ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಬೆಳಗಿದ ವಿದ್ಯುತ್‌ ಸ್ಟೇಷನ್‌ಗಳು

Last Updated 8 ಜನವರಿ 2022, 20:46 IST
ಅಕ್ಷರ ಗಾತ್ರ

ಬೆಂಗಳೂರು: ಮಹಾನಗರದಲ್ಲಿ ವಿದ್ಯುತ್‌ ದೀಪಗಳು ಬೆಳಗಿ ಶತಮಾನವೇ ಕಳೆದಿದೆ. ನಗರದಲ್ಲಿ 117 ವರ್ಷಗಳಿಂದ ವಿದ್ಯುತ್‌ ದೀಪಗಳು ಪ್ರಕಾಶಿಸುತ್ತಿವೆ. ಮೈಸೂರು ಸರ್ಕಾರ, ಬ್ರಿಟಿಷರ ಆಡಳಿತ ಹಾಗೂ ಇಂದಿನ ಆಡಳಿತದವರೆಗೂ ನಿರಂತರ ಬದಲಾವಣೆಗಳನ್ನು ವಿದ್ಯುತ್‌ ವಲಯ ಕಂಡಿದೆ. ಈ ಬದಲಾವಣೆಯೂ ಬೆಂಗಳೂರು ನಗರದ ಅಭಿವೃದ್ಧಿಯ ಹಾದಿಗೆ ಹೊಸ ಸ್ವರೂಪಗಳನ್ನು ನೀಡುತ್ತಾ ಬಂದಿವೆ.

1905ರ ಆಗಸ್ಟ್‌ 5ರಂದು ನಗರದಲ್ಲಿ ಸಂಭ್ರಮದ ವಾತಾ ವರಣ. ಅಂದು ಬೆಂಗಳೂರು ನಗರದ ವಿದ್ಯುತ್‌ ಪೂರೈಕೆ ವ್ಯವಸ್ಥೆಗೆ ಚಾಲನೆ ನೀಡಿದ ಐತಿಹಾಸಿಕ ದಿನವದು. ದಕ್ಷಿಣ ಏಷ್ಯಾದಲ್ಲೇ ಜಲ ವಿದ್ಯುತ್‌ ಪಡೆದ ಮೊದಲ ನಗರ ಇದಾಗಿತ್ತು.

1902ರ ಜೂನ್‌ 30ರಂದು ಶಿವನಸಮುದ್ರದಲ್ಲಿ ಜಲ ವಿದ್ಯುತ್‌ ಉತ್ಪಾದನೆ ಆರಂಭವಾದ ಎರಡು ವರ್ಷದ ಬಳಿಕ ಬೆಂಗಳೂರು ನಗರಕ್ಕೆ ವಿದ್ಯುತ್‌ ಪೂರೈಕೆಯ ಯೋಜನೆಗೆ ಅನುಮೋದನೆ ದೊರೆಯಿತು. ಮೈಸೂರು ಸರ್ಕಾರದಲ್ಲಿ ಆಗ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್‌ ಅವರು ಈ ಯೋಜನೆಯಿಂದಾಗುವ ಪ್ರಯೋಜನಗಳನ್ನು ಅರಿತು ಶಿವನಸಮುದ್ರದ ಯೋಜನೆಗೆ ಅನು ಮೋದನೆ ನೀಡಿದ್ದರು. ಕೆಜಿಎಫ್‌ನಲ್ಲಿ ಚಿನ್ನದ ಗಣಿ ಕಾರ್ಯಾಚರಣೆ ಕೈಗೊಳ್ಳುವ ಉದ್ದೇಶದಿಂದ ಈ ವಿದ್ಯುತ್‌ ಯೋಜನೆಗೆ ಚಾಲನೆ ದೊರೆತಿತ್ತು.

ಕಾವೇರಿ ಯೋಜನೆಯ ವಿಸ್ತರ ಣೆಯ ಎರಡನೇ ಹಂತಕ್ಕೆ ಮೈಸೂರು ಮಹಾರಾಜರಿಂದ 1903ರಲ್ಲಿ ನವೆಂಬರ್‌ 10ರಂದು ಸಮ್ಮತಿ ದೊರೆಯಿತು. ಎರಡನೇ ಹಂತದ ವಿಸ್ತರಣೆಯಿಂದ ಕೆಜಿಎಫ್‌ಗೆ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್‌ ಉತ್ಪಾದನೆ ಸಾಧ್ಯವಾಯಿತು. ಈ ಸಂದರ್ಭದಲ್ಲೇ ಹೆಚ್ಚುವರಿ ವಿದ್ಯುತ್‌ ಅನ್ನು ಬೆಂಗಳೂರಿಗೆ ಪೂರೈಸುವ ಚಿಂತನೆ ಮೊಳಕೆ ಒಡೆದಿತ್ತು.

‘ಬೆಂಗಳೂರಿಗೆ ವಿದ್ಯುತ್‌ ಒದಗಿಸಲು 35 ಸಾವಿರ ವೋಲ್ಟ್‌ನ 57 ಮೈಲು ಉದ್ದದ ಏಕಮಾರ್ಗವನ್ನು ಶಿವನಸಮುದ್ರದಿಂದ ಬೆಂಗಳೂರಿಗೆ ನಿರ್ಮಿಸಲಾಯಿತು’ ಎಂದು ‘ಬೆಳಕಾ ಯಿತು ಕರ್ನಾಟಕ’ ಪುಸ್ತಕದಲ್ಲಿ
ಗಜಾನನ ಶರ್ಮಾ ಅವರು ಉಲ್ಲೇಖಿಸಿದ್ದಾರೆ.

ವಿದ್ಯುತ್‌ ಪೂರೈಕೆ ಆರಂಭವಾದ ಬಳಿಕ ನಗರದಲ್ಲಿ ಜಾಲವನ್ನು ವಿಸ್ತರಿಸಲು ವಿವಿಧೆಡೆ ಸ್ಟೇಷನ್‌ಗಳನ್ನು ನಿರ್ಮಿಸುವ ಮಹತ್ವದ ಕಾರ್ಯ ಕೈಗೊಳ್ಳಲಾಯಿತು. ಈ ಸ್ಟೇಷನ್‌ಗಳು ಬೆಂಗಳೂರಿನ ವಿದ್ಯುತ್‌ ಜಾಲದ ಹೆಗ್ಗುರುತುಗಳಾಗಿವೆ.

1905ರಲ್ಲಿ ವಿಕ್ಟೋರಿಯಾ ಆಸ್ಪತ್ರೆ ಬಳಿ ‘ಎಂ’ ಸ್ಟೇಷನ್‌ ಆರಂಭಿಸಲಾಯಿತು. ಇಲ್ಲಿಂದಲೇ ಬೀದಿ ದೀಪಗಳಿಗೆ ವಿದ್ಯುತ್‌ ಪೂರೈಕೆಯಾಗುತ್ತಿತ್ತು. ಬಳಿಕ, ಸರ್ಕಾರಿ ಕಚೇರಿಗಳಿಗೆ ಮತ್ತು ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಯಿತು.

ನಂತರ, ಮಹಾತ್ಮ ಗಾಂಧಿ ರಸ್ತೆ ಮತ್ತು ಕಂಟೋನ್ಮೆಂಟ್‌ನಲ್ಲಿ ವಿದ್ಯುತ್‌ ಪೂರೈಕೆಗೆ1907ರಲ್ಲಿ ಘಟಕಗಳನ್ನು ಸ್ಥಾಪಿಸಲಾಯಿತು. ಇವುಗಳನ್ನು ‘ಬಿ’ ಮತ್ತು ‘ಸಿ’ ಸ್ಟೇಷನ್‌ಗಳನ್ನು ಎಂದು ಕರೆಯಲಾಯಿತು.

ವಿದ್ಯುತ್‌ ಪೂರೈಕೆಯ ಒತ್ತಡ ಹೆಚ್ಚಿದಂತೆ ಆನಂದರಾವ್‌ ವೃತ್ತದ ಬಳಿ 1920ರಲ್ಲಿ ಮತ್ತೊಂದು ಸ್ಟೇಷನ್ ಆರಂಭಿಸಲಾಯಿತು. ನಗರದ ಪ್ರಮುಖ ಪ್ರದೇಶಗಳಿಗೆ ಈ ಸ್ಟೇಷನ್‌ನಿಂದಲೇ ವಿದ್ಯುತ್‌ ಪೂರೈಕೆಯಾಗುತ್ತಿತ್ತು. ಬೆಂಗಳೂರು ವಿದ್ಯುತ್‌ ಮತ್ತು ದೀಪಗಳ ಯೋಜನೆ ಅಡಿ ಈ ಘಟಕ ಸ್ಥಾಪಿಸಲಾಗಿತ್ತು. ಇದನ್ನು ₹5.81 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಈ ಸ್ಟೇಷನ್‌ ಆರಂಭವಾದ ಬಳಿಕ ’ಎಂ‘ ಸ್ಟೇಷನ್‌ ಸ್ಥಗಿತಗೊಳಿಸಲಾಯಿತು.

1905ರಲ್ಲಿ ನಗರದಲ್ಲಿ 1,395 ಬೀದಿ ದೀಪಗಳಿದ್ದವು. ಇವುಗಳ ನಿರ್ವಹಣೆಗೆ ವಾರ್ಷಿಕ ₹20 ಸಾವಿರ ವೆಚ್ಚವಾಗುತ್ತಿತ್ತು ಎನ್ನುವುದನ್ನು ‘ಬೆಂಗಳೂರು ಮುನ್ಸಿಪಲ್‌ ಹ್ಯಾಂಡ್‌ ಬುಕ್‌’ನಲ್ಲಿ ಪ್ರಸ್ತಾಪಿಸಲಾಗಿದೆ.

ವಿದ್ಯುತ್‌ ಸ್ಟೇಷನ್‌ಗಳ ಕಟ್ಟಡಗಳು ಸಹ ಗಮನಸೆಳೆಯುವಂತಿದ್ದು, ನಗರದ ಇತಿಹಾಸ ಬಿಂಬಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT