ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿಗಳ ಮೇಲೂ ಇರಲಿ ಅಂತಃಕರಣ: ಕ್ಯೂಪಾ ಸಂಸ್ಥೆ ಜೊತೆ ಸೇರಿ ಪ್ರಜಾವಾಣಿ ಅಭಿಯಾನ

Last Updated 26 ಅಕ್ಟೋಬರ್ 2021, 4:40 IST
ಅಕ್ಷರ ಗಾತ್ರ

ಬೆಂಗಳೂರು: ವಾಸಕ್ಕೆ ಸುರಕ್ಷಿತ ನೆಲೆ ಇಲ್ಲ, ತಿನ್ನಲು ಆಹಾರ ಸಿಗುವ ಖಾತರಿ ಇಲ್ಲ, ಅನುಕ್ಷಣವೂ ಯಾವಾಗ ಯಾರಿಂದ ದಾಳಿ ನಡೆಯುತ್ತದೆಯೇನೋ ಎಂಬ ಭೀತಿ, ರಸ್ತೆಯಲ್ಲಿ ಶರವೇಗದಲ್ಲಿ ಸಾಗಿಬರುವ ವಾಹನಗಳ ಚಕ್ರಗಳಡಿ ಸಿಲುಕುವ ಕಳವಳ.... ಇಷ್ಟೆಲ್ಲ ಅಭದ್ರತೆ–ನೋವುಗಳನ್ನು ಬಚ್ಚಿಟ್ಟುಕೊಂಡಿರುವ ಬೀದಿ ಪ್ರಾಣಿಗಳು ನಮ್ಮ ದೈನಂದಿನ ಬದುಕಿನಲ್ಲೂ ಒಡನಾಡಿಗಳು. ನಾವು ‘ಮನುಷ್ಯರು’ ಕೊಂಚವೇ ಕೊಂಚ ದಯೆ ತೋರಿದರೂ ಅವುಗಳ ಬದುಕಿನ ಚಿತ್ರಣವೇ ಬದಲಾದೀತು.

ಜನರು ತೋರಿಸುವ ಪ್ರೀತಿಯು ಬೀದಿ ಪ್ರಾಣಿಗಳೂ ನೆಮ್ಮದಿಯ, ಆತಂಕರಹಿತ ಬದುಕನ್ನೂ ಕಟ್ಟಿಕೊಳ್ಳಲು ನೆರವಾಗುತ್ತದೆ. ತಮಗೆ ತೋರಿಸುವ ಪ್ರೀತಿಗಿಂತ ಹತ್ತಾರು ಪಟ್ಟು ಅಧಿಕ ಪ್ರೀತಿಯನ್ನು ಅವು ಮರಳಿಸಬಲ್ಲವು. ಮೂಕ ಜೀವಿಗಳನ್ನೂ ಆದರದಿಂದ ನಡೆಸಿಕೊಂಡಿದ್ದೇ ಆದರೆ, ಅವುಗಳು ಕೂಡಾ ಎಲ್ಲರ ಬದುಕಿನಲ್ಲೂ ಸಂತಸದ ಸೆಲೆ ತುಂಬಬಲ್ಲವು. ಬಾಲ ಅಲ್ಲಾಡಿಸುತ್ತಾ, ಕುಣಿಯುತ್ತಾ ಖುಷಿ ಹಂಚಿಕೊಳ್ಳುವ ಅವು ತಮ್ಮತ್ತ ಕರುಣೆತೋರುವವರ ಮನಸ್ಸಿನಲ್ಲೂ ಉಲ್ಲಾಸ ಮೂಡಿಸಬಲ್ಲವು.

ಬೀದಿ ಪ್ರಾಣಿಗಳನ್ನು ದ್ವೇಷಿಸುವ ಜನರ ದೃಷ್ಟಿಕೋನ ಬದಲಾಯಿಸುವ ಉದ್ದೇಶದಿಂದ ಹಾಗೂ ಬೀದಿ ನಾಯಿಗಳ ಬಗ್ಗೆ ಕಾಳಜಿ ವಹಿಸುವ ಜನರು ಮತ್ತು ಸಂಸ್ಥೆಗಳ ಜೊತೆ ಕೈಜೋಡಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ‘ಪ್ರಜಾವಾಣಿ’ಯು ಕ್ಯೂಪಾ ಸಂಸ್ಥೆ ಜೊತೆ ಸೇರಿ ಅಭಿಯಾನ ಆರಂಭಿಸಿದೆ.

1991ರಲ್ಲಿ ಆರಂಭವಾದ ಕ್ಯೂಪಾ ಬೀದಿ ನಾಯಿಗಳ ಬಗ್ಗೆ ಕಾಳಜಿ ವಹಿಸಲು ಯಾವುದೇ ಸಂಸ್ಥೆಯೂ ಮುಂದೆ ಬಾರದ ದಿನಗಳಿಂದಲೇ ಅವುಗಳ ಹಕ್ಕುಗಳ ಬಗ್ಗೆ ಹಾಗೂ ಅವುಗಳಿಗೂ ನೆಮ್ಮದಿಯ ಬದುಕು ಕಲ್ಪಿಸುವ ಬಗ್ಗೆ ಹೋರಾಟ ನಡೆಸುತ್ತಾ ಬಂದಿದೆ. ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ವೈಜ್ಞಾನಿಕ ಸ್ಪರ್ಶ ನೀಡುವುದು, ಬೀದಿನಾಯಿಗಳ ದತ್ತು ಸ್ವೀಕಾರ ಮುಂತಾದ ಹತ್ತು ಹಲವು ಕಾರ್ಯಕ್ರಮಗಳು ನಗರದ ಮೂಕ
ಜೀವಿಗಳ ಯಾತನೆಯನ್ನೂ ಒಂದಿಷ್ಟು ಕಡಿಮೆ ಮಾಡುವಲ್ಲಿ ಯಶಸ್ವಿಯೂ ಆಗಿದೆ. ಕ್ಯೂಪಾದಂತಹ ಅನೇಕ ಸಂಸ್ಥೆಗಳು ಈಗ ಇಂತಹ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.

ಬೀದಿ ಪ್ರಾಣಿಗಳ ಬದುಕಿನಲ್ಲೂ ಭರವಸೆ ಮೂಡಿಸುವ ಕಾರ್ಯವನ್ನು ಇನ್ನಷ್ಟು ವಿಸ್ತರಿಸಲು ‘ಪ್ರಜಾವಾಣಿ’ಯು ಕ್ಯೂಪಾ ಜೊತೆ ಸೇರಿ ಹಮ್ಮಿಕೊಂಡಿರುವ ಈ ಅಭಿಯಾನದಲ್ಲಿ ತಾವೂ ಕೈಜೋಡಿಸಬಹುದು.

ಸ್ವಯಂಸೇವಕರಾಗುವ ಮೂಲಕ ಬೀದಿ ಪ್ರಾಣಿಗಳ ರಕ್ಷಿಸಲು, ಆರೈಕೆ ಮಾಡಲು ಹಾಗೂ ಅವುಗಳ ಮೇಲಾಗುವ ದೌರ್ಜನ್ಯ ತಪ್ಪಿಸಲು ನೆರವಾಗಬಹುದು. ಬೀದಿಪಾಲಾದ ಪ್ರಾಣಿಗಳನ್ನು ದತ್ತು ಪಡೆದು ಸಾಕಬಹುದು. ಬೀದಿ ಪ್ರಾಣಿಗಳ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಬಯಸುವಿರಾದರೆ, ಇಲ್ಲಿರುವ ಕೊಂಡಿಯನ್ನು (bit.ly/PVCUPA) ಕ್ಲಿಕ್ಕಿಸಿ ನೋಂದಾಯಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT