ಬೆಂಗಳೂರು: ರಾಜಧಾನಿಯಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯವಾಗಿದ್ದು, ಬೈಕ್ ಸವಾರರು ಹಾಗೂ ವಾಹನ ಚಾಲಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ಎರಡು ವರ್ಷಗಳ ಹಿಂದೆ ಈ ಮಾಫಿಯಾವು ನಗರದ ಹಲವು ಕಡೆ ವ್ಯಾಪಿಸಿತ್ತು. ಸಂಚಾರ ಪೊಲೀಸರ ಬಿಗಿಯಾದ ಕ್ರಮ ಹಾಗೂ ಸಂಶಯಾಸ್ಪದ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇಟ್ಟಿದ್ದರಿಂದ ಸ್ವಲ್ಪಮಟ್ಟಿಗೆ ಪಂಕ್ಚರ್ ಮಾಫಿಯಾ ನಿಯಂತ್ರಣಕ್ಕೆ ಬಂದಿತ್ತು. ಈಗ ಮತ್ತೆ ತಲೆಯೆತ್ತಿದ್ದು, ಎಲ್ಲೆಂದರಲ್ಲಿ ವಾಹನಗಳು ಪಂಕ್ಚರ್ ಆಗುತ್ತಿವೆ.
ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಮೇಲ್ಸೇತುವೆ– ಕೆಳಸೇತುವೆಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಈ ಮಾರ್ಗದ ಅಲ್ಲಲ್ಲಿ ಬೈಕ್, ಕಾರು, ಬಸ್, ಲಾರಿ ಹಾಗೂ ಟ್ರಕ್‌ಗಳು ಪಂಕ್ಚರ್ ಆಗಿ ನಿಲ್ಲುತ್ತಿವೆ. ಇದಕ್ಕೆ ಪಂಕ್ಚರ್ ಮಾಫಿಯಾವೇ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ.
ಇತ್ತೀಚೆಗೆ ಜಾಲಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕುವೆಂಪು ವೃತ್ತದ ಕೆಳಸೇತುವೆಯಲ್ಲಿ ಅಪಾರ ಪ್ರಮಾಣದ ಮೊಳೆಗಳು ಬಿದ್ದಿದ್ದವು. ರಾತ್ರೋರಾತ್ರಿ ಒಂದು ಕೆ.ಜಿಯಷ್ಟು ಮೊಳೆಗಳನ್ನು ಕೆಳಸೇತುವೆ ಮಾರ್ಗದ ಉದ್ದಕ್ಕೂ ಎಸೆದಿದ್ದರು. ಆ ಮಾರ್ಗದಲ್ಲಿ ತೆರಳಿದ ವಾಹನಗಳು ಪಂಕ್ಚರ್ ಆಗುತ್ತಿದ್ದವು. ಸಂಚಾರ ಪೊಲೀಸರೇ ಮೊಳೆಗಳನ್ನು ಹೆಕ್ಕಿದ್ದರು. ಈಗ ಮತ್ತೆ ಹಲವು ಕಡೆ ಮೊಳೆ ಎಸೆದು ವಾಹನಗಳನ್ನು ಪಂಕ್ಚರ್ ಮಾಡಲಾಗುತ್ತಿದೆ. ಇದರ ಹಿಂದೆ ಪಂಕ್ಚರ್ ಅಂಗಡಿಯವರ ಕೈವಾಡವಿದೆ ಎಂದು ಹಲವು ವಾಹನ ಸವಾರರು ಅಳಲು ತೋಡಿಕೊಂಡಿದ್ದಾರೆ.
ಕೆಲವೇ ಮೀಟರ್ ದೂರದಲ್ಲಿ ಅಂಗಡಿ: ಕೆಲವು ನಿಗದಿತ ಸ್ಥಳಗಳಲ್ಲೇ ವಾಹನಗಳು ದಿಢೀರ್ ಪಂಕ್ಚರ್ ಆಗುತ್ತಿವೆ. ಹೊಸ ಟೈರ್ ಆಗಿದ್ದರೂ ಪಂಕ್ಚರ್ ಆಗುತ್ತಿದೆ. ಪಂಕ್ಚರ್ ಆದ ಸ್ಥಳದ 200ರಿಂದ 300 ಮೀಟರ್ ಅಂತರದಲ್ಲಿ ಪಂಕ್ಚರ್ ಅಂಗಡಿಗಳು ಇರುತ್ತವೆ. ಇದರಿಂದ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ ಎಂದು ವಾಹನ ಸವಾರ ಸುಂಕದಕಟ್ಟೆಯ ಶಿವರಾಜ್ ಹೇಳುತ್ತಾರೆ.
ಯಲಹಂಕ, ನಾಗವಾರ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ಹೊರವರ್ತುಲ ರಸ್ತೆಗಳಲ್ಲಿ ವಾಹನಗಳು ಪಂಕ್ಚರ್ ಆಗಿ ನಿಲ್ಲುವುದು ಸಾಮಾನ್ಯವಾಗಿದೆ. ಇದರಿಂದ ವಾಹನ ದಟ್ಟಣೆಗೂ ಕಾರಣವಾಗುತ್ತಿದೆ. ಒಂದೇ ಸ್ಥಳದಲ್ಲಿ ವಾಹನಗಳು ಪಂಕ್ಚರ್ ಆಗಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಚಾಲಕರು ದೂರಿದ್ದಾರೆ.
ನಗರದಲ್ಲಿ ನಿತ್ಯವೂ 50ಕ್ಕೂ ಹೆಚ್ಚು ವಾಹನಗಳು ಮೊಳೆಯಿಂದ ಪಂಕ್ಚರ್ ಆಗುತ್ತಿದ್ದು, ಈ ಸಂಬಂಧ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಈ ಮಾಫಿಯಾದ ವಿರುದ್ಧ ಕ್ರಮ ಆಗುತ್ತಿಲ್ಲ ಎಂದು ವಾಹನ ಚಾಲಕರು ದೂರಿದ್ದಾರೆ.
‘ನಿತ್ಯ ಕ್ಯಾಬ್ ಒಡಿಸಿದರೆ ನಮ್ಮ ಕುಟುಂಬದ ಜೀವನ ನಡೆಯುತ್ತದೆ. ಪ್ರತಿ ತಿಂಗಳು ಒಂದೆರೆಡು ಬಾರಿ ಪಂಕ್ಚರ್ ಆಗುತ್ತಿದೆ. ಇದಕ್ಕೂ ಹಣವನ್ನು ಖರ್ಚು ಮಾಡಬೇಕಿದೆ. ಪಂಕ್ಚರ್ ಹಾಕಿಸುವ ವೇಳೆ ಮೊಳೆ ಪತ್ತೆಯಾಗುತ್ತಿದೆ’ ಎಂದು ಕ್ಯಾಬ್ ಚಾಲಕ ಸಂಗಮೇಶ್ ಹಿರೇಮಠ್ ಅಳಲು ತೋಡಿಕೊಂಡರು.
ಹೆಬ್ಬಾಳ, ನಾಗವಾರ, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಒಳರಸ್ತೆಗಳು, ಮೆಜೆಸ್ಟಿಕ್, ಕಾಟನ್‌ಪೇಟೆ, ಚಾಮರಾಜಪೇಟೆ, ಹೆಸರಘಟ್ಟ ರಸ್ತೆ, ಸುಂಕದಕಟ್ಟೆ, ಬಾಗಲೂರು ಭಾಗದಲ್ಲಿ ಈ ಮಾಫಿಯಾ ಸಕ್ರಿಯವಾಗಿದೆ. ಒಳರಸ್ತೆ, ಮೇಲ್ಸೇತುವೆ ಹಾಗೂ ಕೆಳಸೇತುವೆಗಳಲ್ಲಿ ಕಬ್ಬಿಣದ ಮೊಳೆಗಳನ್ನು ರಾತ್ರಿ ವೇಳೆ ಕಿಡಿಗೇಡಿಗಳು ತಂದು ಸುರಿದು ಪರಾರಿ ಆಗುತ್ತಿದ್ದಾರೆ. ಅಂತವರನ್ನು ಪತ್ತೆಹಚ್ಚಿ ಕ್ರಮ ತೆಗೆದುಕೊಳ್ಳಬೇಕು ಎಂದು ಸವಾರ ಅಜಿತ್ ಹೇಳಿದರು.
ದುಡಿಮೆಯ ಸ್ವಲ್ಪ ಹಣವನ್ನು ಪ್ರತಿ ತಿಂಗಳು ಪಂಕ್ಚರ್ ಅಂಗಡಿಯವರಿಗೆ ನೀಡಲು ಮೀಸಲಿಡುವ ಪರಿಸ್ಥಿತಿಯಿದೆ. ಈ ಮಾಫಿಯಾಕ್ಕೆ ಕಡಿವಾಣ ಹಾಕಬೇಕು–ಸುರೇಶ್ ಡೆಲಿವರಿ ಬಾಯ್
ಮಾಫಿಯಾದ ಬಿಸಿ ಬಿಎಂಟಿಸಿ ಬಸ್‌ಗಳಿಗೂ ತಟ್ಟಿದೆ. ಮೊದಲೇ ಬಸ್ ಟೈರ್‌ಗಳು ಸವೆದಿರುತ್ತವೆ. ಅದರಲ್ಲೇ ಹೇಗೋ ಬಸ್ ಸಂಚಾರ ನಡೆಸುತ್ತಿರುತ್ತವೆ. ಈ ಮಾಫಿಯಾದಿಂದ ಸಣ್ಣ ಮೊಳೆ ಹೊಕ್ಕಿದರೂ ಬಸ್‌ನ ಟೈರ್ ಪಂಕ್ಚರ್ ಆಗಿ ನಿಲ್ಲುತ್ತಿವೆ. ಕಳೆದ ಆರು ತಿಂಗಳಲ್ಲಿ 482 ಬಿಎಂಟಿಸಿ ಬಸ್ಗಳು ಪಂಕ್ಚರ್ ಆಗಿವೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ. ಜನವರಿಯಲ್ಲಿ 92 ಫೆಬ್ರುವರಿಯಲ್ಲಿ 86 ಮಾರ್ಚ್‌ನಲ್ಲಿ 74 ಏಪ್ರಿಲ್‌ನಲ್ಲಿ 72 ಮೇನಲ್ಲಿ 82 ಜೂನ್‌ನಲ್ಲಿ 76 ಸೇರಿ 482 ಬಸ್ ಟೈರ್ ಪಂಕ್ಚರ್ ಆಗಿವೆ. ಇದಕ್ಕೆ ಈ ಮಾಫಿಯಾ ಕಾರಣವಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.