ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಕಾಮಗಾರಿಗಳ ಕಾರ್ಯಾರಂಭಕ್ಕೆ ಮೀನಮೇಷ

Published 1 ಏಪ್ರಿಲ್ 2024, 0:13 IST
Last Updated 1 ಏಪ್ರಿಲ್ 2024, 0:13 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಾಹನ ದಟ್ಟಣೆ, ಗುಂಡಿತುಂಬಿದ ರಸ್ತೆಗಳು, ತೆರವು ಮಾಡದ ಕಸ, ಹೂಳು ತುಂಬಿದ ಚರಂಡಿಗಳು, ಮಳೆ ಬಂದಾಗ ಮನೆಗಳಿಗೆ ನೀರು ತುಂಬಿಸುವ ರಾಜಕಾಲುವೆಗಳು, ಸುಗಮ ಸಂಚಾರಕ್ಕೆ ಮೇಲ್ಸೇತುವೆಗಳು, ಅಂಡರ್‌ಪಾಸ್‌ಗಳು... ಇವೆಲ್ಲವೂ ಪ್ರತಿ ಚುನಾವಣೆಯ ಪ್ರಚಾರದ ಪ್ರಮುಖ ಸರಕುಗಳು.

ಬೆಂಗಳೂರಿಗೆ ಮೂಲಸೌಕರ್ಯ ಒದಗಿಸುವ ಯೋಜನೆಗಳ ಬಗ್ಗೆ ಹಿಂದಿನ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಸಾಕಷ್ಟು ಭರವಸೆಗಳನ್ನು ನೀಡಲಾಗಿತ್ತು. ಸೌಕರ್ಯಗಳಿಲ್ಲದ ಬಗ್ಗೆ ಪ್ರತಿಪಕ್ಷದವರು ಆಡಳಿತ ಪಕ್ಷವನ್ನು ಜರಿದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಚಾರದಲ್ಲೂ ಇದೇ ತರಹದ ಕಾಯಕ ಮುಂದುವರಿಯಲಿದೆ.

ವಾಹನ ದಟ್ಟಣೆ ಸುಧಾರಣೆ ಹಾಗೂ ಸಿಗ್ನಲ್‌ರಹಿತ ಯೋಜನೆಗಳನ್ನು ಹತ್ತಾರು ವರ್ಷಗಳಿಂದ ರೂಪಿಸಲಾಗುತ್ತಿದೆ. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಈ ಎರಡೂ ವಿಷಯಗಳು ಹೆಚ್ಚು ಪ್ರಚಾರ, ಆರೋಪಗಳಲ್ಲಿದ್ದವು. ಆದರೆ, ಈವರೆಗೂ ಯೋಜನೆಗಳು ಅನುಷ್ಠಾನವಾಗಿಲ್ಲ.

ನಗರದಲ್ಲಿ ಹತ್ತು ತಿಂಗಳಲ್ಲಿ ಪ್ರಮುಖ ಯೋಜನೆಗಳು ಸ್ಥಗಿತಗೊಂಡಿವೆ. ಅದರಲ್ಲೂ ಮೇಲ್ಸೇತುವೆಗಳ ಕಾಮಗಾರಿಗಳು ಸ್ಥಗಿತಗೊಂಡು ಜನರಿಗೆ ತೊಂದರೆ ನೀಡುತ್ತಿವೆ. ಜೊತೆಗೆ, ಪಾಲಿಕೆಗೆ ಆರ್ಥಿಕ ಹೊರೆಯೂ ಹೆಚ್ಚಾಗುತ್ತಿದೆ. ಇದು ರಾಜಕಾರಣದ ತಂತ್ರಗಳು. ಹಿಂದಿನ ಸರ್ಕಾರ ಅನುಷ್ಠಾನಗೊಳಿಸಿದ ಯೋಜನೆಗಳಿಗೆ ಹೊಸ ಸರ್ಕಾರ ತಡೆಯೊಡ್ಡಿದ ಕೆಲವು ಪ್ರಕರಣಗಳಿವೆ. ಯಲಹಂಕ, ನಾಯಂಡಹಳ್ಳಿ ಬಳಿಯ ಹೊರ ವರ್ತುಲ ರಸ್ತೆ ಹಾಗೂ ರಾಜರಾಜೇಶ್ವರಿನಗರದ ಆರ್ಚ್‌ ಬಳಿಯ ಮೇಲ್ಸೇತುವೆಗಳ ಕಾಮಗಾರಿಗಳು ಹಲವು ತಿಂಗಳುಗಳಿಂದ ಸ್ಥಗಿತಗೊಂಡಿವೆ. ಹಣ ಬಿಡುಗಡೆ ಮಾಡದಿರುವುದು ಇದಕ್ಕೆ ಕಾರಣ. ಅಲ್ಲದೆ, ಸ್ಥಳೀಯ ಶಾಸಕರು ಮತ್ತು ಆಡಳಿತ ಪಕ್ಷದ ನಡುವಿನ ಜಟಾಪಟಿಯೂ ಪ್ರಮುಖ ಕಾರಣ. ಇದು ಲೋಕಸಭೆ ಚುನಾವಣೆಯ ಪ್ರಚಾರದ ಸಮಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ಪ್ರತ್ಯಾರೋಪಗಳಿಗೆ ಕಾರಣವಾಗಲಿದೆ.

ಕೋರಮಂಗಲದಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸುವ ಪ್ರಮುಖ ಯೋಜನೆಯಾದ ಈಜಿಪುರ ಮೇಲ್ಸೇತುವೆ ಕಾಮಗಾರಿಯ ಕಥೆ ಮತ್ತೊಂದು ರೀತಿಯದ್ದೇ ಆಗಿದೆ. ಇದು 2016ರಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದಾಗ ಜಾರಿಯಾದ ಯೋಜನೆ. ಆದರೆ, ಬಿಜೆಪಿ ಸರ್ಕಾರವಿದ್ದಾಗ ಸ್ಥಗಿತಗೊಂಡಿತ್ತು. ಆಗ ಬಿಜೆಪಿ ವಿರುದ್ದ ಕಾಂಗ್ರೆಸ್‌ನ ಜನಪ್ರತಿನಿಧಿಗಳು ಆರೋಪ ಮಾಡಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಟಿಎಂ ವಿಧಾನಸಭೆ ಕ್ಷೇತ್ರದ ಪ್ರಮುಖ ಅಸ್ತ್ರವೂ ಇದೇ ಆಗಿತ್ತು. ‘ಅಧಿಕಾರಕ್ಕೆ ಬಂದ 11 ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸುವುದಾಗಿ’ ರಾಮಲಿಂಗಾರೆಡ್ಡಿ ಅವರೇ ಹೇಳಿದ್ದರು. ಆದರೆ, ಅರ್ಧಕ್ಕೆ ನಿಂತ ಈಜಿಪುರ ಮೇಲ್ಸೇತುವೆಯ ಕಾಮಗಾರಿ, ಗುತ್ತಿಗೆ ನೀಡಿ ಐದು ತಿಂಗಳಾದರೂ ಕೆಲಸವೇ ಆರಂಭವಾಗಿಲ್ಲ. ಮೊದಲು ಮುಂಗಡ ಹಣ ನೀಡಿಲ್ಲ ಎಂದು ನಿಧಾನವಾದರೆ, ಇದೀಗ ಭೂಸ್ವಾಧೀನವಾಗಿಲ್ಲ ಎಂದು ಕಾಮಗಾರಿ ನಡೆಯುತ್ತಿಲ್ಲ.

ಸೈಕಲ್‌, ಹೊಲಿಗೆ ಯಂತ್ರ, ಅಂಗವಿಕಲರಿಗೆ ವಾಹನ ವಿತರಣೆ ಸೇರಿದಂತೆ ಸಮಾಜ ಕಲ್ಯಾಣದ ನೂರಾರು ಕೋಟಿ ವೆಚ್ಚದ ಸೌಲಭ್ಯಗಳನ್ನೂ ಎರಡು ವರ್ಷಗಳಿಂದ ಫಲಾನುಭವಿಗಳಿಗೆ ನೀಡಿಲ್ಲ. ರಸ್ತೆಗಳನ್ನು ಗುಂಡಿ ಮುಕ್ತವಾಗಿಸುವ ಕಾರ್ಯ ಇನ್ನೂ ಆರಂಭವೇ ಆಗಿಲ್ಲ. ಚರಂಡಿಗಳಲ್ಲಿ ಹೂಳು ತುಂಬಿಕೊಂಡೇ ಇದೆ. ಪಾದಚಾರಿ ಮಾರ್ಗವಂತೂ ನಡೆಯುವ ಪರಿಸ್ಥಿತಿಯಲ್ಲಿ ಇಲ್ಲ. ಉದ್ಯಾನಗಳಲ್ಲಿ ಗಿಡ–ಮರಗಳು ಒಣಗುತ್ತಿದ್ದರೂ, ನೀರು ಹಾಕುವ ಕೆಲಸವೂ ಆಗಿಲ್ಲ. ಸಾರ್ವಜನಿಕ ಶೌಚಾಲಯ ಸ್ಥಾಪಿಸುವ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ. ವೈಟ್‌ ಟಾಪಿಂಗ್‌ ರಸ್ತೆಗಾಗಿ ₹2,000 ಕೋಟಿ ವೆಚ್ಚ ಮಾಡಲು ಉದ್ದೇಶಿಸಿದ್ದರೂ ಅದರ ಕಾಮಗಾರಿಗೆ ಅನುಮೋದನೆ ದೊರೆತಿಲ್ಲ.

ಈ ಎಲ್ಲ ಯೋಜನೆಗಳೂ ಸೇರಿದಂತೆ ರಸ್ತೆಗೆ ಡಾಂಬರು ಹಾಕಲು, ಕೊಳವೆಬಾವಿ ಕೊರೆಯಲು ಲೋಕಸಭಾ ಚುನಾವಣೆ ಪ್ರಕಟವಾಗುವ ಕೆಲವೇ ದಿನಗಳ ಮೊದಲು ಟೆಂಡರ್‌ ಕರೆದಿದ್ದಾರೆ. ಆದರೆ, ಇವೆಲ್ಲ ಕಾಮಗಾರಿಗಳು ಚುನಾವಣೆಯ ನಂತರವ

ಷ್ಟೇ ಅನುಮೋದನೆಯಾಗಿ, ಕಾರ್ಯಾದೇಶ ಪಡೆಯಬೇಕು. ಮುಂದಿನ ಆರು ತಿಂಗಳಲ್ಲಿ ಇವು ಅನುಷ್ಠಾನವಾಗುವ ಖಾತರಿ ಇಲ್ಲ. ‘ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಯಲ್ಲಿ ಸುರಂಗ ರಸ್ತೆ, ಸ್ಕೈಡೆಕ್‌ ಸೇರಿದಂತೆ ಹಲವು ಯೋಜನೆಗಳು ಪ್ರಕಟವಾಗಿದ್ದರೂ, ಅವುಗಳಿಗೆ ಸ್ಪಷ್ಟ ರೂಪುರೇಷೆ ಇನ್ನೂ ಸಿಕ್ಕಿಲ್ಲ.

ಕೋರಮಂಗಲದಲ್ಲಿ ಕಾರ್ಯಾಚರಣೆಗೆ ಕಾಯುತ್ತಿರುವ ಎರಡನೇ ಹಂತದ ವರ್ಗಾವಣೆ ಕೇಂದ್ರ (ಎಸ್‌ಟಿಎಸ್‌)
ಕೋರಮಂಗಲದಲ್ಲಿ ಕಾರ್ಯಾಚರಣೆಗೆ ಕಾಯುತ್ತಿರುವ ಎರಡನೇ ಹಂತದ ವರ್ಗಾವಣೆ ಕೇಂದ್ರ (ಎಸ್‌ಟಿಎಸ್‌)

ಮಳೆಗಾಲದಲ್ಲೂ ಪರಿಸ್ಥಿತಿ ಸುಧಾರಿಸಲ್ಲ!

2022ರ ಮಳೆಗಾಲದಲ್ಲಿ ಬೆಂಗಳೂರಿನ ಪೂರ್ವ ಭಾಗ ಮುಳುಗಿಹೋಗಿತ್ತು. ‘ಸಂಪೂರ್ಣ ಬೆಂಗಳೂರೇ ಮುಳುಗಿ ಹೋಯಿತು’ ಎಂಬ ಅಭಿಪ್ರಾಯಗಳು ವ್ಯಕ್ತವಾದವು. ರಾಜಕೀಯವಾಗಿ ಎಲ್ಲ ಪಕ್ಷಗಳೂ ಪರಸ್ಪರ ಆರೋಪಗಳಿಗೆ ಆ ವರ್ಷದ ಅತಿ ಹೆಚ್ಚಿನ ಮಳೆ ಹಾಗೂ ಬಿಬಿಎಂಪಿಯ ನಿರ್ಲಕ್ಷ್ಯ ಅವಕಾಶ ಮಾಡಿಕೊಟ್ಟಿತ್ತು. 2022ಕ್ಕೆ ಹೋಲಿಸಿದರೆ 2024ರ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. 2023ರಲ್ಲಿ ಮಳೆಯ ಪ್ರಮಾಣ ಕಡಿಮೆಯಾದ್ದರಿಂದ ಸಮಸ್ಯೆ ಅರಿವು ಬಹಿರಂಗವಾಗಲಿಲ್ಲ.

ಈ ವರ್ಷ ಮಳೆಗಾಲದಲ್ಲಿ ವಾಡಿಕೆಯಷ್ಟು ಮಳೆಯಾದರೆ ಅಥವಾ ಒಂದೇ ದಿನ ಸುಮಾರು 80 ಮಿ.ಮೀಯಿಂದ 100 ಮಿ.ಮೀ ಮಳೆಯಾದರೆ ಅದನ್ನು ತಡೆದುಕೊಳ್ಳುವ ಶಕ್ತಿ ಇನ್ನೂ ಬೆಂಗಳೂರು ಪಡೆದುಕೊಂಡಿಲ್ಲ. ಏಕೆಂದರೆ ರಾಜಕಾಲುವೆಗಳ ನಿರ್ಮಾಣ ಅವುಗಳ ಒತ್ತುವರಿ ತೆರವು ತಗ್ಗುಪ್ರದೇಶಗಳ ಅಭಿವೃದ್ಧಿ ಕಾರ್ಯ ಇನ್ನೂ ಆಗಿಲ್ಲ.

‘ಈ ಎಲ್ಲ ಕ್ರಮಗಳನ್ನು ಕೈಗೊಂಡು ಮುಂದಿನ ವರ್ಷ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಮುಖ್ಯಮಂತ್ರಿಯಿಂದ ಹಿಡಿದು ಜನಪ್ರತಿನಿಧಿಗಳು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರು. ಆದರೆ ವಾಸ್ತವದಲ್ಲಿ ಇದು ಇನ್ನೂ ಕಾರ್ಯಗತಗೊಂಡಿಲ್ಲ. ರಾಜಕಾಲುವೆ ಹಾಗೂ ಕೆರೆಗಳ ಒತ್ತುವರಿ ತೆರವುಗೊಳಿಸುವುದಾಗಿ ಅವಧಿ ಸಹಿತ ಕ್ರಿಯಾಯೋಜನೆಯನ್ನು ಹೈಕೋರ್ಟ್‌ಗೆ ಬಿಬಿಎಂಪಿ ಸಲ್ಲಿಸಿತ್ತು. ಈ ಕ್ರಿಯಾಯೋಜನೆಯ ಅವಧಿ ಮೀರಿ ಮಳೆಗಾಲ ಸಮೀಪಿಸುತ್ತಿದ್ದರೂ ಒತ್ತುವರಿ ತೆರವುಗೊಳಿಸುವ ಪ್ರಕ್ರಿಯೆಯನ್ನೇ ಬಿಬಿಎಂಪಿ ಆರಂಭಿಸಿಲ್ಲ. ಹೀಗಾಗಿ ಈ ಬಾರಿ ಮಳೆಗಾಲದಲ್ಲಿ ಸಮಸ್ಯೆಗೆ ಕಟ್ಟಿಟ್ಟ ಬುತ್ತಿಯಂತೆ ಕಾಯುತ್ತಿದೆ.

ತ್ಯಾಜ್ಯ ಹೊಸ ಯೋಜನೆಗಳೂ ಸ್ಥಗಿತ!

ನಗರದಲ್ಲಿ ತ್ಯಾಜ್ಯ ನಿರ್ವಹಣೆಗೆ ಎರಡನೇ ಹಂತದ ವರ್ಗಾವಣೆ ಕೇಂದ್ರ (ಎಸ್‌ಟಿಎಸ್‌) ಮಿನಿ ಟ್ರಾನ್ಸ್‌ಫರ್‌ ಸ್ಟೇಷನ್‌ (ಎಂಟಿಎಸ್‌) ಯೋಜನೆಗಳು ವರ್ಷಗಳಿಂದ ಅನುಷ್ಠಾನವಾಗದೆ ಗೊಂದಲದಲ್ಲೇ ಮುಳುಗಿವೆ. ಎಸ್‌ಟಿಎಸ್‌ ಎಂಟಿಎಸ್‌ಗಳಿಂದ ಸ್ಥಳೀಯ ಕಸ ಅದೇ ಪ್ರದೇಶದಲ್ಲಿ ವಿಂಗಡಣೆಯಾಗಿ ಸಾಗಾಟವಾಗುತ್ತಿದೆ. ಇದರಿಂದ ರಸ್ತೆಯಲ್ಲಿ ಕಸದ ವರ್ಗಾವಣೆ ಸುರಿಯುವಿಕೆ ಇರುವುದಿಲ್ಲ. ಹೊಸ ಪ್ಯಾಕೇಜ್‌ಗಳು ಬರುತ್ತವೆ ಎಂದು ಎರಡು ವರ್ಷಗಳಿಂದ ಬಿಬಿಎಂಪಿ ಹೇಳುತ್ತಲೇ ಇದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್‌) ಎಂಬ ಕಂಪನಿಯನ್ನೇ ಸ್ಥಾಪಿಸಿದ್ದು ಅದಕ್ಕೆ ನೂರಾರು ಕೋಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಆದರೆ ಅನುಷ್ಠಾನ ಮಾತ್ರ ಇನ್ನೂ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT