ಶುಕ್ರವಾರ, ಜನವರಿ 21, 2022
29 °C

ಅಂಚೆಯಲ್ಲಿ ಬಂದ ‘ನ್ಯಾಪ್‌ಟಾಲ್’ ವೋಚರ್‌; ₹ 11.65 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಂಚನೆ

ಬೆಂಗಳೂರು: ‘ನ್ಯಾಪ್‌ಟಾಲ್’ ಆನ್‌ಲೈನ್‌ ಕಂಪನಿಯಿಂದ ಕಾರು ಉಡುಗೊರೆ ಬಂದಿರುವುದಾಗಿ ಹೇಳಿ ನಗರದ ನಿವಾಸಿಯೊಬ್ಬರಿಂದ ₹ 11.65 ಲಕ್ಷ ಪಡೆದು ವಂಚಿಸಲಾಗಿದೆ. ಈ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಜಯನಗರದ 9ನೇ ಹಂತದ 49 ವರ್ಷದ ನಿವಾಸಿ ಅರುಣ್, ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದೂರುದಾರ ಅರುಣ್, ಎಸ್‌ಬಿಐ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ. ಅ. 16ರಂದು ಅವರ ಮನೆ ವಿಳಾಸಕ್ಕೆ ಅಂಚೆ ಮೂಲಕ ‘ನ್ಯಾಪ್‌ಟಾಲ್ ಉಡುಗೊರೆ ವೋಚರ್’ ಬಂದಿತ್ತು. ಅದನ್ನು ತೆರೆದು ನೋಡಿದಾಗ, ‘ಮೊದಲ ಬಹುಮಾನ ₹ 8.80 ಲಕ್ಷ ಮೌಲ್ಯದ ಮಾರುತಿ ಸ್ವಿಫ್ಟ್ ಡಿಜೈರ್ ಕಾರು ಗೆದ್ದಿದ್ದೀರಾ. ಅದನ್ನು ಪಡೆದುಕೊಳ್ಳಲು ಮೊಬೈಲ್ ನಂಬರ್ 9836****91 ಸಂಪರ್ಕಿಸಿ’ ಎಂಬ ಬರಹವಿತ್ತು.’

‘ಕಾರು ಸಿಗುವುದೆಂಬ ಆಸೆಯಿಂದ ದೂರುದಾರ, ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದರು. ನ್ಯಾಪ್‌ಟಾಲ್ ಪ್ರತಿನಿಧಿ ಸೋಗಿನಲ್ಲಿ ಮಾತನಾಡಿದ್ದ ಆರೋಪಿ, ‘ಕಾರನ್ನು ನಿಮ್ಮ ಮನೆಗೆ ಕಳುಹಿಸುತ್ತೇವೆ. ಕಾರು ನೋಂದಣಿ ಹಾಗೂ ವಿಲೇವಾರಿಗೆ ಕೆಲ ಶುಲ್ಕಗಳನ್ನು ಪಾವತಿಸಬೇಕು’ ಎಂದಿದ್ದ.

ಆರೋಪಿ ಮಾತು ನಂಬಿದ್ದ ದೂರುದಾರ, ಆತ ಹೇಳಿದ್ದ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ ₹ 11.65 ಲಕ್ಷ ಜಮೆ ಮಾಡಿದ್ದರು. ಅದಾದ ನಂತರ, ಯಾವುದೇ ಕಾರು ನೀಡಿರಲಿಲ್ಲ. ಹಣ ವಾಪಸು ಕೇಳಿದರೂ ಕೊಟ್ಟಿರಲಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು