ಬುಧವಾರ, ಆಗಸ್ಟ್ 4, 2021
26 °C
ಶಿಕ್ಷಣ ಸಚಿವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಒತ್ತಾಯ

‘ಶ್ವೇತಾ ಪಬ್ಲಿಕ್ ಶಾಲೆಯ ಮಾನ್ಯತೆ ರದ್ಧುಪಡಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರದ ಅನುಮತಿಯಿಲ್ಲದೆಯೇ ಅನಧಿಕೃತ ಕಟ್ಟಡದಲ್ಲಿ ಎರಡು ವರ್ಷಗಳಿಂದ ಶಾಲೆ ನಡೆಸುತ್ತಿರುವ ನಗರದ ಚೋಳೂರು ಪಾಳ್ಯದಲ್ಲಿರುವ ಶ್ವೇತಾ ಪಬ್ಲಿಕ್ ಶಾಲೆಯ (ಸೇಂಟ್ ಮಿರಾಸ್ ಪಬ್ಲಿಕ್ ಸ್ಕೂಲ್) ಮಾನ್ಯತೆಯನ್ನು ರದ್ದುಪಡಿಸಿ,  ಕಾನೂನು ಅಡಿಯಲ್ಲಿ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಒತ್ತಾಯಿಸಿದ್ದಾರೆ. 

ಅಧ್ಯಕ್ಷರು ಈ ಸಂಬಂಧ ಸಚಿವರಿಗೆ ಪತ್ರ ಬರೆದಿದ್ದಾರೆ. ‘ಶಿಕ್ಷಣ ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿ ಶ್ವೇತಾ ಪಬ್ಲಿಕ್ ಶಾಲೆಯು, ಚೋಳೂರು ಪಾಳ್ಯದ ಲಾಲ್ ಬಹದ್ದೂರ್ ಶಾಸ್ತ್ರಿ ಮೆಮೋರಿಯಲ್ ಕನ್ನಡ ಅನುದಾನಿತ ಶಾಲೆಯ ಸಮೀಪ ಅನಧಿಕೃತವಾಗಿ ತರಗತಿಗಳನ್ನು ಸ್ಥಳಾಂತರ ಮಾಡಿದೆ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಶಾಲೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಪ್ರಾಧಿಕಾರ ಪತ್ರ ಬರೆದಿತ್ತು. ಅಲ್ಲದೆ, ಶಾಲೆಯ ಸ್ಥಳಾಂತರದ ಬಗ್ಗೆ ಪರಿಶೀಲಿಸಿ, ವರದಿ ನೀಡಲು ತ್ರಿಸದಸ್ಯ ಸಮಿತಿಯೊಂದನ್ನು ರಚಿಸುವಂತೆಯೂ ಒತ್ತಾಯಿಸಿತ್ತು. ರಚನೆಯಾದ ಸಮಿತಿಯ ಸದಸ್ಯರು ಶ್ವೇತಾ ಪಬ್ಲಿಕ್ ಶಾಲೆಯು ಪ್ರಾಧಿಕಾರದ ಆಕ್ಷೇಪಣೆಗೆ ಸಂಬಂಧಿಸುವುದಿಲ್ಲ ಎಂಬುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಪತ್ರವನ್ನು ಬರೆದಿದ್ದಾರೆ. ಪ್ರಾಧಿಕಾರದ ವ್ಯಾಪ್ತಿಯನ್ನು ಪ್ರಶ್ನಿಸುವ ಹಕ್ಕನ್ನು ಆ ಸಮಿತಿಗೆ ಶಿಕ್ಷಣ ಇಲಾಖೆ ನೀಡಿದೆಯೇ’ ಎಂದು ಸಚಿವರಿಗೆ ಟಿ.ಎಸ್. ನಾಗಾಭರಣ ಪ್ರಶ್ನಿಸಿದ್ದಾರೆ.

‘ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆ ಸ್ಥಳಾಂತರಕ್ಕೆ ಅನುಮತಿ ನೀಡಿರಲಿಲ್ಲ. ಬಾಡಿಗೆ ಕಟ್ಟಡಲ್ಲಿ ಅನಧಿಕೃತವಾಗಿ ಶಾಲೆ ನಡೆಸುತ್ತಿದ್ದು, ಗಾಳಿ–ಬೆಳಕಿನ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳಿವೆ. ಕಟ್ಟಡದ ಒಂದನೇ ಮಹಡಿಯಲ್ಲಿ ಶಾಲೆ ನಡೆಯುತ್ತಿದ್ದು, ನೆಲಮಹಡಿಯಲ್ಲಿ ಮುದ್ರಣ ಪ್ರೆಸ್, ಎರಡು ಹಾಗೂ ಮೂರನೇ ಮಹಡಿಯಲ್ಲಿ ಗಾರ್ಮೇಂಟ್ಸ್ ಕಾರ್ಖಾನೆ ನಡೆಯುತ್ತಿದೆ. ಇದರಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆಯಾಗಲಿದೆ. ಅಧಿಕಾರಿಗಳು ಈ ಬಗ್ಗೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಕಳೆದ 2 ವರ್ಷಗಳಿಂದ ಅನಧಿಕೃತವಾಗಿ ಶಾಲೆ ನಡೆಸುತ್ತಿರುವ ಶ್ವೇತಾ ಪಬ್ಲಿಕ್ ಶಾಲೆಯ ಮಾನ್ಯತೆಯನ್ನು ರದ್ದುಪಡಿಸಿ, ಕ್ರಮ ಜರುಗಿಸಬೇಕು. ’ ಎಂದು ತಿಳಿಸಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು