ಭಾನುವಾರ, ಏಪ್ರಿಲ್ 2, 2023
31 °C

ಸಾವಿರ ಜನರಿಗೊಂದು ಶೌಚಾಲಯವೂ ಇಲ್ಲ: ಹೈಕೋರ್ಟ್‌ಗೆ ವರದಿ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬಯಲು ಶೌಚಮುಕ್ತ ನಗರ ಎಂದು ಬೆಂಗಳೂರನ್ನು 2020ರಲ್ಲೇ ಘೋಷಿಸಿದ್ದರೂ ಚೆನ್ನೈ, ಹೈದರಾಬಾದ್ ಮತ್ತು ಅಹಮದಾಬಾದ್‌ ನಗರಗಳಿಗೆ ಹೋಲಿಸಿದರೆ ಇಲ್ಲಿ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಕಡಿಮೆ ಇವೆ’ ಎಂದು ಬೆಂಗಳೂರು ನೈರ್ಮಲ್ಯ ಯೋಜನಾ ವರದಿ ತಿಳಿಸಿದೆ.

ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಲೋಕಲ್ ಸೆಲ್ಫ್ ಗವರ್ನಮೆಂಟ್‌ ಸಂಸ್ಥೆ ಸಲ್ಲಿಸಿರುವ ಈ ವರದಿಯನ್ನು ಹೈಕೋರ್ಟ್‌ಗೆ ಬಿಬಿಎಂಪಿ ಸಲ್ಲಿಸಿತು. ನಗರದಲ್ಲಿ ಅಗತ್ಯ ಇರುವ ಸಾರ್ವಜನಿಕ ಶೌಚಾಲಯಗಳ ಬಗ್ಗೆ ವರದಿ ಸಿದ್ಧಪಡಿಸುವ ಜವಾಬ್ದಾರಿಯನ್ನು ಈ ಸಂಸ್ಥೆಗೆ ಬಿಬಿಎಂಪಿ ವಹಿಸಿತ್ತು.

‘ಒಂದು ಸಾವಿರ ಜನಸಂಖ್ಯೆಗೆ ಒಂದರಂತೆಯೂ ಸಾರ್ವಜನಿಕ ಶೌಚಾಲಯ ಇಲ್ಲ. ಚೆನ್ನೈ, ಹೈದರಾಬಾದ್, ಅಹಮದಾಬಾದ್‌ನಲ್ಲಿ ಪ್ರತಿ ಚದರ ಕಿಲೋ ಮೀಟರ್, ಪ್ರತಿ ವಾರ್ಡ್‌ಗಳಲ್ಲಿ ಇರುವ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಹೋಲಿಸಿದರೆ ಬೆಂಗಳೂರಿನಲ್ಲಿ ಕಡಿಮೆ ಸಂಖ್ಯೆಯ ಶೌಚಾಲಯಗಳಿವೆ’ ಎಂದು ವರದಿ ಹೇಳಿದೆ.

‘ಕೊಳಚೆ ಪ್ರದೇಶಗಳಿಗೆ ಹೆಚ್ಚಿನ ಸಮುದಾಯ ಶೌಚಾಲಯಗಳು ಅಗತ್ಯ ಇವೆ. ಇರುವ ಶೌಚಾಲಯಗಳಲ್ಲಿ ನಿರ್ವಹಣೆ ಇಲ್ಲದೆ ಬಳಕೆಗೆ ಸಾಧ್ಯವಾಗದ ಸ್ಥಿತಿಯಲ್ಲಿವೆ. ನಿರ್ವಹಣೆ ಇಲ್ಲದ ಕಾರಣ ಶೌಚಾಲಯಗಳ ಬಳಕೆಯ ಮೇಲೂ ಪರಿಣಾಮ ಬೀರುತ್ತಿದೆ. ಬೆಂಗಳೂರಿಗೆ ಆಗಾಗ ಬಂದು ಹೋಗುವ ಜನಸಂಖ್ಯೆ ಶೇ 15 ರ ದರದಲ್ಲಿ ಬೆಳೆಯುತ್ತಿದೆ. ಮಾರುಕಟ್ಟೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಾಣಿಜ್ಯ ಪ್ರದೇಶಗಳಲ್ಲಿ ಹೆಚ್ಚಿನ ಶೌಚಾಲಯಗಳ ಅಗತ್ಯವಿದೆ’ ಎಂದು ವರದಿ ತಿಳಿಸಿದೆ.

ವರದಿ ಅವಲೋಕಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ವಾರ್ಡ್‌ವಾರು ಶೌಚಾಲಯಗಳ ಅಗತ್ಯದ ಬಗ್ಗೆ ವರದಿಯಲ್ಲಿ ಉಲ್ಲೇಖ ಇಲ್ಲದಿದ್ದರೂ, ಪ್ರಮುಖ ವಿಷಯಗಳನ್ನು ಎತ್ತಿ ಹಿಡಿದಿದೆ. ಅಗತ್ಯ ಇರುವ ಕಡೆಗಳಲ್ಲಿ ಶೌಚಾಲಯ ನಿ‌ರ್ಮಾಣ, ನಿರ್ವಹಣೆ ಗುಣಮಟ್ಟ ಸುಧಾರಣೆ ಬಗ್ಗೆ ತಕ್ಷಣ ಗಮನ ಹರಿಸಬೇಕು. ವರದಿಯಲ್ಲಿರುವ ಶಿಫಾರಸುಗಳ ಅನುಷ್ಠಾನ ಸಂಬಂಧ ಅನುಸರಣಾ ವರದಿಯನ್ನು ಆಗಸ್ಟ್ 13ರೊಳಗೆ ಸಲ್ಲಿಸಬೇಕು’ ಎಂದು ಬಿಬಿಎಂಪಿಗೆ ನಿರ್ದೇಶನ ನೀಡಿತು. ನಗರದಲ್ಲಿ ಶೌಚಾಲಯ ಸಮಸ್ಯೆಗಳ ಕುರಿತು ಲಿಟ್ಜ್‌ಕಿಟ್‌ ಫೌಂಡೇಷನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು