ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ದರೋಡೆ ಆರೋಪ: ಕತೆ ಕಟ್ಟಿದ್ದ ಪಿಎಸ್‌ಐ ಪತ್ನಿ

Published 16 ಆಗಸ್ಟ್ 2024, 15:20 IST
Last Updated 16 ಆಗಸ್ಟ್ 2024, 15:20 IST
ಅಕ್ಷರ ಗಾತ್ರ

ಬೆಂಗಳೂರು: ಅಶೋಕನಗರ ಪೊಲೀಸ್​ ಠಾಣೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಪುಟ್ಟಸ್ವಾಮಿ ಅವರ ಮನೆಯಲ್ಲಿ ದರೋಡೆ ನಡೆದಿಲ್ಲ. ಮನೆಯಲ್ಲಿರಿಸಿದ್ದ ಹಣವನ್ನು ಅಧಿಕಾರಿಯ ಪತ್ನಿಯೇ ತನ್ನ ಸಂಬಂಧಿಕರಿಗೆ ಕೊಟ್ಟು, ದರೋಡೆಯ ಕತೆ ಕಟ್ಟಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ ಎಂದು ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ್ ತಿಳಿಸಿದರು.

ಜುಲೈ 11ರಂದು ಮನೆಗೆ ನುಗ್ಗಿದ ಕಳ್ಳರು ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ₹12 ಲಕ್ಷ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು ಎಂದು ಕೋರಮಂಗಲ ಠಾಣೆಗೆ ಪುಟ್ಟಸ್ವಾಮಿ ಅವರ ಪತ್ನಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದರು.

‘ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ ಕೋರಮಂಗಲ ಪೊಲೀಸರಿಗೆ, ಘಟನೆ ನಡೆದ ದಿನ ಪುಟ್ಟಸ್ವಾಮಿ ಅವರ ಮನೆಗೆ ಹೊರಗಿನ ವ್ಯಕ್ತಿಗಳು ಬಂದಿರುವ ಸುಳಿವು ಪತ್ತೆಯಾಗಿರಲಿಲ್ಲ. ಬಳಿಕ ಕೂಲಂಕಷವಾಗಿ ದೂರುದಾರರು ಮತ್ತು ಸಂಬಂಧಿಕರ ವಿಚಾರಣೆ ನಡೆಸಿದಾಗ ದರೋಡೆ ನಡೆದಿಲ್ಲ ಎಂಬುದು ಗೊತ್ತಾಯಿತು’ ಎಂದು ದಯಾನಂದ್ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ತವರು ಮನೆಯ ಆರ್ಥಿಕ ಬಿಕ್ಕಟ್ಟಿನ ವೇಳೆ ಸಹಾಯಕ್ಕಾಗಿ ಹಣ ಮತ್ತು ಚಿನ್ನಾಭರಣ ನೀಡಿ, ಬಳಿಕ ಕಟ್ಟು ಕಥೆ ಕಟ್ಟಿ ಪ್ರಕರಣ ದಾಖಲಿಸಿರುವುದು ತಿಳಿದು ಬಂದಿದೆ. ಹಣ ಪಡೆದಿರುವವರ ಮಾಹಿತಿ ಲಭ್ಯವಾಗಿದೆ. ಅವರಿಂದ ₹ 12 ಲಕ್ಷ ನಗದು ಹಾಗೂ 114 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗುವುದು’ ಎಂದರು.

ಪುಟ್ಟಸ್ವಾಮಿ ಕೂಡ ಸತ್ಯ ಮರೆಮಾಚಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿರುವುದು ಡಿಸಿಪಿ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ದೃಢಪಟ್ಟಿದೆ. ಅವರ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT