ಶುಕ್ರವಾರ, ಏಪ್ರಿಲ್ 16, 2021
21 °C
ಎರಡೂ ಕಟ್ಟಡಗಳಿಗೆ ‘ಎನ್‌ಒಸಿ’ ಇಲ್ಲ

ಪುಲಿಕೇಶಿನಗರದ ಕಟ್ಟಡ ದುರಂತ ಪ್ರಕರಣ: ಸ್ಮಶಾನದ ಬಾವಿ ಮುಚ್ಚಿ ನಿರ್ಮಿಸಿದ್ದ ಕಟ್ಟಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪುಲಿಕೇಶಿನಗರ ಸಮೀಪದ ಕಾಕ್ಸ್‌ಟೌನ್‌ ಸ್ಮಶಾನದಲ್ಲಿದ್ದ ಬಾವಿಯನ್ನು ಮುಚ್ಚಿ, ಅದರ ಮೇಲೆಯೇ ಕಟ್ಟಡಗಳನ್ನು ನಿರ್ಮಿಸಲಾಗಿತ್ತು ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ.

ದಂಪತಿ ಸೇರಿದಂತೆ ಐವರನ್ನು ಬಲಿ ಪಡೆದ ಕಾಕ್ಸ್‌ಟೌನ್‌ನಲ್ಲಿರುವ ನಿರ್ಮಾಣ ಹಂತದ ನಾಲ್ಕು ಅಂತಸ್ತಿನ ಅಪಾರ್ಟ್‌
ಮೆಂಟ್ ಹಾಗೂ ‘ಸಾಯಿ ಆದಿ ಅಂಬಲ್’ ಅಪಾರ್ಟ್‌ಮೆಂಟ್‌ ಬೇಸ್‌ಮೆಂಟ್‌ಗಳು ಮಂಗಳವಾರ ತಡರಾತ್ರಿ ಕುಸಿದು ಬಿದ್ದಿತ್ತು. ಅವಶೇಷಗಳಡಿ ಸಿಲುಕಿ ಐವರು ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ದುರಂತಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡುತ್ತಿದ್ದಾರೆ.

‘ಕಟ್ಟಡದ ಜಾಗದಲ್ಲಿ ಸ್ಮಶಾನ ಹಾಗೂ ಬಾವಿ ಇತ್ತು ಎಂಬುದಕ್ಕೆ ಇಂದಿಗೂ ಕುರುಹುಗಳಿವೆ. ಆ ಬಗ್ಗೆ ಕೆಲ ಸ್ಥಳೀಯರ ಹೇಳಿಕೆಯನ್ನೂ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಾವಿಯೊಳಗೆ ಸದಾಕಾಲ ನೀರು ಜಿನುಗುತ್ತಿತ್ತು. ಅಂಥ ಬಾವಿಯನ್ನು ಅವೈಜ್ಞಾನಿಕವಾಗಿ ಮುಚ್ಚಿ, ಅದೇ ಜಾಗವನ್ನು ಸಮತಟ್ಟು ಮಾಡಿ ಕಟ್ಟಡ ನಿರ್ಮಿಸಲಾಗಿತ್ತು ಎಂಬುದು ಇದುವರೆಗಿನ ತನಿಖೆಯಿಂದ ಗೊತ್ತಾಗಿದೆ’ ಎಂದು ಮಾಹಿತಿ ನೀಡಿದರು. 

ಮೊದಲಿಗೆ ಕುಸಿದಿದ್ದು ಅಪಾರ್ಟ್‌ಮೆಂಟ್: ‘ಸಾಯಿ ಆದಿ ಅಂಬಲ್’ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ ಮೊದಲಿಗೆ ಕುಸಿದುಬಿದ್ದಿತ್ತು. ನಂತರವೇ ಪಕ್ಕದ ನಿರ್ಮಾಣ ಹಂತದ ಕಟ್ಟಡದ ಬೇಸ್‌ಮೆಂಟ್ ಕುಸಿದಿದೆ’ ಎಂದು ಪೊಲೀಸರು ಹೇಳಿದರು.

‘ಎರಡೂ ಕಟ್ಟಡಗಳ ಮಾಲೀಕರು, ನಿರ್ಮಾಣದ ಹೊಣೆ ಹೊತ್ತಿದ್ದವರು ಹಾಗೂ ಅನುಮತಿ ನೀಡಿದ ಬಿಬಿಎಂಪಿ ಎಂಜಿನಿಯರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಲ್ಲರನ್ನೂ ವಿಚಾರಣೆ ನಡೆಸಬೇಕಿದೆ’ ಎಂದರು.

ಎರಡೂ ಕಟ್ಟಡಗಳಿಗೆ ‘ಎನ್‌ಒಸಿ’ ಇಲ್ಲ: ‘ದುರಂತ ಸಂಭವಿಸಿರುವ ಎರಡೂ ಕಟ್ಟಡಗಳಿಗೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದಿರಲಿಲ್ಲ’ ಎಂಬ ಸಂಗತಿ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ್ದ ಅಗ್ನಿಶಾಮಕ ದಳದ ಅಧಿಕಾರಿಗಳು ದುರಂತದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

‘ನಿರ್ಮಾಣ ಹಂತದ ಕಟ್ಟಡ ಹಾಗೂ ‘ಸಾಯಿ ಆದಿ ಅಂಬಲ್’ ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಾಣಕ್ಕೆ ಇಲಾಖೆಯಿಂದ ಯಾವುದೇ ಎನ್‌ಒಸಿ ಪಡೆದಿಲ್ಲ. ದುರಂತದ ಬಗ್ಗೆ ವಿಸ್ತ್ರತ ತನಿಖೆ ನಡೆಸಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದು’ ಎಂದು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಡಿಐಜಿ ಎಸ್‌.ಎನ್. ಸಿದ್ರಾಮಪ್ಪ ‘ಪ್ರಜಾವಾಣಿ’ಗೆ ಹೇಳಿದರು.

ಬಿಬಿಎಂಪಿ ಎಂಜಿನಿಯರ್‌ನಿಂದ ಅನುಮತಿ: ‘ನಾಲ್ಕು ವರ್ಷಗಳ ಹಿಂದೆಯೇ ‘ಸಾಯಿ ಆದಿ ಅಂಬಲ್’ ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಿಸಲಾಗಿತ್ತು. ಅದರ ಪಕ್ಕವೇ ಈಗ ಹೊಸ ಕಟ್ಟಡ ತಲೆ ಎತ್ತಿತ್ತು. ಎರಡೂ ಕಟ್ಟಡಗಳ ನಿರ್ಮಾಣಕ್ಕೆ ಬಿಬಿಎಂಪಿ ಎಂಜಿನಿಯರ್  ಅನುಮತಿ ಕೊಟ್ಟಿದ್ದಾರೆ.

15 ಮೀಟರ್‌ಗಿಂತ ಎತ್ತರವಿರುವ ಕಟ್ಟಡಗಳ ನಿರ್ಮಾಣಕ್ಕೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯುವುದು ಕಡ್ಡಾಯ. ಅಂಥ ಎನ್‌ಒಸಿಯನ್ನು ಪರಿಶೀಲನೆ ನಡೆಸದೇ ಬಿಬಿಎಂಪಿ ಎಂಜಿನಿಯರ್ ಅನುಮತಿ ಕೊಟ್ಟಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಸಹಾಯಕ ಎಂಜಿನಿಯರ್ ಅಮಾನತು’ 
‘ಎರಡು ಅಂತಸ್ತಿನ ಕಟ್ಟಡ ನಿರ್ಮಿಸಲು ಪರವಾನಗಿ ಪಡೆದು, ಮೂರು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿತ್ತು. ನಿಯಮ ಉಲ್ಲಂಘಿಸಿದ್ದಕ್ಕಾಗಿ ಮಾಲೀಕರಿಗೆ ನೋಟಿಸ್ ಸಹ ನೀಡಲಾಗಿತ್ತು’ ಎಂದು ಬಿಬಿಎಂಪಿ ಪೂರ್ವ ವಲಯದ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಟ್ಟಡ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳದೇ ಕರ್ತವ್ಯಲೋಪ ಎಸಗಿದ ಆರೋಪದಡಿ ವಾರ್ಡ್‌ ನಂಬರ್ 59ರ ಸಹಾಯಕ ಎಂಜಿನಿಯರ್ ಶ್ರೀಕಾಂತ್ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಹೇಳಿದರು. 

‘ಎರಡೂ ಕಟ್ಟಡಗಳಿಗೆ ಅಗ್ನಿಶಾಮಕ ಇಲಾಖೆಯಿಂದ ಎನ್‌ಒಸಿ ಪಡೆಯುವ ಅಗತ್ಯವಿಲ್ಲ’ ಎಂದು ಅವರು ಹೇಳಿದರು.

ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭ
ಬೇಸ್‌ಮೆಂಟ್‌ ಕುಸಿದು ಬಿದ್ದು ವಾಲಿರುವ ಎರಡೂ ಕಟ್ಟಡಗಳ ತೆರವು ಕಾರ್ಯಾಚರಣೆ ಗುರುವಾರದಿಂದ ಆರಂಭಗೊಂಡಿದೆ.

ಅವಶೇಷಗಳಡಿ ಸಿಲುಕಿದ್ದ ಐವರ ಮೃತದೇಹಗಳನ್ನು ಹೊರತೆಗೆದ ಅಗ್ನಿಶಾಮಕ ದಳದ ಸಿಬ್ಬಂದಿ, ಕಟ್ಟಡ ತೆರವಿಗೆ ಸೂಚನೆ ನೀಡಿದ್ದರು. ಅದರನ್ವಯ ಬಿಬಿಎಂಪಿ ಸಿಬ್ಬಂದಿ ತೆರವು ಕೆಲಸ ಶುರು ಮಾಡಿದ್ದಾರೆ.

‘ಸಾಯಿ ಆದಿ ಅಂಬಲ’ ಅಪಾರ್ಟ್‌ಮೆಂಟ್‌ನ ನಿವಾಸಿಗಳು, ಗುರುವಾರ ಬೆಳಿಗ್ಗೆ ಸ್ಥಳದಲ್ಲಿ ಸೇರಿದ್ದರು. ಏಣಿ ಸಹಾಯದಿಂದ ಕಟ್ಟಡದೊಳಗೆ ಹೋಗಿದ್ದ ಕೆಲ ನಿವಾಸಿಗಳು, ತಮ್ಮ ಫ್ಲ್ಯಾಟ್‌ನಲ್ಲಿದ್ದ ವಸ್ತುಗಳನ್ನು ಹೊರಗೆ ತಂದರು. ಸಿಬ್ಬಂದಿಯೂ ಅವರಿಗೆ ನೆರವಾದರು.

ಕಟ್ಟಡದ ಎದುರಿನ ರಸ್ತೆಯಲ್ಲೇ ಸಾಮಗ್ರಿಗಳ ರಾಶಿ ಜೊತೆಗೆಯೇ ನಿವಾಸಿಗಳು ನಿಂತುಕೊಂಡಿದ್ದ ದೃಶ್ಯಗಳು ಕಂಡುಬಂದವು. ಅಕ್ಕ–ಪಕ್ಕದ ಕಟ್ಟಡಗಳಲ್ಲಿದ್ದ ನಿವಾಸಿಗಳು ಸಹ ಫ್ಲ್ಯಾಟ್‌ ಖಾಲಿ ಮಾಡಿಕೊಂಡು ಹೋದರು.

ದುರಂತ ಸಂಭವಿಸಿದ ಕಟ್ಟಡಗಳ ವಿವರ:

ನಿರ್ಮಾಣ ಹಂತದ ಕಟ್ಟಡ: ನಿವೇಶನದ ಮಾಲೀಕರು; ಮೊಹಮ್ಮದ್ ಸೋಯಬ್, ಮೊಹಮ್ಮದ್ ಇಮ್ತಿಯಾಜ್

ನಿರ್ಮಾಣದಾರರು: ಸೈಯದ್

‘ಸಾಯಿ ಆದಿ ಅಂಬಲ‘ ಅಪಾರ್ಟ್‌ಮೆಂಟ್: ನಿವೇಶನ ಮಾಲೀಕರು: ಸಿ.ಎ. ರುದ್ರಾಣಿ


ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ್ದ ಬಿಬಿಎಂಪಿ ಅಧಿಕಾರಿಗಳು ಎರಡೂ ಕಟ್ಟಡಗಳ ತೆರವು ಕಾರ್ಯಾಚರಣೆ ಸಂಬಂಧ ಚರ್ಚಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು