ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಕೈಕೊಟ್ಟ ಹಿಂದುತ್ವ, ರಾಮಮಂದಿರ: ಪ್ರೊ. ಬಿ.ಕೆ.ಚಂದ್ರಶೇಖರ್‌

Last Updated 20 ಡಿಸೆಂಬರ್ 2018, 20:44 IST
ಅಕ್ಷರ ಗಾತ್ರ

ಬೆಂಗಳೂರು: ಛತ್ತೀಸಗಡ, ಮಧ್ಯಪ್ರದೇಶ ಹಾಗೂ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಹಿಂದುತ್ವ, ರಾಮಮಂದಿರ ಹಾಗೂ ಗೋರಕ್ಷಣೆ ಮಂತ್ರಗಳು ಬಿಜೆಪಿಗೆ ತಿರುಗುಬಾಣವಾಗಿದ್ದು, ಲೋಕಸಭೆ ಚುನಾವಣೆಗೆ ಅಭಿವೃದ್ಧಿಯೊಂದೇ ಮಾನದಂಡವಾಗಲಿದೆ ಎಂದು ಪ್ರದೇಶ ಕಾಂಗ್ರೆಸ್‌ ಸಮಿತಿ ಹಿರಿಯ ಉಪಾಧ್ಯಕ್ಷ ಪ್ರೊ. ಬಿ.ಕೆ.ಚಂದ್ರಶೇಖರ್‌ ಹೇಳಿದರು.

ಬಿಜೆಪಿ ಸಿದ್ಧಾಂತ ಮತ್ತು ಅವುಗಳ ನಾಯಕರ ವರ್ತನೆಯಿಂದ ಬೇಸತ್ತ ಮಧ್ಯಮ ವರ್ಗದ ಮತದಾರರು ಇಬ್ಭಾಗವಾಗಿದ್ದರಿಂದ ಆ ಪಕ್ಷಕ್ಕೆ ಸೋಲಾಯಿತು. ಹಿಂದೂಗಳ ಧ್ರುವೀಕರಣ, ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ, ಪುನಃ ಮುನ್ನೆಲೆಗೆ ಬಂದಿರುವ ರಾಮಮಂದಿರ ನಿರ್ಮಾಣದಂಥ ವಿಚಾರಗಳಿಂದ ಮಧ್ಯಮ ವರ್ಗ ಹತಾಶವಾಗಿದೆ ಎಂದು ಅವರು ವ್ಯಾಖ್ಯಾನಿಸಿದರು.

2014ರ ಲೋಕಸಭೆ ಚುನಾವಣೆಯಲ್ಲಿ ಅಭಿವೃದ್ಧಿ ಮಂತ್ರ ಜಪಿಸುತ್ತಾ ಅಧಿಕಾರಕ್ಕೆ ಬಂದ ಬಿಜೆಪಿ ನಾಯಕರು, ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಮರೆತರು. ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡಿದರು. 2018ರ ಮೇ ತಿಂಗಳಿಂದ ಜುಲೈ ಅಂತ್ಯದವರೆಗೆ ಒಟ್ಟು 70 ಜನ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ ಎಂದು ಅವರು ದೂರಿದರು.

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮೂರೂ ರಾಜ್ಯಗಳಲ್ಲಿ 74 ಪ್ರಚಾರ ಸಭೆಗಳಲ್ಲಿ ಮಾತನಾಡಿದ್ದರು. ಹಿಂದೂಗಳನ್ನು ಒಗ್ಗೂಡಿಸುವ ಸಲುವಾಗಿಯೇ ಅವರನ್ನು ಕಳುಹಿಸಲಾಗಿತ್ತು. ಅವರ ಭಾಷೆ, ಹಾವಭಾವಗಳನ್ನು ಕಂಡು ಮತದಾರರು ರೋಸಿದ್ದರು. ಆದಿತ್ಯನಾಥ ಮತ್ತು ಸಚಿವ ಅನಂತಕುಮಾರ್‌ ಹೆಗಡೆ ಅವರ ನಡುವೆ ಏನೇನೂ ವ್ಯತ್ಯಾಸವಿಲ್ಲ. ಇವರಿಗೆ ಯೋಗಿಯಂತೆ ಖಾವಿ ಇಲ್ಲ ಎಂದು ಚಂದ್ರಶೇಖರ್‌ ಲೇವಡಿ ಮಾಡಿದರು.

ನರೇಂದ್ರ ಮೋದಿ ಸರ್ಕಾರ ಸ್ವಾಯತ್ತ ಸಂಸ್ಥೆಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ರಿಸರ್ವ್‌ ಬ್ಯಾಂಕ್‌ ಹಾಳುಮಾಡಿತು. ಐಸಿಸಿಆರ್, ಐಸಿಎಚ್‌ಆರ್‌ಗಳಂಥ ಉನ್ನತ ಸಂಸ್ಥೆಗಳನ್ನು ನಾಶಪಡಿಸಿತು. ನಳಂದ ವಿಶ್ವವಿದ್ಯಾಲಯದ ವಿಷಯದಲ್ಲೂ ಕೈಹಾಕಿತು. ಹೀಗೆ ಒಂದೊಂದೇ ಸಂಸ್ಥೆಗಳನ್ನು ನಾಶಪಡಿಸಲಾಗುತ್ತಿದೆ ಎಂದು ಅವರು ಟೀಕಿಸಿದರು.

ಪ್ರಧಾನಿ ಮೋದಿ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಹೊಸ ಉದ್ಯೋಗಗಳ ಸೃಷ್ಟಿ ಹೋಗಲಿ, ಇರುವ ಉದ್ಯೋಗಗಳೂ ನಷ್ಟವಾಗುತ್ತಿವೆ. ಸುಮಾರು 74 ಲಕ್ಷ ಉದ್ಯೋಗಗಳು ಕಡಿತವಾಗಿವೆ ಎಂದು ಅವರು ಅಂಕಿಅಂಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT