ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಆರ್‌ಆರ್‌ ಭೂಸ್ವಾಧೀನ: ಪರಿಹಾರ ವಿತರಣೆಗೆ ಸಮ್ಮತಿ

ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ
Last Updated 18 ಜೂನ್ 2020, 3:07 IST
ಅಕ್ಷರ ಗಾತ್ರ

ಬೆಂಗಳೂರು: ಪೆರಿಫೆರಲ್‌ ವರ್ತುಲ ರಸ್ತೆಗೆ ಭೂಮಿ ಬಿಟ್ಟುಕೊಡುವವರಿಗೆ ಪರಿಹಾರ ನಿಗದಿ, ಶಿವರಾಮ ಕಾರಂತ ಬಡಾವಣೆಯಲ್ಲಿ ಭೂಮಿ ನೀಡುವವರಿಗೆ, ಅದಕ್ಕೆ ಪ್ರತಿಯಾಗಿ ಅಭಿವೃದ್ಧಿಪಡಿಸಿದ ನಿವೇಶನ ಹಂಚಿಕೆ ಮಾಡುವುದು ಸೇರಿದಂತೆ ಅನೇಕ ಮಹತ್ತರ ನಿರ್ಣಯಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಡಳಿತ ಮಂಡಳಿ ಸಭೆಯಲ್ಲಿ ಬುಧವಾರ ತೆಗೆದುಕೊಳ್ಳಲಾಗಿದೆ.

ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಮುಂದೆ 63 ಪ್ರಸ್ತಾವನೆಗಳಿದ್ದವು.

ಪಿಆರ್‌ಆರ್‌ ಭೂಸ್ವಾಧೀನ ಕುರಿತ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಈ ಯೋಜನೆಗೆ 2 ಎಕರೆವರೆಗೆ ಭೂಮಿ ನೀಡುವವರಿಗೆ ನಗದು ಪರಿಹಾರ ಹಾಗೂ ಅದಕ್ಕಿಂತ ಹೆಚ್ಚು ಜಾಗ ಬಿಟ್ಟುಕೊಡುವವರಿಗೆ ಸ್ವಲ್ಪ ಪ್ರಮಾಣದಲ್ಲಿ ನಗದು ಮತ್ತು ಅದರ ಜೊತೆಗೆ ಅಭಿವೃದ್ಧಿ ಹಕ್ಕು ವರ್ಗಾವಣೆ ಪ್ರಮಾಣಪತ್ರ (ಟಿಡಿಆರ್‌) ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.

‘ಪಿಆರ್‌ಆರ್‌ಗೆ ಭೂಸ್ವಾಧೀನದ ಬಗ್ಗೆ ಶೀಘ್ರವೇ ಜಾಹೀರಾತು ನೀಡಿ ಭೂಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ’ ಎಂದು ಪ್ರಾಧಿಕಾರದ ಆಯುಕ್ತ ಡಾ.ಎಚ್‌.ಆರ್‌.ಮಹದೇವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶಿವರಾಮ ಕಾರಂತ ಬಡಾವಣೆ ಬಡಾವಣೆಗೆ ಜಾಗ ಬಿಟ್ಟುಕೊಡುವ ರೈತರಿಗೆ ಅರ್ಕಾವತಿ ಬಡಾವಣೆಯಲ್ಲಿ ಅನುಸರಿಸಿದಂತೆಯೇ 40:60 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನ ನೀಡಲು ನಿರ್ಣಯಿಸಲಾಗಿದೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಈ ಯೋಜನೆಯ ಪ್ರಾಥಮಿಕ ಅಧಿಸೂಚನೆ ಪ್ರಕಟವಾದ ಬಳಿಕ ಕಟ್ಟಡ ನಿರ್ಮಾಣವಾಗಿರುವ ಜಾಗಗಳನ್ನೂ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಇನ್ನೂ ಅಂತಿಮ ತೀರ್ಮಾನವನ್ನು ಬಿಡಿಎ ಕೈಗೊಂಡಿಲ್ಲ. ಸದ್ಯಕ್ಕೆ ಈ ಬಡಾವಣೆಗೆ ಗುರುತಿಸಿದ ಜಾಗದಲ್ಲಿ ಎಲ್ಲಿ ಕಟ್ಟಡಗಳು ನಿರ್ಮಾಣ ಜಾಗ ಲಭ್ಯ ಇದೆಯೋ ಅದನ್ನು ಬಳಸಿಕೊಂಡು ಬಡಾವಣೆ ಅಭಿವೃದ್ಧಿಪಡಿಸಲು ಬಿಡಿಎ ಮುಂದಾಗಿದೆ.

‘ಈ ಪ್ರಕರಣ ಸದ್ಯ ಸುಪ್ರೀಂ ಕೋರ್ಟ್‌ ಅಂಗಳದಲ್ಲಿದೆ. ಈ ಬಗ್ಗೆ ಸರ್ಕಾರವೇ ಅಂತಿಮ ತೀರ್ಮಾನ ಕೈಗೊಳ್ಳಬೇಕಾಗುತ್ತದೆ’ ಎಂದು ಮಹದೇವ್‌ ತಿಳಿಸಿದರು.

ಸಭೆಯಲ್ಲಿ ಮಂಡನೆಯಾದ ಕೆಲವು ಪ್ರಸ್ತಾವನೆಗಳ ಬಗ್ಗೆ ನಿರ್ಣಯ ಕೈಗೊಳ್ಳುವ ಅಧಿಕಾರವನ್ನು ಪ್ರಾಧಿಕಾರದ ಆಯುಕ್ತರಿಗೆ ನೀಡುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT