ಗುರುವಾರ , ಮೇ 13, 2021
40 °C

ಜಗತ್ತಿಗೇ ಮಾನವ ಸಂಪನ್ಮೂಲ ಪೂರೈಸಲು ಭಾರತ ಸಶಕ್ತ: ಸದಾನಂದ ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಜಗತ್ತಿಗೇ ಮಾನವ ಸಂಪನ್ಮೂಲ ಪೂರೈಸಲು ಭಾರತ ಸಶಕ್ತ’ ‘ಭವಿಷ್ಯದಲ್ಲಿ ಜಗತ್ತಿಗೇ ಮಾನವ ಸಂಪನ್ಮೂಲ ನೀಡುವ ಸಾಮರ್ಥ್ಯ ಇರುವ ದೇಶ ಭಾರತ. ವಿದ್ಯಾಕ್ಷೇತ್ರಕ್ಕೆ ಹೊಸ ದಿಕ್ಸೂಚಿ ನೀಡಲು ರಾಷ್ಟ್ರೀಯ ಶಿಕ್ಷಣ ನೀತಿ ಸಜ್ಜಾಗಿದೆ’ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅಭಿಪ್ರಾಯಪಟ್ಟರು.

ಕನಕಪುರ ರಸ್ತೆ ಬಳಿಯ ‘ಪ್ರಯೋಗ ಶಿಕ್ಷಣ ಸಂಶೋಧನಾ ಸಂಸ್ಥೆ’ಯ ಉದ್ಘಾಟನೆ ಸಲುವಾಗಿ ವರ್ಚುವಲ್‌ ರೂಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಶನಿವಾರ ಮಾತನಾಡಿದರು.

‘ಕರ್ನಾಟಕ ವೈಜ್ಞಾನಿಕ ಹಾಗೂ ತಂತ್ರಜ್ಞಾನದ ಕೇಂದ್ರವಾಗಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

‘ಆರ್ಥಿಕವಾಗಿ ಹಿಂದುಳಿದ ಹಾಗೂ ವಿಜ್ಞಾನದ ಬಗ್ಗೆ ಹೆಚ್ಚು ಒಲವು ಹೊಂದಿರುವ ಮಕ್ಕಳಿಗೆ ‘ಪ್ರಯೋಗ’ದಂತಹ ಲಾಭರಹಿತ ಶಿಕ್ಷಣ ಸಂಸ್ಥೆಗಳು ಒಂದು ಬಲವಾದ ತಳಪಾಯ ಒದಗಿಸುತ್ತವೆ. ವೈಜ್ಞಾನಿಕ ಆಸಕ್ತಿಯುಳ್ಳ ಮಕ್ಕಳಿಗೆ ಗುಣಮಟ್ಟದ ಹಾಗೂ ಪ್ರಯೋಗಾತ್ಮಕ ಶಿಕ್ಷಣ ಒದಗಿಸಲು ಇದು ಉತ್ತಮ ವೇದಿಕೆಯಾಗಲಿದೆ’ ಎಂದರು. 

ಪ್ರಯೋಗ ಸಂಸ್ಥೆಯ ಸ್ಥಾಪಕ ಎಚ್.ಎಸ್.ನಾಗರಾಜ್, ‘ಈಗಿನ ಶಿಕ್ಷಣ ವ್ಯವಸ್ಥೆ ಮಕ್ಕಳಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಸುವುದರಲ್ಲಿ ಹಾಗೂ ಮೂಲ ತತ್ವಗಳನ್ನು ಅರ್ಥೈಸುವಲ್ಲಿ ವಿಫಲವಾಗಿವೆ. ಮಕ್ಕಳು ಬಾಲ್ಯದಲ್ಲಿ ಕಲಿಯುವ ನೈಜ ಜೀವನದ ಕಲಿಕೆಗಳೇ ಅವರ ಭವಿಷ್ಯದ ಶಿಕ್ಷಣಕ್ಕೆ ಆಧಾರ. ಈ ವಿಧಾನದ ಕಲಿಕೆಯು ಅವರ ಜೀವನದ ದೃಷ್ಟಿಕೋನ ಹಾಗೂ ಸಾಮರ್ಥ್ಯಕ್ಕೆ ಅಡಿಪಾಯ’ ಎಂದರು.

ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ಶಿಕ್ಷಣ ತಜ್ಞ ಎಂ.ಆರ್.ದೊರೆಸ್ವಾಮಿ, ಸಂಸದ ತೇಜಸ್ವಿ ಸೂರ್ಯ, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು