ಸೋಮವಾರ, ಜನವರಿ 18, 2021
25 °C

ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ಸದಸ್ಯರ ರಾಜೀನಾಮೆ: ರಮೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವಿಧಾನಪರಿಷತ್ತಿನಲ್ಲಿ ನಡೆದ ಅಹಿತಕರ ಘಟನೆ ವೇಳೆ ಮಾಡಿರುವ ತಪ್ಪುಗಳನ್ನು ಮುಚ್ಚಿಕೊಳ್ಳುವ ಉದ್ದೇಶದಿಂದಲೇ ಬಿಜೆಪಿ ಸದಸ್ಯರು ಸದನ ಸಮಿತಿಗೆ ರಾಜೀನಾಮೆ ನೀಡಿರುವ ಅನುಮಾನವಿದೆ’ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಪಿ.ಆರ್‌. ರಮೇಶ್‌ ಹೇಳಿದರು.

ಡಿ. 15ರಂದು ವಿಧಾನಪರಿಷತ್‌ನಲ್ಲಿ ನಡೆದ ಅಹಿತಕರ ಘಟನೆ ಕುರಿತು ಪರಿಶೀಲಿಸಿ ವರದಿ ನೀಡಲು ಸಭಾಪತಿ ರಚಿಸಿದ ಸದನ ಸಮಿತಿಗೆ ಬಿಜೆಪಿ ಸದಸ್ಯರಾದ ಎಚ್‌. ವಿಶ್ವನಾಥ್‌ ಮತ್ತು ಎಸ್‌.ವಿ. ಸಂಕನೂರು ರಾಜೀನಾಮೆ ನೀಡಿದ್ದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ರಮೇಶ್‌, ‘ಸತ್ಯ ತಿಳಿಯುವ ಮುನ್ನವೇ ಬಿಜೆಪಿ ಶಸ್ತ್ರತ್ಯಾಗ ಮಾಡಿದೆ’ ಎಂದು ಟೀಕಿಸಿದರು.

‘ಸದನ ಸಮಿತಿಗೆ ನೇಮಕಗೊಂಡಿದ್ದ ಇಬ್ಬರು ಬಿಜೆಪಿ ಸದಸ್ಯರು ರಾಜೀನಾಮೆ ನೀಡಿದ್ದು ಏಕೆ’ ಎಂದು ಪ್ರಶ್ನಿಸಿದ ಅವರು, ‘ಘಟನೆ ಬಗ್ಗೆ ಜನರಿಗೆ ಸತ್ಯ ತಿಳಿಸಬೇಕು. ಈ ಕಾರಣಕ್ಕೆ ಸದನ ಸಮಿತಿ ರಚಿಸಲಾಗಿದೆ. ಆದರೆ, ಬಿಜೆಪಿ ಸದಸ್ಯರು ಸಮಿತಿಯಿಂದ ಹೊರ ನಡೆದಿರುವುದು ಸರಿಯಾದ ನಡೆಯಲ್ಲ’ ಎಂದರು.

‘ಸದನ ಸಮಿತಿ ಬಿಟ್ಟು ಬೇರೆ ಸಮಿತಿಗಳನ್ನು ರಚಿಸಲು ಅವಕಾಶವಿಲ್ಲ. ಈ ಬಗ್ಗೆ ಕೋರ್ಟ್‌ ಕೂಡ ಸ್ಪಷ್ಟವಾಗಿ ಹೇಳಿದೆ. ಸದನದಲ್ಲಿ ನಡೆದ ಅಹಿತಕರ ಘಟನೆಯ ಸರಿ, ತಪ್ಪು ಸದನದಲ್ಲೇ ತೀರ್ಮಾನ ಆಗಬೇಕು. ಬಿಜೆಪಿ ಸದಸ್ಯರು ಸದನ ಸಮಿತಿಗೆ ಗೌರವ ಕೊಡುವ ಬದಲು ಓಡಿ ಹೋಗಿದ್ದಾರೆ’ ಎಂದರು.

‘ಈ ವಿಷಯದಲ್ಲಿ ಆಯನೂರು ಮಂಜುನಾಥ್ ಸೇರಿದಂತೆ ಬಿಜೆಪಿ ಸದಸ್ಯರ ವಾದಕ್ಕೆ ಬೆಲೆ ಇಲ್ಲ’ ಎಂದೂ ರಮೇಶ್‌ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು