ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಲನಚಿತ್ರ ವಾಣಿಜ್ಯ ಮಂಡಳಿಗೆ ಮುತ್ತಿಗೆಗೆ ಯತ್ನ

ಬೀಗ ಹಾಕಿ ಆಕ್ರೋಶ, ಕ್ರಮ ಕೈಗೊಳ್ಳದಿದ್ದರೆ ಮತ್ತೆ ಪ್ರತಿಭಟನೆ
Published 20 ಡಿಸೆಂಬರ್ 2023, 14:20 IST
Last Updated 20 ಡಿಸೆಂಬರ್ 2023, 14:20 IST
ಅಕ್ಷರ ಗಾತ್ರ

ಬೆಂಗಳೂರು: ನಟ ವಿಷ್ಣುವರ್ಧನ್‌ ಅವರ ಅಂತ್ಯಸಂಸ್ಕಾರ ನಡೆದ ಸ್ಥಳವನ್ನು ಪುಣ್ಯಭೂಮಿಯಾಗಿ ಅಭಿವೃದ್ಧಿ ಪಡಿಸುವ ವಿಚಾರದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಂಡಳಿ ಮೌನ ವಹಿಸಿದೆ ಎಂದು ಆರೋಪಿಸಿ, ವಿವಿಧ ಸಂಘಟನೆಗಳು ಬುಧವಾರ ಪ್ರತಿಭಟನೆ ನಡೆಸಿದವು. ಬಳಿಕ, ಪ್ರತಿಭಟನಕಾರರು ಮಂಡಳಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಅಂಬೇಡ್ಕರ್ ಮಾನವ ಹಕ್ಕುಗಳ ಸಮಿತಿ, ಕನ್ನಡ ಪರ ಸಂಘಟನೆಗಳ ಒಕ್ಕೂಟ ಹಾಗೂ ವಿಷ್ಣುವರ್ಧನ್ ಅಭಿಮಾನಿಗಳಿಂದ ಪ್ರತಿಭಟನೆ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬೀಗ ಹಾಕಿ ಆಕ್ರೋಶ ಹೊರಹಾಕಿದರು.

ಅಭಿಮಾನ್ ಸ್ಟುಡಿಯೊ ಆವರಣದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ  ಪದಾಧಿಕಾರಿಗಳು ಸರ್ಕಾರದ ಜೊತೆ ಮಾತುಕತೆ ನಡೆಸದೇ ಮೌನ ವಹಿಸಿದ್ದಾರೆ. ಹೋರಾಟದಲ್ಲೂ ಭಾಗಿಯಾಗುತ್ತಿಲ್ಲ ಎಂದು ದೂರಿದರು.

ಅಂಬೇಡ್ಕರ್ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಕ್ರಾಂತಿರಾಜು ಮಾತನಾಡಿ, ‘ಕನ್ನಡ ಚಿತ್ರರಂಗಕ್ಕೆ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಎರಡು ಕಣ್ಣುಗಳು ಇದ್ದಂತೆ. ವಿಷ್ಣುವರ್ಧನ್ ಅವರದ್ದು ಸರಳ ವ್ಯಕ್ತಿತ್ವವಾಗಿತ್ತು. ಮಾದರಿ ವ್ಯಕ್ತಿಯಾಗಿ ಜೀವನ ಸಾಗಿಸಿದ್ದರು. ಅವರು ಮೃತಪಟ್ಟು 14 ವರ್ಷ ಕಳೆದಿದೆ. ಅಂತಿಮ ಸಂಸ್ಕಾರ ಅಭಿಮಾನ್ ಸ್ಟುಡಿಯೊ ಅವರಣದಲ್ಲಿ ನೇರವೇರಿತ್ತು. ಆ ಜಾಗದಲ್ಲಿ ಸ್ಮಾರಕವಾಗಬೇಕು ಎಂಬ ಬೇಡಿಕೆಯಿತ್ತು. ಆದರೆ, ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ನಿರ್ಲಕ್ಷ್ಯ ತೋರುತ್ತಿದೆ’ ಎಂದು ದೂರಿದರು.

ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಬೊಮ್ಮಸಂದ್ರ, ವೈಭವ ಕರ್ನಾಟಕ ಸಂಘಟನೆಯ ಅಧ್ಯಕ್ಷ ವೆಂಕಟೇಶ್ ಗೌಡ ಸೇರಿದಂತೆ ನೂರಾರು ಮಂದಿ ಮುತ್ತಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT