ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಆರ್‌ಆರ್‌ ಯೋಜನೆ: ಕಾನೂನುಬಾಹಿರ ಟೆಂಡರ್‌ ಹಿಂಪಡೆಯಲು ಆಗ್ರಹ

Published 6 ಫೆಬ್ರುವರಿ 2024, 14:24 IST
Last Updated 6 ಫೆಬ್ರುವರಿ 2024, 14:24 IST
ಅಕ್ಷರ ಗಾತ್ರ

ಬೆಂಗಳೂರು: ‘ಪೆರಿಫೆರಲ್‌ ವರ್ತುಲ ರಸ್ತೆಯ (ಪಿಆರ್‌ಆರ್) ಅಭಿವೃದ್ಧಿ ಕೈಗೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕಾನೂನು ಬಾಹಿರವಾಗಿ ಕರೆದಿರುವ ಟೆಂಡರ್‌ ಪ್ರಕ್ರಿಯೆಯನ್ನು ತಡೆಹಿಡಿಯಬೇಕು’ ಎಂದು ಪಿಆರ್‌ಆರ್‌ ರೈತ ಹಾಗೂ ನಿವೇಶನದಾರರ ಸಂಘ ಆಗ್ರಹಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಾವಳಿಪುರ ಶ್ರೀನಿವಾಸ್, ‘ಬೆಂಗಳೂರಿನ ಉತ್ತರ ಭಾಗದಲ್ಲಿರುವ 65 ಕಿ.ಮೀ. ವರ್ತುಲ ರಸ್ತೆ ಅಭಿವೃದ್ಧಿಗೆ 2005ರಲ್ಲಿ ಬಿಡಿಎ ಯೋಜನೆ ರೂಪಿಸಿ, 1,810 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಆದರೆ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಇದರಿಂದ ಈ ಭಾಗದ ರೈತ ಕುಟುಂಬಗಳು ಕಂಗಾಲಾಗಿವೆ. ಇದಕ್ಕೆ ಸಂಬಂಧಿಸಿದಂತೆ ಬಿಡಿಎ ಮತ್ತು ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ ರೈತರಿಗೆ ಪರಿಹಾರ ನೀಡುವ ಕುರಿತು ತೀರ್ಮಾನ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿರುವ ಕೆಐಎಡಿಬಿ, ಕೆಎಚ್‌ಬಿ, ಎನ್‌ಎಚ್‌ಎಐ ಸಂಸ್ಥೆಗಳು 2013ರ ಭೂಸ್ವಾಧೀನ ಕಾಯ್ದೆ ಅಡಿಯಲ್ಲಿ ಭೂಸ್ವಾಧಿನಪಡಿಸಿಕೊಂಡು, ರೈತರಿಗೆ ಪರಿಹಾರ ಹಾಗೂ ಪುನರ್ವಸತಿ ನೀಡುತ್ತಿವೆ. ಆದರೆ ಬಿಡಿಎ ಮಾತ್ರ ಬ್ರಿಟಿಷರ ಕಾಲದ 1894ರ ಭೂಸ್ವಾಧೀನ ಕಾಯ್ದೆ ಅಡಿಯಲ್ಲಿ ಯೋಜನೆ ರೂಪಿಸಿ ಪರಿಹಾರ ನೀಡುವುದಾಗಿ ಹೇಳುತ್ತಿರುವುದು ಖಂಡನೀಯ. ಪಿಆರ್‌ಆರ್‌ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, ವಿಚಾರಣೆ ಹಂತದಲ್ಲಿವೆ’ ಎಂದು ತಿಳಿಸಿದರು. 

‘ಹಾಗಿದ್ದೂ ಬಿಡಿಎ 2024ರ ಜನವರಿ 25ರಂದು ಸಾರ್ವಜನಿಕ ಸಹಭಾಗಿತ್ವದಲ್ಲಿ ಪಿಆರ್‌ಆರ್‌ ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಸಲು 2,560 ಎಕರೆಗೆ ಟೆಂಡರ್‌ ಕರೆದಿದೆ. ಇದನ್ನು ವಿರೋಧಿಸಿ ಇದೇ 9ರಂದು ಬಿಡಿಎ ಕೇಂದ್ರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT