ಬುಧವಾರ, ಸೆಪ್ಟೆಂಬರ್ 22, 2021
28 °C
ಪಿಪಿಇ ಕಿಟ್‌ ವಿತರಣೆಯಲ್ಲಿ ಅವ್ಯವಹಾರ ಆರೋಪ

ಪಿಪಿಇ ಕಿಟ್‌ ಖರೀದಿ ನಿಯಮ ಉಲ್ಲಂಘಿಸಿಲ್ಲ: ಎಚ್ಎನ್‌ಝಡ್‌ ಅಪೆರಲ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪಿಪಿಇ ಕಿಟ್‌ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷ ಆರೋಪಿಸಿದ್ದು, ಇದರಲ್ಲಿ ನಮ್ಮ ಕಂಪನಿ ಹೆಸರು ಉಲ್ಲೇಖಿಸಿರುವುದು ಸರಿಯಲ್ಲ. ಕಂಪನಿಯು ಯಾವುದೇ ನಿಯಮ ಉಲ್ಲಂಘಿಸಿಲ್ಲ’ ಎಂದು ಎಚ್‌ ಎನ್‌ ಝಡ್‌ ಅಪೆರಲ್ಸ್‌ ಕಂಪನಿ ಸ್ಪಷ್ಟನೆ ನೀಡಿದೆ.

‘ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು (ಕೆಎಸ್‌ಎಂಎಸ್‌ಸಿಎಲ್‌) ಪಿಪಿಇ ಕಿಟ್‌ಗಳ ಖರೀದಿಗಾಗಿ ಏ.26ರಂದು ಟೆಂಡರ್ ಕರೆದಿತ್ತು. ಇದರಲ್ಲಿ 50ಕ್ಕೂ ಹೆಚ್ಚು ಸಂಸ್ಥೆಗಳು ಭಾಗವಹಿಸಿದ್ದವು. ಇದರಲ್ಲಿ ಅತಿ ಕಡಿಮೆ ದರ ನಮೂದಿಸಿದ ಮೂರು ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿತ್ತು. ನಮ್ಮ ಸಂಸ್ಥೆಯೇ ಅತಿ ಕಡಿಮೆ ಅಂದರೆ, ₹498 ದರ ನಮೂದಿಸಿತ್ತು. ಉಳಿದ ಎರಡು ಸಂಸ್ಥೆಗಳು ಕ್ರಮವಾಗಿ ₹499, ₹501 ಎಂದು ನಮೂದಿಸಿದ್ದವು’ ಎಂದು ಕಂಪನಿಯ ಮುಖ್ಯಸ್ಥ ಉಮೇಶ್‌ ಪುತ್ರನ್‌ ಸ್ಪಷ್ಟಪಡಿಸಿದ್ದಾರೆ.

‘ಅರ್ಹತೆ ಇರುವ ಮೂರು ಸಂಸ್ಥೆಗಳ ಜೊತೆಗೆ ಮಾತ್ರ ಚರ್ಚಿಸಿ ಅಧಿಕಾರಿಗಳು ದರ ಕಡಿಮೆ ಮಾಡಿಸಬಹುದು. ಕೊನೆಗೆ, ₹400ಗೆ ಪಿಪಿಇ ಕಿಟ್‌ ವಿತರಿಸಲು ನಮ್ಮ ಸಂಸ್ಥೆಗೆ ಹೇಳಿದರು. ಅದಕ್ಕೆ ನಾವು ಒಪ್ಪಿಕೊಂಡಿದ್ದರಿಂದ ಅಧಿಕಾರಿಗಳು ಕಾರ್ಯಾದೇಶ ನೀಡಿದರು’ ಎಂದು ಹೇಳಿದ್ದಾರೆ.

‘ಕೆಆರ್‌ಎಸ್‌ ಪಕ್ಷದವರು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ ಪಿಪಿಇ ಕಿಟ್‌ ಕೂಡ ನಮ್ಮದಲ್ಲ. ನಮ್ಮ ಪಿಪಿಇ ಕಿಟ್‌ಗಳು ಐಎಫ್‌ಕ್ಯೂನಲ್ಲಿ ನಮೂದಿಸಿರುವ ಮಾನದಂಡಗಳನ್ನು ಹೊಂದಿದ್ದು, ಗುಣಮಟ್ಟದ್ದಾಗಿವೆ' ಎಂದೂ ಅವರು ಹೇಳಿದ್ದಾರೆ.

'ಪಿಪಿಇ ಕಿಟ್ ಖರೀದಿಯಲ್ಲಿ ಅಧಿಕಾರಿಗಳು, ನಿಯಮದ ಪ್ರಕಾರವೇ ಕೆಲಸ ಮಾಡಿ ಸರ್ಕಾರಕ್ಕೆ ಲಾಭ ಮಾಡಿಕೊಟ್ಟಿದ್ದಾರೆ. ಆದರೆ, ಎಲ್-4ನಲ್ಲಿದ್ದ ಯುಕ್ಬಾ ಪ್ಯಾಷನ್  ಹಾಗೂ ಇತರರು, ಪಿಪಿಇ ಕಿಟ್ ಖರೀದಿಯಲ್ಲಿ ಅವ್ಯವಹಾರ ಆಗಿರುವುದಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಕಂಪನಿ‌ ಹೆಸರು ಹಾಗೂ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ಅಂಥವರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ‌‌ ದಾಖಲಿಸಲಾಗುವುದು' ಎಂದೂ ಉಮೇಶ್ ಪುತ್ರನ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು