ಬುಧವಾರ, ನವೆಂಬರ್ 30, 2022
17 °C

ನೇಮಕಾತಿ ಅಕ್ರಮ: ಪಿಎಸ್‌ಐ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 545 ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದ ಕೆ.ಆರ್.ಪುರ ಸಂಚಾರ ಠಾಣೆ ಪಿಎಸ್‌ಐ ಸುಬ್ರಮಣಿ (35) ಅವರನ್ನು ಸಿಐಡಿ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಎಡಿಜಿಪಿ ಅಮ್ರಿತ್ ಪೌಲ್, ಡಿವೈಎಸ್ಪಿ ಶಾಂತಕುಮಾರ್ ಸೇರಿದಂತೆ 60ಕ್ಕೂ ಹೆಚ್ಚು ಆರೋಪಿಗಳನ್ನು ಪ್ರಕರಣದಲ್ಲಿ ಈಗಾಗಲೇ ಬಂಧಿಸಲಾಗಿದೆ.

‘ಪಿಎಸ್ಐ ಅಕ್ರಮ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಸುಬ್ರಮಣಿ ತಲೆಮರೆಸಿಕೊಂಡಿದ್ದ. ಬೆಂಗಳೂರಿನಲ್ಲಿ ಗುರುವಾರ ಈತನನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ಪೊಲೀಸ್ ನೇಮಕಾತಿ ವಿಭಾಗದ ಸಿಬ್ಬಂದಿ ಜೊತೆ ಪಿಎಸ್‌ಐ ಸುಬ್ರಮಣಿ ಒಡನಾಟ ಹೊಂದಿದ್ದ. ಸಂಬಂಧಿಯೂ ಆಗಿದ್ದ ಅಭ್ಯರ್ಥಿ ಶಿವರಾಜ್ ಹಾಗೂ ಮನು ಕಡೆಯಿಂದ ಲಕ್ಷಾಂತರ ರೂಪಾಯಿ ಪಡೆದಿದ್ದ ಸುಬ್ರಮಣಿ, ಅದನ್ನು ನೇಮಕಾತಿ ವಿಭಾಗದ ಸಿಬ್ಬಂದಿಗೆ ಕೊಟ್ಟಿದ್ದ. ಇಬ್ಬರ ಒಎಂಆರ್ ಪ್ರತಿ ತಿದ್ದುಪಡಿ ಮಾಡಿದ್ದ ಸಿಬ್ಬಂದಿ, ಅಕ್ರಮವಾಗಿ ಆಯ್ಕೆಯಾಗುವಂತೆ ಮಾಡಿದ್ದರು’ ಎಂದೂ ಮೂಲಗಳು ತಿಳಿಸಿವೆ.

‘ಪ್ರಕರಣದಲ್ಲಿ ಈಗಾಗಲೇ ಶಿವರಾಜ್ ಹಾಗೂ ಮನುನನ್ನು ಬಂಧಿಸಲಾಗಿದೆ. ಇವರಿಬ್ಬರು ಸುಬ್ರಮಣಿ ಹೆಸರು ಬಾಯ್ಬಿಟ್ಟಿದ್ದರು’ ಎಂದೂ ಹೇಳಿವೆ.

ಉತ್ತರ ಭಾರತದಲ್ಲಿ ಸುತ್ತಾಟ: ‘ಬಂಧನ ಭೀತಿಯಲ್ಲಿ ರಾಜ್ಯವನ್ನು ತೊರೆದಿದ್ದ ಪಿಎಸ್‌ಐ ಸುಬ್ರಮಣಿ, ಉತ್ತರ ಭಾರತದ ರಾಜ್ಯಗಳಲ್ಲಿ ಸುತ್ತಾಡುತ್ತಿದ್ದ. ಪ್ರಕರಣದ ತನಿಖೆಯ ಕಾವು ಕಡಿಮೆಯಾಗಿರಬಹುದು ಎಂದು ತಿಳಿದು ಇತ್ತೀಚೆಗಷ್ಟೇ ನಗರಕ್ಕೆ ಬಂದಿದ್ದ. ಖಚಿತ ಮಾಹಿತಿ ಸಂಗ್ರಹಿಸಿ ಈತನನ್ನು ಸೆರೆಹಿಡಿಯಲಾಯಿತು’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.