ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ದಾಖಲೆ: ಯುಪಿಒಆರ್‌ನಲ್ಲಿ ತಪ್ಪು ಮಾಹಿತಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವತ್ತು ಮಾಲೀಕತ್ವದ ‘ದೃಢೀಕೃತ ಕಾರ್ಡ್‌’ನಲ್ಲಿ ಹತ್ತಾರು ದೋಷ
Published 29 ಆಗಸ್ಟ್ 2023, 20:34 IST
Last Updated 29 ಆಗಸ್ಟ್ 2023, 20:34 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಆಸ್ತಿ ಮಾಲೀಕರಿಗೆ ಇದೊಂದು ಕಾರ್ಡ್‌ ಇದ್ದರೆ, ಇನ್ನಾವುದರ ಅವಶ್ಯಕತೆಯೂ ಇಲ್ಲ. ಇದು ಆಸ್ತಿಯ ಸಂಪೂರ್ಣ ದಾಖಲೆಗಳ ಭಂಡಾರ ಎಂದೇ ಹೇಳಲಾಗುತ್ತಿರುವ ‘ಯುಪಿಒಆರ್‌ ಕಾರ್ಡ್‌’ ನಾಗರಿಕರ ಕೈಸೇರುತ್ತಿದ್ದು, ಅದು ತಪ್ಪುಗಳ ಕಣಜವಾಗಿದೆ. 

‘ಇಂತಹ ದಿನ ಸ್ವತ್ತು ಅಳತೆ ಮಾಡಲಾಗುತ್ತದೆ. ದಾಖಲೆಗಳನ್ನು ಒದಗಿಸಬೇಕು’ ಎಂದು ಭೂಮಾಪಕರು (ಸರ್ವೆಯರ್‌) ಆಸ್ತಿ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿರುತ್ತಾರೆ. ಆದರೆ, ಆ ದಿನ ಯಾರೂ ಬರುವುದಿಲ್ಲ. ಅಳತೆಯನ್ನೂ ಮಾಡುವುದಿಲ್ಲ, ದಾಖಲೆಗಳನ್ನೂ ಸಂಗ್ರಹಿಸುವುದಿಲ್ಲ. ಆದರೆ ಎರಡು ತಿಂಗಳ ನಂತರ ‘ಯುಪಿಒಆರ್‌ ಕಾರ್ಡ್’ ಮಾಲೀಕರ ಮನೆಗೆ ಬರುತ್ತದೆ. ಅದರಲ್ಲಿ ಮಾಹಿತಿಗಳೆಲ್ಲವೂ ತಪ್ಪಿರುತ್ತವೆ. ಇಂತಹ ಸಾವಿರಾರು ಪ್ರಕರಣಗಳು ನಗರದಲ್ಲಿ ದಾಖಲಾಗಿವೆ.

‘ನಮ್ಮ ನಿವೇಶನದ ಅಳತೆ 40x25 ಅಡಿ. ಅದರೆ, 1,115 ಚದರ ಅಡಿ. ಆದರೆ, ಯುಪಿಒಆರ್‌ ದಾಖಲೆಯಲ್ಲಿ 1262.2 ಚದರ ಅಡಿ ಎಂದು ನಮೂದಿಸಿದ್ದಾರೆ. ನೋಟಿಸ್‌ ನೀಡಿದ ದಿನ ಸ್ಥಳಕ್ಕೆ ಬಂದು ಅಳತೆ ಮಾಡಲಿಲ್ಲ. ಅಳತೆ ಮಾಡಿಕೊಂಡು ಹೋದೆವು ಎಂದು ಸರ್ವೆಯರ್‌ ಹೇಳಿದರು.  ನಾವು ಮನೆಯಲ್ಲೇ ಇದ್ದೆವು. ಯಾವ ಮಾಯದಲ್ಲಿ ಬಂದು ಹೋದರೋ ಗೊತ್ತಿಲ್ಲ. ಕಾರ್ಡ್‌ನಲ್ಲಿ ನಮ್ಮದಲ್ಲದ ಸ್ಥಳದಲ್ಲಿ ರೆಡ್ ಮಾರ್ಕ್‌ ಹಾಕಿ ಫೋಟೊ ಮುದ್ರಿಸಿದ್ದಾರೆ. ನಕ್ಷೆ ಕೊಟ್ಟಿಲ್ಲ ಎಂದು ಬರೆದಿದ್ದಾರೆ. ಅವರು ಬಂದರೆ ತಾನೇ ಕೊಡುವುದು’ ಎಂದು ಕೆಂಗೇರಿ ಉಪನಗರದ ಶಿವಕುಮಾರ್‌ ಪ್ರಶ್ನಿಸಿದರು.

‘ತಪ್ಪುಗಳಿವೆ, ಹೇಗೆ ಸರಿಪಡಿಸೋದು ಎಂದರೆ ಕೆ.ಆರ್‌. ವೃತ್ತದ ಕಚೇರಿಗೆ ಹೋಗಿದ ದಾಖಲೆ ಕೊಡಿ ಅನ್ನುತ್ತಾರೆ. ಮಾಡುವುದನ್ನು ಒಂದೇ ಬಾರಿ ಸರಿ ಮಾಡಿದರೆ ಅಲೆದಾಡುವುದು ತಪ್ಪುತ್ತದೆ. ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲು ಆಗುತ್ತಿಲ್ಲ.  ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಬೇಕು’ ಎಂದರು.

ಮತ್ತೆ ದಾಖಲೆ ಸಂಗ್ರಹ: ‘ಡ್ರೋನ್‌ ಮೂಲಕ ಆಸ್ತಿಗಳ ನಕ್ಷೆ ಸಂಗ್ರಹಿಸಲಾಗಿದೆ. ಕೆಲವು ಕಡೆ ಮಾಹಿತಿ ತಪ್ಪಾಗಿರುವುದು ಗಮನಕ್ಕೆ ಬಂದಿದೆ. ಅದನ್ನು ಸರಿಪಡಿಸಲು ಸ್ಥಳದಲ್ಲಿ ಪೂರ್ಣ ಅಳತೆಯ ಅಗತ್ಯವಿದೆ. ಅದರ ಜೊತೆಗೆ ದಾಖಲೆಗಳನ್ನೂ ಸಂಗ್ರಹಿಸಲು ತಂಡವನ್ನು ರಚಿಸಲಾಗಿದೆ. ವಾರ್ಡ್‌ವಾರು ಪ್ರತಿ ಆಸ್ತಿಯ ಮಾಲೀಕರಿಂದ ದಾಖಲೆ ಸಂಗ್ರಹಿಸಲಾಗುತ್ತದೆ’ ಎಂದು ಯುಪಿಒಆರ್‌ ಯೋಜನೆಯ ಅಧಿಕಾರಿಗಳು ತಿಳಿಸಿದರು.

100 ಆಸ್ತಿಯ ಗುರಿ: ‘ಪ್ರತಿ ಸರ್ವೆಯರ್‌ಗಳಿಗೆ ದಿನಕ್ಕೆ 100 ಆಸ್ತಿಗಳ ಅಳತೆ ಮಾಡಿ, ದಾಖಲೆ ಸಂಗ್ರಹಿಸುವ ಗುರಿ ನೀಡಲಾಗಿದೆ. ಒಂದು ಸ್ವತ್ತಿಗೆ ಕನಿಷ್ಠ 10 ನಿಮಿಷ ವ್ಯಯಿಸಿದರೆ ಗಂಟೆಗೆ ಆರು ಆಸ್ತಿಗಳ ಮಾಹಿತಿ ಕಲೆಹಾಕಬಹುದು. 10 ಗಂಟೆ ಸತತವಾಗಿ ಕೆಲಸ ಮಾಡಿದರೆ 60 ಆಸ್ತಿಯ ದಾಖಲೆ ಸಂಗ್ರಹವಾಗುತ್ತದೆ. 10 ನಿಮಿಷದಲ್ಲಿ ಪೂರ್ಣ ಅಳತೆ, ದಾಖಲೆ ಸಂಗ್ರಹ ಸಾಧ್ಯವಾಗುವುದಿಲ್ಲ. ಸರ್ವೆಯರ್‌ಗಳು ಸಾಕಷ್ಟು ಒತ್ತಡದಿಂದ ಕೆಲಸ ಮಾಡುತ್ತಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಭೂಮಾಪಕರು ಹೇಳಿದರು.

ನಾಗರಿಕರಿಗೆ ವಿತರಿಸಲಾಗುತ್ತಿರುವ ಯುಪಿಒಆರ್‌ ಕಾರ್ಡ್‌
ನಾಗರಿಕರಿಗೆ ವಿತರಿಸಲಾಗುತ್ತಿರುವ ಯುಪಿಒಆರ್‌ ಕಾರ್ಡ್‌
‘ತಪ್ಪು ಯುಪಿಒಆರ್‌ ಅಗತ್ಯವೇನು?’
‘ನೋಟಿಸ್‌ ನೀಡಿದ ಮೇಲೆ ಅಳತೆ ಮಾಡಲು ಬರಬೇಕು. ನಾವು ಮನೆಯಲ್ಲಿ ಸರ್ವೆಯರ್‌ ಹೇಳಿದ ದಿನ ಕಾದು ಕುಳಿತರೂ ಬರುವುದಿಲ್ಲ. ಗೂಗಲ್‌ ಮ್ಯಾಪ್‌ನಲ್ಲಿ ತೆಗೆದುಕೊಳ್ಳುವುದಾದರೆ ನೋಟಿಸ್‌ ಏಕೆ ಕೊಡಬೇಕು. ನಮ್ಮ ನಿವೇಶನಕ್ಕಿಂತಲೂ ಕಡಿಮೆ ಅಥವಾ ಹೆಚ್ಚಿನ ಅಳತೆ ನಮೂದಿಸಿದರೆ ಮತ್ತೆ ಅದನ್ನು ಸರಿಪಡಿಸಲು ನಾವು ಕಚೇರಿ ಹುಡುಕಿಕೊಂಡು ಹೋಗಬೇಕು. ಬಿಬಿಎಂಪಿಯಿಂದ ಮಾಹಿತಿ ‍ಪಡೆದಿದ್ದೇವೆ ಎನ್ನುತ್ತಾರೆ. ಕ್ರಯ ಪತ್ರ ಖಾತಾ ಆಸ್ತಿ ತೆರಿಗೆ ವಿವರವೆಲ್ಲ ಇದ್ದ ಮೇಲೆ ಅದನ್ನೇ ಏಕೆ ನಮೂದಿಸುವುದಿಲ್ಲ. ಇಂತಹ ತಪ್ಪು ಮಾಹಿತಿಯಿಂದ ನಮಗೆ ಮುಂದೆ ತೊಂದರೆಯಾಗುತ್ತದೆ. ದೋಷಯುಕ್ತ ಯುಪಿಒಆರ್‌ ಕಾರ್ಡ್‌ ನೀಡುವ ಅಗತ್ಯವೇನು’ ಎಂದು ರಾಜರಾಜೇಶ್ವರಿನಗರದ ಟಿ.ಇ. ಶ್ರೀನಿವಾಸ್‌ ಪ್ರಶ್ನಿಸಿದರು. ‘ದಾಖಲೆ ಪಡೆಯದೆ ಕೊಟ್ಟಿಲ್ಲ ಎನ್ನುತ್ತಾರೆ!’ ಯುಪಿಒಆರ್‌ ಯೋಜನೆಯ ಪ್ರಕಾರ ಆಸ್ತಿಯ ಮಾಲೀಕತ್ವದ ಕ್ರಯಪತ್ರ ಆಸ್ತಿ ತೆರಿಗೆ ಪಾವತಿ ರಸೀದಿ ಆಸ್ತಿ ಋಣಭಾರ ಪತ್ರ ಬಿಬಿಎಂಪಿ ಖಾತೆ ನಿವೇಶನ ಹಂಚಿಕೆ ಪತ್ರ ನಿವೇಶನ ಸ್ವಾಧೀನ ಪತ್ರ ಭೂಪರಿವರ್ತನೆ ಆದೇಶ/ ಲೇಔಟ್‌ ನಕ್ಷೆ ಪ್ರತಿ ಮಾಲೀಕರ ಫೋಟೊ ಆಸ್ತಿಯ ಫೋಟೊವನ್ನು ಕಾರ್ಡ್‌ನಲ್ಲಿ ಪ್ರಕಟಿಸಬೇಕು. ಇಷ್ಟೆಲ್ಲ ವಿವರ ಅವರ ಬಳಿ ಇಲ್ಲದಿದ್ದರೆ ನಮ್ಮಿಂದ ಪಡೆಯಬೇಕು. ನೋಟಿಸ್‌ ಕೊಟ್ಟವರು ಬರುವುದೇ ಇಲ್ಲ ದಾಖಲೆ ಸಂಗ್ರಹಿಸದೆ ಕಾರ್ಡ್‌ ಕಳುಹಿಸಿ ಅದನ್ನು ಕೊಟ್ಟಿಲ್ಲ ಎಂದು ನಮೂದಿಸಿದ್ದಾರೆ. ಇದು ಬೇಜವಬ್ದಾರಿ ಯೋಜನೆಯಾಗಿದೆ. ಇದರಿಂದ ಮಾಲೀಕರಿಗೆ ಸಂಕಷ್ಟ ಎದುರಾಗಿದೆ’ ಎಂದು ಕೆಂಗೇರಿಯ ಶಿವಕುಮಾರ್‌ ದೂರಿದರು.
ಏನಿದು ಯುಪಿಒಆರ್‌?
ಸರ್ಕಾರದಿಂದ ನೀಡಲಾಗುವ ‘ಯುಪಿಒಆರ್‌ ಕಾರ್ಡ್‌’ ನಾಗರಿಕರ ಆಸ್ತಿ ಮಾಲೀಕತ್ವದ ಪ್ರಮಾಣಪತ್ರವಾಗಿದೆ. ಆಸ್ತಿಯ ನಕ್ಷೆ ಮಾಲೀಕತ್ವ ವಿವರ ಹಕ್ಕುಗಳು ಸೇರಿದಂತೆ ಸಾಲ ವ್ಯಾಜ್ಯ ಇತರೆ ಮಾಹಿತಿಗಳನ್ನೂ ಹೊಂದಿರುತ್ತದೆ. ‘ಯುಪಿಒಆರ್‌ ಕಾರ್ಡ್‌’ ಹೊಂದಿದ ಆಸ್ತಿ ಮಾರಾಟ ಅಥವಾ ವಿಭಜನೆ ಬದಲಾವಣೆಗಳಾದರೆ ಉಪ ನೋಂದಣಾಧಿಕಾರಿ ಕಚೇರಿಯಿಂದ ಸ್ವಯಂ ಚಾಲಿತ ವ್ಯವಸ್ಥೆಯಲ್ಲಿ ಮಾಹಿತಿಗಳು ಬದಲಾಗುತ್ತವೆ. ಕೆರೆ ಪ್ರದೇಶ ಸರ್ಕಾರಿ ಆಸ್ತಿ ಅರಣ್ಯ ಪ್ರದೇಶದಲ್ಲಿ ಒತ್ತುವರಿಯಾಗಿದ್ದರೆ ಅವುಗಳನ್ನು ಸ್ಪಷ್ಟ ಮಾಹಿತಿ ಪ್ರತಿ ಆಸ್ತಿಗೂ ಸಂಪರ್ಕಿಸಲಾಗಿರುತ್ತದೆ. ಇದು ಯುಪಿಒಆರ್‌ ಯೋಜನೆಯ ಉದ್ದೇಶ. ಆದರೆ ಜನರ ಕೈಗೆ ಸಿಗುತ್ತಿರುವ ‘ಯುಪಿಒಆರ್ ಕಾರ್ಡ್‌ನಲ್ಲಿ’ ಈ ಎಲ್ಲ ಮಾಹಿತಿಗಳು ಇಲ್ಲ. ಬದಲಿಗೆ ಹಲವು ಮಾಹಿತಿಗಳು ತಪ್ಪಾಗಿವೆ.
‘ಇದು ಕರಡು ದಾಖಲೆ ಸಲ್ಲಿಸಬಹುದು’
‘ಈಗ ನೀಡಿರುವುದು ಕರಡು ‘ಯುಪಿಒಆರ್‌ ಕಾರ್ಡ್‌’. ಇದರಲ್ಲಿ ತಪ್ಪುಗಳಿರುವ ಬಗ್ಗೆ ಆನ್‌ಲೈನ್‌ನಲ್ಲಿ ಸುಮಾರು ಏಳು ಸಾವಿರ ದೂರುಗಳು ಬಂದಿವೆ. ಕೆ.ಆರ್‌. ವೃತ್ತದಲ್ಲಿರುವ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಯುಪಿಒಆರ್‌ ಆಯುಕ್ತರ ಕಚೇರಿಯಲ್ಲಿ ದೂರು ಸಲ್ಲಿಸಬಹುದು. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಆನ್‌ಲೈನ್‌ನಲ್ಲೂ (https://rdservices.karnataka.gov.in/service5/) ದೂರು ದಾಖಲಿಸಬಹುದು’ ಎಂದು ಯುಪಿಆರ್‌ ಯೋಜನೆ ನಿರ್ವಹಿಸುವ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT