ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 | ಹಾಸಿಗೆ ಕೊಡಿಸಿ, ಆಂಬುಲೆನ್ಸ್‌ ಕಳುಹಿಸಿ: ಸೋಂಕಿತರ ಬಂಧುಗಳ ದುಂಬಾಲು

ಕರೆಗಳಿಗೆ ಹೈರಾಣಾದ ಪಾಲಿಕೆ ಸದಸ್ಯರು
Last Updated 13 ಜುಲೈ 2020, 19:22 IST
ಅಕ್ಷರ ಗಾತ್ರ

ಬೆಂಗಳೂರು: ‘ಹೇಗಾದರೂ ಮಾಡಿ ಯಾವುದಾದರೂ ಆಸ್ಪತ್ರೆಗೆ ದಾಖಲಿಸಿ...’, ‘ನಮ್ಮವರಿಗೆ ಐಸಿಯುನಲ್ಲಿ ಹಾಸಿಗೆ ಕೊಡಿಸಿ...’, ‘ಸೋಂಕು ದೃಢಪಟ್ಟು ಎರಡು ದಿನಗಳು ಕಳೆದರೂ ಆಂಬುಲೆನ್ಸ್‌ ಬಂದಿಲ್ಲ; ದಯವಿಟ್ಟು ವ್ಯವಸ್ಥೆ ಮಾಡಿ...’

ಬಿಬಿಎಂಪಿ ಸದಸ್ಯರಿಗೆ ಕೊರೊನಾ ಸೋಂಕಿತರಿಂದ, ಅವರ ಸಂಬಂಧಿಗಳಿಂದ ಬರುತ್ತಿರುವ ಕರೆಗಳಿವು.

ನಗರದಲ್ಲಿ ಕೋವಿಡ್‌ ಪ್ರಕರಣಗಳು ಒಂದೇ ಸಮನೆ ಹೆಚ್ಚುತ್ತಿರುವುದು ಪಾಲಿಕೆ ಸದಸ್ಯರ ನಿದ್ದೆಗೆಡಿಸಿದೆ. ಜನರ ಸಮಸ್ಯೆಗಳಗೆ ಸ್ಪಂದಿಸಲಾಗದೆ ಅನೇಕ ಸದಸ್ಯರು ಕರೆಗಳನ್ನೇ ಸ್ವೀಕರಿಸುತ್ತಿಲ್ಲ. ಕೆಲವು ಸದಸ್ಯರ ಮೊಬೈಲ್‌ಗೆ ಕರೆ ಮಾಡಿದರೆ ‘ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ದೂರ ಇದ್ದಾರೆ’ ಎಂಬ ಪ್ರತಿಕ್ರಿಯೆ ಬರುತ್ತಿದೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಪಾಲಿಕೆಯ ಕೆಲವು ಸದಸ್ಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

‘ವಾರ್ಡ್‌ನಲ್ಲಿ ಸಹಾಯಕ ಎಂಜಿನಿಯರ್‌ ಅವರೇ ಸ್ವಯಂಸೇವಕರನ್ನು ನಿಯೋಜಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಕೋವಿಡ್‌ ಪ್ರಕರಣ ಪತ್ತೆಯಾದ ಕಡೆ ಸೋಂಕು ನಿವಾರಕ ಸಿಂಪಡಣೆ ಹಾಗೂ ಕಂಟೈನ್‌ಮೆಂಟ್‌ ಪ್ರದೇಶಗಳನ್ನು ಗುರುತಿಸುವ ಕಾರ್ಯ ನಡೆಸುತ್ತಿದ್ದೇವೆ. ಆಂಬುಲೆನ್ಸ್‌ ಕೊಡಿಸಿ ಎಂಬ ಕರೆಗಳೇ ಜಾಸ್ತಿ. ವಾರ್ಡಿಗೆ ಕನಿಷ್ಠ ಎರಡು ಆಂಬುಲೆನ್ಸ್‌ಗಳನ್ನಾದರೂ ನೀಡಬೇಕು’ ಎಂದು ಒತ್ತಾಯಿಸುತ್ತಾರೆ ವಿ.ವಿ.ಪುರ ವಾರ್ಡ್‌ನ ಸದಸ್ಯೆ ವಾಣಿ ವಿ.ರಾವ್‌.

‘ಯಾವುದೇ ಆಸ್ಪತ್ರೆಯಲ್ಲೂ ಹಾಸಿಗೆಗಳು ಖಾಲಿ ಇಲ್ಲ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಒದಗಿಸುವುದು ಸವಾಲಾಗಿದೆ. ನಮಗೆ ಕರೆ ಮಾಡುವ ಸೋಂಕಿತರ ಬಂಧುಗಳಿಗೂ ಉತ್ತರ ಕೊಡಲಾಗುತ್ತಿಲ್ಲ’ ಎಂದು ಹೊರಮಾವು ವಾರ್ಡ್‌ನ ಪಾಲಿಕೆ ಸದಸ್ಯೆ ರಾಧಮ್ಮ ವೆಂಕಟೇಶ್‌ ತಿಳಿಸಿದರು.

‘ನನ್ನ ವಾರ್ಡ್‌ನಲ್ಲೂ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಸೋಂಕಿತರನ್ನು ಆಸ್ಪತ್ರೆಗೆ ಅಥವಾ ಕೋವಿಡ್‌ ಆರೈಕೆ ಕೇಂದ್ರಗಳಿಗೆ ಕರೆದೊಯ್ಯಲು ಆಂಬುಲೆನ್ಸ್‌ ಲಭಿಸುತ್ತಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ತೀವ್ರವಾಗಿದೆ. 10ಕ್ಕೂ ಹೆಚ್ಚು ಸೋಂಕಿತರಿಗೆ ಮನೆಯಲ್ಲೇ ಆರೈಕೆಗೊಳಗಾಗಲು ವ್ಯವಸ್ಥೆ ಮಾಡಿದ್ದೇವೆ’ ಎಂದು ಮಂಗಮ್ಮನಪಾಳ್ಯ ವಾರ್ಡ್‌ನ ಶೋಭಾ ಜಗದೀಶ್‌ ಗೌಡ ಹೇಳಿದರು.

‘ಪ್ರತಿ ವಾರ್ಡ್‌ನಲ್ಲೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸೋಂಕಿತರು ಮಾತ್ರವಲ್ಲ, ಪ್ರಕರಣ ಪತ್ತೆಯಾದ ಪ್ರದೇಶಗಳ ನಿವಾಸಿಗಳೂ ಕರೆ ಮಾಡುತ್ತಾರೆ. ರಾತ್ರಿಯೂ ನಿದ್ದೆ ಇಲ್ಲದ ಸ್ಥಿತಿ. ಸೋಂಕು ಪತ್ತೆಯಾದ ಪ್ರದೇಶವನ್ನು ಸೋಂಕು ನಿವಾರಕ ಸಿಂಪಡಿಸಲು ಆದಷ್ಟು ವ್ಯವಸ್ಥೆ ಮಾಡುತ್ತಿದ್ದೇವೆ. ಆಸ್ಪತ್ರೆಗಳಲ್ಲಿ ಹಾಸಿಗೆ ಸೌಲಭ್ಯ ಹೆಚ್ಚಿಸುವುದು ನಮ್ಮ ಕೈಯಲ್ಲಿ ಇಲ್ಲ. ಈ ನಿಟ್ಟಿನಲ್ಲಿ ಬಿಬಿಎಂಪಿ ಹಾಗೂ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಶಂಕರಮಠ ವಾರ್ಡ್‌ನ ಸದಸ್ಯ ಎಂ.ಶಿವರಾಜು.

‘ನನ್ನ ವಾರ್ಡ್‌ನಲ್ಲಿ ಸ್ವಯಂಸೇವಕರ ತಂಡಗಳನ್ನು ರಚಿಸಿ ಮನೆಮನೆಗೆ ತೆರಳಿ ಕೊರೊನಾ ಬಗ್ಗೆ ಕಾಳಜಿ ಮೂಡಿಸಲಾಗುತ್ತಿದೆ. ಶ್ರೀಗಂಧ ಬಡಾವಣೆಯಲ್ಲಿ ಒಬ್ಬರಿಗೆ ಸೋಂಕು ಇರುವುದು ಈ ವೇಳೆಯೇ ಪತ್ತೆಯಾಯಿತು. ಆಂಬುಲೆನ್ಸ್‌ ಬಂದಿಲ್ಲ, ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗುತ್ತಿಲ್ಲ ಎಂಬ ದೂರುಗಳು ಸಹಜ. ಜನರ ಸಮಸ್ಯೆಗಳಿಗೆ ಆದಷ್ಟು ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಅಟ್ಟೂರು ವಾರ್ಡ್‌ನ ನೇತ್ರಾ ಪಲ್ಲವಿ ತಿಳಿಸಿದರು.

‘ಮೃತದೇಹ ಹಸ್ತಾಂತರದ ಸಮಸ್ಯೆ’
‘ಮೃತದೇಹದ ಹಸ್ತಾಂತರಕ್ಕೆ ಕ್ಷೇತ್ರದ ಆರೋಗ್ಯ ವೈದ್ಯಾಧಿಕಾರಿಯ ಸಹಿ ಬೇಕು. ಇದರಿಂದಾಗಿ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲು ಒಂದೆರಡು ದಿನ ತಗಲುತ್ತಿದೆ. ಇದಕ್ಕೆ ವಾರ್ಡ್‌ ಮಟ್ಟದ ಅಧಿಕಾರಿ (ಆರೋಗ್ಯ ಪರಿವೀಕ್ಷಕರು ಅಥವಾ ಹಿರಿಯ ಆರೋಗ್ಯ ಪರಿವೀಕ್ಷಕರ) ಸಹಿ ಸಾಕು ಎಂಬ ನಿಯಮ ಜಾರಿಗೊಳಿಸಬೇಕು’ ಎಂದು ರಾಮಸ್ವಾಮಿಪಾಳ್ಯದ ಪಾಲಿಕೆ ಸದಸ್ಯೆ ನೇತ್ರಾವತಿ ಕೃಷ್ಣೇಗೌಡ ತಿಳಿಸಿದರು.

‘ಆಂಬುಲೆನ್ಸ್‌ ಹಾಗೂ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ತೀವ್ರವಾಗಿದೆ. ಈ ಕೊರತೆ ನೀಗಿಸಲು ಬಿಬಿಎಂಪಿ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

‘ಜ್ವರ ಚಿಕಿತ್ಸಾಲಯ ಇಲ್ಲ’
’ಪಾಲಿಕೆಯ 198ನ ವಾರ್ಡ್‌ಗಳಲ್ಲೂ ಜ್ವರ ಚಿಕಿತ್ಸಾಲಯ (ಫಿವರ್‌ ಕ್ಲಿನಿಕ್‌) ಆರಂಭಿಸಲಾಗಿದೆ ಎಂದು ಬಿಬಿಎಂಪಿ ಹೇಳಿದೆ. ಆದರೆ, ರಾಮಸ್ವಾಮಿ ಪಾಳ್ಯ ವಾರ್ಡ್‌ನಲ್ಲಿ ಇನ್ನೂ ಈ ಸೌಲಭ್ಯ ಕಲ್ಪಿಸಿಲ್ಲ’ ಎಂದು ನೇತ್ರಾವತಿ ದೂರಿದರು.

‘ವಾರ್ಡ್‌ನಲ್ಲಿ ಸರ್ಕಾರಿ ಆಸ್ಪತ್ರೆಗಳಿಲ್ಲ. ಫಿವರ್‌ ಕ್ಲಿನಿಕ್‌ ಆರಂಭಿಸುವಂತೆ ಕೋರಿದರೂ ಬಿಬಿಎಂಪಿ ಸ್ಪಂದಿಸಿಲ್ಲ. ಯಾರಿಗಾದರೂ ಕೋವಿಡ್‌ ಲಕ್ಷಣ ಕಂಡುಬಂದರೆ ಪರೀಕ್ಷೆ ಮಾಡಿಸುವುದು ಸಮಸ್ಯೆಯಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಸುಲಿಗೆ ಮಾಡುತ್ತಾರೆ ಎಂಬ ಭಯ ಜನರಲ್ಲಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT