸಾಧ್ಯತೆ

ರಾಜ್ಯ ಮಟ್ಟದ ಸಮಾವೇಶದಲ್ಲಿ ಹೈಕೋರ್ಟ್‌ ವಕೀಲ ಸಿ.ಎಚ್‌. ಹನುಮಂತರಾಯ
Published 14 ಮೇ 2024, 18:23 IST
Last Updated 14 ಮೇ 2024, 18:23 IST
ಅಕ್ಷರ ಗಾತ್ರ

ಬೆಂಗಳೂರು: ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳು ಸಾಮಾಜಿಕವಾಗಿ, ರಾಜಕೀಯವಾಗಿ ಬಲಾಢ್ಯರಾಗಿದ್ದು, ಸಾಕ್ಷಿಗಳನ್ನು ತಿರುಚುವ, ಅಳಿಸಿ ಹಾಕುವ ಸಾಧ್ಯತೆ ಇದೆ ಎಂದು ಹೈಕೋರ್ಟ್‌ ವಕೀಲ ಸಿ.ಎಚ್‌. ಹನುಮಂತರಾಯ ಎಚ್ಚರಿಸಿದರು.

ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರಿಗೆ ನ್ಯಾಯ, ರಕ್ಷಣೆ ಹಾಗೂ ಅಪರಾಧಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‌ಎಸ್‌) ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

ಬಹು ಆಯಾಮ ಹೊಂದಿರುವ ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ತನಿಖೆ ದಾರಿ ತಪ್ಪದಂತೆ ಮಾಡಲು ಇಂಥ ಚಳವಳಿಗಳು ಅಗತ್ಯ ಎಂದು ಪ್ರತಿಪಾದಿಸಿದರು.

ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಯಲು ನಮ್ಮಲ್ಲಿ 41 ಕಾಯ್ದೆಗಳಿವೆ. ಆದರೆ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಇರುವುದು 24 ಕಾಯ್ದೆಗಳು. ಇಂಥ ಲೋಪಗಳನ್ನು ಮೊದಲು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಎಐಎಂಎಸ್‌ಎಸ್‌ ಉಪಾಧ್ಯಕ್ಷೆ ಡಾ. ಸುಧಾ ಕಾಮತ್‌ ಮಾತನಾಡಿ, ‘ಪ್ರಜ್ವಲ್‌ ರೇವಣ್ಣ ಕೇವಲ ಅತ್ಯಾಚಾರಿಯಲ್ಲ, ವಿಕೃತಕಾಮಿ. ವಿಡಿಯೊ ಮಾಡಿಟ್ಟುಕೊಂಡು ಹೆಣ್ಣುಮಕ್ಕಳನ್ನು ಬ್ಲ್ಯಾಕ್‌ಮೇಲ್‌ ಮಾಡಲು ಬಳಸುತ್ತಿದ್ದ’ ಎಂದು ಆರೋಪಿಸಿದರು.

ಅತ್ಯಾಚಾರಿ ಪುರುಷನನ್ನು ಬಿಟ್ಟು ಬಲಿಪಶು ಮಹಿಳೆಯರನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ವ್ಯಾಪಕವಾಗಿ ಹರಡುತ್ತಿರುವ ಅಶ್ಲೀಲತೆ ಮನುಷ್ಯನಲ್ಲಿರುವ ಸೂಕ್ಷ್ಮ ಸಂವೇದನೆಗಳನ್ನು ನಾಶಗೊಳಿಸುತ್ತಿದೆ. ಯುವಜನರು ಇದಕ್ಕೆ ಬಲಿಯಾಗದೇ ಈ ಸಮಸ್ಯೆಗಳಿಗೆ ಮೂಲ ಕಾರಣವಾದ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.

ಎಐಎಂಎಸ್‍ಎಸ್‍ ರಾಜ್ಯ ಅಧ್ಯಕ್ಷೆ ಎಂ.ಎನ್. ಮಂಜುಳಾ ಮಾತನಾಡಿ, ‘ಹಾಸನದ ಈ ಘಟನೆ ಮಾನವಕುಲಕ್ಕೆ ಆದ ಅವಮಾನ. ವಿಕೃತ ಮನಸು, ಅಧಿಕಾರದ ದರ್ಪ, ರಾಜಕೀಯ ಬೆಂಬಲ ಈ ದುಷ್ಕೃತ್ಯಕ್ಕೆ ಕಾರಣವಾಗಿದೆ. ಹೆಣ್ಣು ಮಕ್ಕಳನ್ನು ಹಲವು ರೀತಿಯ ಬೆದರಿಕೆಗಳನ್ನೊಡ್ಡಿ ಈ ಕೃತ್ಯವನ್ನು ಎಸಗಲಾಗಿದೆ. ಕಾನೂನಿನಲ್ಲಿರುವ ಲೋಪಗಳು ಅಪರಾಧಿಗೆ ಶಿಕ್ಷೆಯಾಗದಂತೆ ತಡೆಯುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಸ್.ಶೋಭಾ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT