ಎಂಜಿನಿಯರ್ ಬೇಜವಾಬ್ದಾರಿಗೆ ಐಎಎಸ್‌ ಅಧಿಕಾರಿ ಪಲ್ಲವಿ ಗರಂ

7
ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ದೂರು

ಎಂಜಿನಿಯರ್ ಬೇಜವಾಬ್ದಾರಿಗೆ ಐಎಎಸ್‌ ಅಧಿಕಾರಿ ಪಲ್ಲವಿ ಗರಂ

Published:
Updated:

ಬೆಂಗಳೂರು: ‘ಸರ್ಕಾರದಲ್ಲಿ ಲಂಚ ನೀಡದಿದ್ದರೆ ಯಾವ ಕೆಲಸವೂ ಆಗುವುದಿಲ್ಲ‌ ಎಂಬಂತಹ ಪರಿಸ್ಥಿತಿ ಇದೆ’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವಿಚಕ್ಷಣಾ ವಿಭಾಗದ ಜಂಟಿ ಕಾರ್ಯದರ್ಶಿ ಪಲ್ಲವಿ ಅಕುರಾತಿ ಗಂಭೀರ ಆರೋಪ ಮಾಡಿದ್ದಾರೆ.

ತಮ್ಮ ವಾಸದ ಮನೆಯ ಕುಂದುಕೊರತೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಬೇಜವಾಬ್ದಾರಿ ಬಗ್ಗೆ ಕಿಡಿಕಾರಿರುವ ಅವರು, ‘ನನ್ನಂತಹ ಐಎಎಸ್‌ ಅಧಿಕಾರಿಗೇ ಈ ರೀತಿಯ ಕೆಟ್ಟ ಅನುಭವ ಉಂಟಾದರೆ ಇನ್ನು, ಗ್ರೂಪ್‌–‘ಬಿ’ ಮತ್ತು ‘ಸಿ’ ದರ್ಜೆಯ ನೌಕರರ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ನೀವೇ ಯೋಚಿಸಿ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಯಾಕೆ ಈ ದೂರು?: ಪಲ್ಲವಿ ಅಕುರಾತಿ ಜೀವನ್‌ ಬಿಮಾ ನಗರದಲ್ಲಿರುವ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ (ಬಿ–108) ವಾಸ ಮಾಡುತ್ತಿದ್ದಾರೆ.

‘ಈ ವಸತಿ ಗೃಹದ ರಸ್ತೆ ಮತ್ತು ಒಳಚರಂಡಿ ಕೆಟ್ಟು ಹೋಗಿವೆ’ ಎಂದು ಅವರು, ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ.ಮಹಾಲಕ್ಷ್ಮಿ ಅವರನ್ನು 2018ರ ಮೇ 15ರಂದು ಖುದ್ದು ಭೇಟಿ ಮಾಡಿ ವಿವರಿಸಿದ್ದರು.

ತಕ್ಷಣವೇ ಮಹಾಲಕ್ಷ್ಮಿ ಅವರು, ‘ಇದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಗೆ ಬರುತ್ತದೆ’ ಎಂದು ಹೇಳಿ ಸ್ಥಳೀಯ ಸಹಾಯಕ ಎಂಜಿನಿಯರ್ ಗಿರೀಶ್‌ ಅವರ ಗಮನಕ್ಕೆ ತಂದಿದ್ದರು. ‘ಈ ಸಮಸ್ಯೆಯನ್ನು ಒಂದು ವಾರದಲ್ಲಿ ಸರಿಪಡಿಸಿ ಮತ್ತು ಇದನ್ನು ನಿರ್ವಹಿಸಿದ ಬಗ್ಗೆ ನನಗೆ ವರದಿ ಕೊಡಬೇಕು’ ಎಂದು ತಾಕೀತು ಮಾಡಿದ್ದರು.

ಇದರ ಅನುಸಾರ, ಬಿಬಿಎಂಪಿಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಮತ್ತು ಸಹಾಯಕ ಎಂಜಿನಿಯರ್‌ ಅದೇ ದಿನ ವಸತಿ ಗೃಹಕ್ಕೆ ಖುದ್ದು ಭೇಟಿ ನೀಡಿ ಸಮಸ್ಯೆ ಏನೆಂದು ತಿಳಿದುಕೊಂಡು ಹೋಗಿದ್ದರು. ಆದರೆ, ಈತನಕ ಸಮಸ್ಯೆ ಬಗೆಹರಿಸಿಲ್ಲ.

‘ಗಿರೀಶ್‌ ಅವರಿಗೆ ದೂರವಾಣಿ ಕರೆ ಮಾಡಿದರೆ, ಒಂದೋ ಸ್ವಿಚ್ಡ್‌ ಆಫ್‌ ಎಂದು ಬರುತ್ತದೆ, ಇಲ್ಲವೇ ಕರೆಯನ್ನು ಸ್ವೀಕರಿಸಲಾಗುತ್ತಿಲ್ಲ ಎಂಬ ಸಂದೇಶ ಬರುತ್ತಿದೆ’ ಎಂದು ಪಲ್ಲವಿ, 2018ರ ಜೂನ್‌ 7ರಂದು ಮಹಾಲಕ್ಷ್ಮಿ ಅವರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

‘ತಿಪ್ಪೆಗುಂಡಿಯಂತೆ ಆಗಿದೆ’

‘ಜೀವನ್‌ ಬಿಮಾ ನಗರದಲ್ಲಿರುವ ಕೆಪಿಡಬ್ಲ್ಯುಡಿ ವಸತಿ ಗೃಹ ಮತ್ತು ವಿಶೇಷವಾಗಿ ಪಂಚಶಕ್ತಿ ದೇವಾಲಯದ ಎದುರಿನ ಜಾಗ ತಿಪ್ಪೆಗುಂಡಿಯಾಗಿದೆ’ ಎಂದು ಪಲ್ಲವಿ ದೂರಿದ್ದಾರೆ.

‘ಈ ಜಾಗವು ಅನೈತಿಕ ಚಟುವಟಿಕೆಗಳ ತಾಣವೂ ಆಗಿ ಪರಿಣಮಿಸಿದೆ. ಇದರಿಂದ ಸರ್ಕಾರದ ಈ ಸ್ಥಿರಾಸ್ತಿಗೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !