ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾರುವಾಕ್‌ ಕಸರತ್ತು– ಶಿಸ್ತು ತಪ್ಪಿದರೆ ಆಪತ್ತು

ಸೂರ್ಯಕಿರಣ, ಸಾರಂಗಗಳ ಯಶಸ್ಸಿನ ಗುಟ್ಟು ಬಿಟ್ಟಿಚ್ಚ ಸಾರಥಿಗಳು
Last Updated 5 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಸೂರ್ಯಕಿರಣ ಹಾಗೂ ಸಾರಂಗ ತಂಡಗಳು ಆಗಸದಲ್ಲಿ ಮೂಡಿಸುವ ಚಿತ್ತಾರಗಳಿಗೆ, ಚಿತ್ರ ವಿಚಿತ್ರ ಕಸರತ್ತುಗಳಿಗೆ ಮಾರು ಹೋಗದವರಿಲ್ಲ. ಈ ಎರಡೂ ತಂಡಗಳು ಅಪೂರ್ವ ವಿನ್ಯಾಸಗಳಿಗಾಗಿ ಜಗದ್ವಿಖ್ಯಾತ. ಈ ಬಾರಿ ಜಂಟಿಯಾಗಿ ಪ್ರದರ್ಶನ ನೀಡುವ ಮೂಲಕ ಇಂತಹ ಅಭೂತಪೂರ್ವ ಸಾಹಸ ಮಾಡಿರುವ ಜಗತ್ತಿನ ಮೊದಲ ವೈಮಾನಿಕ ಪ್ರದರ್ಶನ ತಂಡಗಳೆನಿಸಿವೆ.

ರೆಕ್ಕೆ ಬಡಿಯದ ವಿಮಾನ ಹಾಗೂ ರೆಕ್ಕೆ ಬಡಿಯುವ ಹೆಲಿಕಾಪ್ಟರ್‌ಗಳ ಜಾಯಮಾನ ಸಂಪೂರ್ಣ ವಿಭಿನ್ನ. ಶರವೇಗದಲ್ಲಿ ಸಂಚರಿಸುವ ಹಾಕ್‌ ಎಂಕೆ- 132 ವಿಮಾನ ಹಾಗೂ ಅದಕ್ಕಿಂತ ತೀರಾ ಕಡಿಮೆ ವೇಗದಲ್ಲಿ ಸಾಗುವ ಬಹೂಪಯೋಗಿ ಹೆಲಿಕಾಪ್ಟರ್‌ಗಳು ಆಗಸದಲ್ಲಿ ಕರಾರುವಾಕ್ಕಾಗಿ ಕಸರತ್ತು ನಡೆಸಿದ್ದರ ಹಿಂದಿನ ಮರ್ಮವನ್ನು ಈ ತಂಡಗಳ ಸಾರಥಿಗಳೇ ಬಿಚ್ಚಿಟ್ಟರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಸಾರಂಗ್‌ ತಂಡದ ನಾಯಕ ವಿಂಗ್‌ ಕಮಾಂಡರ್ ಗಿರೀಶ್‌ ಕೋಮರ್‌, ‘ನಾವು ಜನರೆದುರು ಪ್ರದರ್ಶನ ನೀಡುವುದಕ್ಕೆ ಮುನ್ನ ನಿಖರವಾದ ಯೋಜನೆಗಳನ್ನು ರೂಪಿಸುತ್ತೇವೆ. ಅದಕ್ಕೆ ತಕ್ಕುದಾಗಿ ಶಿಸ್ತುಬದ್ಧ ಅಭ್ಯಾಸ ನಡೆಸುತ್ತೇವೆ. ಸ್ವಲ್ಪ ಶಿಸ್ತು ತಪ್ಪಿದರೂ ಆಪತ್ತು ತಪ್ಪಿದ್ದಲ್ಲ. ಹಾಗಾಗಿ ಸದಾ ಏಕಾಗ್ರತೆ ಕಾಯ್ದುಕೊಳ್ಳುತ್ತೇವೆ. ಇದರಿಂದಾಗಿಯೇ ಕ್ಲಿಷ್ಟಕರ ವಿನ್ಯಾಸ ರೂಪಿಸುವುದು ನಮಗೆ ಸಾಧ್ಯವಾಗಿದೆ’ ಎಂದರು.

‘ಈ ಬಾರಿಯ ಸೂರ್ಯಕಿರಣ ತಂಡದ ಜೊತೆ ಜಂಟಿ ಪ್ರದರ್ಶನ ನೀಡುವುದಕ್ಕೆ ಮುನ್ನ 2 ತಿಂಗಳು ಅಭ್ಯಾಸ ನಡೆಸಿದ್ದೇವೆ. ಜಗತ್ತಿನ ಯಾವುದೇ ವೈಮಾನಿಕ ಕಸರತ್ತು ಪ್ರದರ್ಶನ ತಂಡ ಹಿಂದೆಂದೂ ಇಂತಹ ಸಾಹಸಕ್ಕೆ ಕೈ ಹಾಕಿರಲಿಲ್ಲ. ನಾವು ಈ ಸವಾಲನ್ನು ಸಮರ್ಥವಾಗಿ ನಿಭಾಯಿಸಿದ ಖುಷಿ ಇದೆ. ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡಿಗರ ಎದುರೇ ಚಮತ್ಕಾರ ಪ್ರದರ್ಶಿಸುವುದು ನಿಜಕ್ಕೂ ಹೆಮ್ಮೆ’ ಎಂದು ಕನ್ನಡಿಗರೇ ಆಗಿರುವ ಗಿರೀಶ್‌ ಹೇಳಿದರು. ಅವರು ತುಮಕೂರು ಜಿಲ್ಲೆಯ ಗುಬ್ಬಿಯವರು.

ಸೂರ್ಯಕಿರಣ್ ತಂಡದ ತಾಂತ್ರಿಕ ಅಧಿಕಾರಿಯಾಗಿರುವ ನಾಗೇಂದ್ರ, ‘ನಾವು ಪ್ರದರ್ಶಿಸಿರುವ ಎಲ್ಲ ವಿನ್ಯಾಸಗಳೂ ರೋಮಾಂಚನಕಾರಿಯೇ. ಜನರಿಗೆ ಹೆಚ್ಚು ಮುದ ನೀಡುವ ‘ಸಿಂಕ್ರೋ ವಿನ್ಯಾಸ’ ಅತ್ಯಂತ ಅಪಾಯಕಾರಿ ಹಾಗೂ ರೋಮಾಂಚನಕಾರಿ. ಈ ವಿನ್ಯಾಸ ಪ್ರದರ್ಶಿಸುವಾಗ ವಿಮಾನಗಳು ಎದುರುಬದುರಾಗಿ ಶರವೇಗದಲ್ಲಿ ಹಾದುಹೋಗುವಾದ ಅಂತರ ಕೇವಲ 50 ಅಡಿ ಅಂತರದಲ್ಲಿರುತ್ತವೆ’ ಎಂದರು.

‘ವೈಮಾನಿಕ ಪ್ರದರ್ಶನಕ್ಕೆ ತಾಲೀಮು ನಡೆಸಲು ಕನಿಷ್ಠ 10 ಕಿ.ಮೀ ವ್ಯಾಪ್ತಿಯ ವಾಯು ಪ್ರದೇಶ ಬೇಕು. ಇಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರದಲ್ಲಿದೆ. ಹಾಗಾಗಿ ಸೂರ್ಯಕಿರಣ್ ಹಾಗೂ ಸಾರಂಗ ತಂಡಗಳ ಜಂಟಿ ಪ್ರದರ್ಶನಕ್ಕೆ ಬೀದರ್‌ನಲ್ಲಿ ತಾಲೀಮು ನಡೆಸಿದ್ದೇವೆ’ ಎಂದು ತಿಳಿಸಿದರು.

‘ಶಿಸ್ತುಬದ್ಧ ಪ್ರದರ್ಶನದ ಹಿಂದೆ ಬಹಳ ಶ್ರಮ ಇದೆ. ನಾವು ಆಗಸದಲ್ಲಿ ನಡೆಸುವ ಅನೇಕ ತಪ್ಪುಗಳು ನಮ್ಮ ಅರಿವಿಗೇ ಬಂದಿರುವುದಿಲ್ಲ. ನಂತರ ಕಸರತ್ತಿನ ವಿಡಿಯೋ ನೋಡಿ ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ’ ಎಂದು ವೃತ್ತಿಪರ ಪ್ರದರ್ಶನದ ಗುಟ್ಟು ಬಿಟ್ಟುಕೊಟ್ಟರು.

ಸೂರ್ಯಕಿರಣ ತಂಡದ ನಾಯಕ ವಿಂಗ್‌ ಕಮಾಂಡರ್‌ ಅನೂಪ್ ಸಿಂಗ್‌, ‘ಜನರಿಗೆ ಮುದ ನೀಡುವುದಷ್ಟೇ ಈ ವೈಮಾನಿಕ ಕಸರತ್ತುಗಳ ಉದ್ದೇಶ ಅಲ್ಲ. ಭಾರತೀಯ ವಾಯುಸೇನೆಗೆ ಸೇರಲು ಯುವಜನರನ್ನು ಹುರಿದುಂಬಿಸುವುದೂ ಇದರ ಆಶಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT